ಬೆಂಗಳೂರು: ಪ್ರಾಥಮಿಕ ಶಾಲಾ ಸೇವಾನಿರತ ಪದವೀಧರ ಶಿಕ್ಷಕರ (Graduate Teachers) ಜ್ಯೇಷ್ಠತೆಯ ಸಮಸ್ಯೆ ಸೇರಿದಂತೆ ಇನ್ನಿತರ ಪ್ರಮುಖ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಜತೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಅವರು ರಾಜ್ಯ ಶಿಕ್ಷಕರ ಸಂಘಕ್ಕೆ ಭರವಸೆ ನೀಡಿದ್ದಾರೆ. ಈ ಮೂಲಕ ಶೈಕ್ಷಣಿಕ ವಲಯದ (Education News) ಹಲವು ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿದ್ದಾರೆ.
ರಾಜ್ಯದ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (Karnataka State Primary School Teachers Association) ನಿಯೋಗದೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಸಭೆ ನಡೆಸಿ, ಸುದೀರ್ಘವಾಗಿ ಚರ್ಚೆ ನಡೆಸಿದರು.
ಇದನ್ನೂ ಓದಿ: Self Harming : ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿ; ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆ
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಕೆ.ನಾಗೇಶ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ ಅವರು ಶಿಕ್ಷಕರ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.
ಚರ್ಚೆಯ ಪ್ರಮುಖ ಅಂಶಗಳು
⦁ ಸೇವೆಯಲ್ಲಿರುವ ಪದವೀಧರ ಶಿಕ್ಷಕರನ್ನು 6 ರಿಂದ 8ಕ್ಕೆ ವಿಲೀನಗೊಳಿಸುವ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಪ್ರಾಥಮಿಕ ಶಾಲೆಗಳಲ್ಲಿ 15ರಿಂದ 20 ವರ್ಷ ಸೇವೆ ಸಲ್ಲಿಸಿದ ಪದವೀಧರ ಶಿಕ್ಷಕರ ಸೇವಾ ಜೇಷ್ಠತೆಯನ್ನು ಸಂರಕ್ಷಿಸಿ, 6 ರಿಂದ 8ಕ್ಕೆ ನಿಯುಕ್ತಿಗೊಳಿಸುವ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನಿಸುವುದಾಗಿ ಸಚಿವ ಮಧು ಬಂಗಾರಪ್ಪ ಶಿಕ್ಷಕರ ಸಂಘಕ್ಕೆ ಭರವಸೆ ನೀಡಿದರು.
⦁ ರಾಜ್ಯಾದ್ಯಂತ ಮಧ್ಯಂತರ ರಜೆ ಹಾಗೂ ಬೇಸಿಗೆ ರಜೆಗಳಲ್ಲಾದ ವ್ಯತ್ಯಾಸವನ್ನು ಸರಿಪಡಿಸಲು ಇದೇ ವೇಳೆ ಒತ್ತಾಯಿಸಲಾಯಿತು.
⦁ ನೂತನ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಜಿಲ್ಲಾ ಮತ್ತು ತರಬೇತಿ ಸಂಸ್ಥೆಗಳಲ್ಲಿರುವ ಹೆಚ್ಚುವರಿ ಹುದ್ದೆಗಳನ್ನು ನಿಯುಕ್ತಿಗೊಳಿಸಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಈ ವೇಳೆ ತಿಳಿಸಿದರು.
⦁ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಗುರುಗಳು ಹಾಗೂ ಹಿರಿಯ ಮುಖ್ಯಗುರುಗಳ ಹುದ್ದೆಗೆ ಹಾಗೂ ಪ್ರೌಢ ಶಾಲೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ನವೆಂಬರ್ ಅಂತ್ಯದಲ್ಲಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಲಾಯಿತು.
⦁ ರಾಜ್ಯಾದ್ಯಂತ ಶಿಕ್ಷಕರ ವೈದ್ಯಕೀಯ ಬಿಲ್ಲುಗಳ ಮೊತ್ತವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಕ್ರೋಢೀಕರಿಸಿ, ಕಳೆದ ಸಾಲಿನಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ, ರಾಜ್ಯದ ಸಮಸ್ತ ಶಿಕ್ಷಕರಿಗೆ ಬೇಕಾದ ವೈದ್ಯಕೀಯ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ವಿನಂತಿಸಲಾಯಿತು.
⦁ ಮುಖ್ಯ ಗುರುಗಳು ಹಾಗೂ Sಆಒಅ ರವರ ಜಂಟಿ ಖಾತೆಯನ್ನು ಈ ಮೊದಲಿನಂತೆ ನಿರ್ವಹಿಸಲು ಸೂಕ್ತ ಆದೇಶ ಹೊರಡಿಸಲು ಒತ್ತಾಯಿಸಲಾಯಿತು. ಸದರಿ ವಿಷಯಕ್ಕೆ ಸಚಿವರು ಪ್ರತಿಕ್ರಿಯೆ ನೀಡಿ, ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಭಿಪ್ರಾಯ ಕ್ರೋಢೀಕರಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿಸಿದರು.
⦁ ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಯ ಕುರಿತು ಚರ್ಚಿಸಲಾಯಿತು. ಈ ಕುರಿತು ಸಮಗ್ರ ಮಾಹಿತಿಯನ್ನು ಕ್ರೋಢೀಕರಿಸಿ ಮತ್ತೊಂದು ಪ್ರಮುಖ ಸಭೆಯನ್ನು ಜರುಗಿಸಿ ಚರ್ಚಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
⦁ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ಹೊಂದಿದಾಗ ವೇತನ ಬಡ್ತಿಗಳಲ್ಲಿ 10, 15, 20, 25 ಹಾಗೂ 30 ವರ್ಷಗಳ ವೇತನ ಬಡ್ತಿಯಲ್ಲಾಗುವ ವ್ಯತ್ಯಾಸಗಳ ಕುರಿತು ಕೂಡ ಸಿಎಂ ಜತೆ ಚರ್ಚಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
⦁ ರಾಜ್ಯಾದ್ಯಂತ ಮುಂದಿನ ಶೈಕ್ಷಣಿಕ ವರ್ಷದಿಂದ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿಯನ್ನು ಮೊದಲನೇ ಸೆಮಿಸ್ಟರ್‌ನಲ್ಲಿ ನಡೆಸುವ ಬದಲಾಗಿ ಮೊದಲನೇ ಸೆಮಿಸ್ಟರ್‌ನಲ್ಲಿ ಕ್ರೀಡಾಕೂಟ ಹಾಗೂ 2ನೇ ಸೆಮಿಸ್ಟರ್‌ನಲ್ಲಿ ಪ್ರತಿಭಾ ಕಾರಂಜಿಯನ್ನು ನಡೆಸಿ ಮಕ್ಕಳು ಹಾಗೂ ಶಿಕ್ಷಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಲಾಯಿತು.
⦁ ತಾಲೂಕಿಗೊಂದು ಜೂನಿಯರ್ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗಳನ್ನು ಸೃಜಿಸಿ, ದೈಹಿಕ ಶಿಕ್ಷಕರಿಗೆ ಬಡ್ತಿ ನೀಡುವುದು ಹಾಗೂ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಅವರಿಗೂ ಕೂಡ ಬಡ್ತಿ ಅವಕಾಶ ಕೊಡಬೇಕೆಂದು ಒತ್ತಾಯಿಸಲಾಯಿತು.
⦁ ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರ ವೈದ್ಯಕೀಯ ವೆಚ್ಚಗಳನ್ನು ಶಿಕ್ಷಕರ ಕಲ್ಯಾಣ ನಿಧಿಯ ನಿಯಮಗಳಂತೆ ಮಂಜೂರು ಮಾಡುವುದು ಹಾಗೂ ಶಿಕ್ಷಕರ ಸಹಪಠ್ಯ ಚಟುವಟಿಕೆಯನ್ನು ಈ ವರ್ಷ ಮುಂದುವರಿಸಬೇಕೆಂದು ಒತ್ತಾಯಿಸಲಾಯಿತು.
⦁ ಶಿಕ್ಷಕರ ಸಮಾಲೋಚನಾ ಸಭೆಗಳನ್ನು ಶೈಕ್ಷಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
⦁ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಅಭಿಮತ ವರ್ಗಾವಣೆಯನ್ನು ಮಾಡಲು ವಿನಂತಿಸಲಾಯಿತು. ಹಾಗೂ ವಿಜಯನಗರ ಜಿಲ್ಲೆಗೆ ಜಿಲ್ಲಾ ಮತ್ತು ತರಬೇತಿ ಸಂಸ್ಥೆಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಲಾಯಿತು.
ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಬಿ.ಬಿ. ಕಾವೇರಿ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ್, ಪ್ರೌಢ ಶಿಕ್ಷಣ ನಿರ್ದೇಶಕ ಕೃಷ್ಣಾ ಜಿ. ಕರಿಚೆನ್ನನವರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ, ಉಪಾಧ್ಯಕ್ಷರಾದ ಪದ್ಮಲತಾ, ಸಹ ಕಾರ್ಯದರ್ಶಿ ಎಚ್.ಎಸ್. ಚೇತನ್, ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಟಿ. ಕಾಮನಳ್ಳಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಸಿದ್ರಾಮ ಮ. ಲೋಕನ್ನವರ, ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷ ಗಿರೀಶ್, ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪ, ಮಂಡ್ಯ ಜಿಲ್ಲಾ ಅಧ್ಯಕ್ಷ ಜೆ.ವೈ. ಮಂಜುನಾಥ್, ಕೊಡಗು ಜಿಲ್ಲಾ ಕಾರ್ಯದರ್ಶಿ ರಮಾನಂದ, ಎಐಪಿಟಿಎಫ್‌ನ ಮಹಿಳಾ ಸಂಚಾಲಕಿ ರೇಖಾ ದಳವಾಯಿ, ಹಾವೇರಿ ಜಿಲ್ಲಾ ಕಾರ್ಯದರ್ಶಿ ವಿಜಯೇಂದ್ರ ಯತ್ನಳ್ಳಿ, ಕಲಬುರ್ಗಿ ಜಿಲ್ಲೆಯ ಕಾರ್ಯದರ್ಶಿ ಬಾಬು ಮೌರ್ಯ, ಜೇವರ್ಗಿ ತಾಲೂಕು ಕಾರ್ಯದರ್ಶಿ ಮರೆಯಪ್ಪ ಹೊಸಮನಿ, ವಿಜಯಕುಮಾರ ಬಡಿಗೇರ, ಬೆಂಗಳೂರು ಉತ್ತರ ಜಿಲ್ಲೆಯ ನಾಗರಾಜ ಹಾಗೂ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Snake Bite : ಹಾವಿನ ದ್ವೇಷ 12 ವರುಷ! ಕಾಟ ಕೊಟ್ಟಿದ್ದ ಯುವಕನನ್ನು ಕಚ್ಚಿ ಸಾಯಿಸಿತೇ ನಾಗರಹಾವು?
ರಾಜ್ಯ ಸರ್ಕಾರಕ್ಕೆ ಅಭಿನಂದನೆ
ರಾಜ್ಯದಲ್ಲಿ ಸುಮಾರು 30,000 ಶಿಕ್ಷಕರ ವರ್ಗಾವಣೆ ಮಾಡಿದ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ 153 ಕೋಟಿ ರೂಪಾಯಿಗಳ ಶಾಲಾ ಅನುದಾನವನ್ನು ನೀಡಿರುವುದು ಹಾಗೂ ರಾಜ್ಯದ ಸಮಸ್ತ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ನೀಡಿದ್ದಕ್ಕೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಕೆ.ನಾಗೇಶ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ ಅವರು ಅಭಿನಂದನೆಯನ್ನು ಸಲ್ಲಿಸಿದರು.