Site icon Vistara News

Education News | 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ; ಫೇಲ್‌ ಆದರೆ ಮುಂದೇನು?

Vistara Editorial, Let the strengthening government schools

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ನೆಡೆಸಲು ಶಿಕ್ಷಣ ಇಲಾಖೆ ಆದೇಶ (Education News) ಹೊರಡಿಸಿದ ಬೆನ್ನಲ್ಲೇ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಈ ಸಂಬಂಧ ಸ್ಪಷ್ಟನೆ ನೀಡಿದೆ.

ಈ ಪರೀಕ್ಷೆ ನಡೆಸುವ ಸಂಬಂಧ ಡಿ.12 ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, ಪರೀಕ್ಷೆಯ 100 ಅಂಕಗಳಲ್ಲಿ 35ಕ್ಕಿಂತಲೂ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಇನ್ನೂ ಪ್ರಗತಿ ಸಾಧಿಸಬೇಕಿರುವ ವಿದ್ಯಾರ್ಥಿ ಎಂದು ತೀರ್ಮಾನಿಸಿ 2023 ರ ಜೂನ್‌ ಮತ್ತು ಜುಲೈ ತಿಂಗಳ ಅಂತ್ಯದಲ್ಲಿ ಕ್ರಮವಾಗಿ ಪರಿಹಾರ ಬೋಧನೆ ಮಾಡಿ, ಎರಡು ಪೂರಕ ಪರೀಕ್ಷೆಯನ್ನು ಶಾಲಾ (Education News) ಹಂತದಲ್ಲಯೇ ನಡೆಸಿ, ಸಂಬಂಧಿಸಿದ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೊಳಸುವುದು. ಈ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು ಅದೇ ತರಗತಿಯಲ್ಲಿ ಕಲಿಕಾ ಪ್ರಗತಿ ಸಾಧಿಸದ ವಿದ್ಯಾರ್ಥಿ ಎಂದು ಪರಿಗಣಿಸಿ ಅನುತ್ತೀರ್ಣ ಗೊಳಿಸಬಾರದು ಎಂದು ತಿಳಿಸಲಾಗಿತ್ತು.

ಇದೀಗ ಈ ಸುತ್ತೋಲೆಗೆ ಡಿಸೆಂಬರ್‌ 14 ತಿದ್ದುಪಡಿ ಮಾಡಿರುವ ಶಿಕ್ಷಣ ಇಲಾಖೆಯು ಈ ಮೇಲಿನ ವಿವರಣೆಗಳಿಗೆ ಬದಲಾಗಿ “2023ರ ಜೂನ್‌ ಮತ್ತು ಜುಲೈ ತಿಂಗಳುಗಳಲ್ಲಿ ಶಾಲಾ ಹಂತದಲ್ಲಿಯೇ ಪರಿಹಾರ ಬೋಧನೆ
(remedial teaching) ಪ್ರಕ್ರಿಯೆ ಕೈಗೊಂಡು ಕಲಿಕಾ ಸಾಮರ್ಥ್ಯವನ್ನು ಉತ್ತಮಪಡಿಸಲಾಗುವುದು”
ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಹೇಳಿದೆ.

ಮೊದಲ ಸುತ್ತೋಲೆಯಲ್ಲಿರುವ “ಜೂನ್‌ ಮತ್ತು ಜುಲೈ ತಿಂಗಳ ಅಂತ್ಯದಲ್ಲಿ ಅವಶ್ಯಕತೆ ಇದ್ದಲ್ಲಿ ಕ್ರಮವಾಗಿ ಪರಿಹಾರ ಬೋಧನೆ ನೀಡಿ ಶಾಲಾ ಹಂತದಲ್ಲಿ ಪೂರಕ ಪರೀಕ್ಷೆಗಳನ್ನು ನಿರ್ವಹಿಸಿ ಕಲಿಕಾ ಬಲವರ್ಧನೆಗೊಳಿಸಬಹುದಾಗಿದೆ” ಎಂಬುದರ ಬದಲಾಗಿ “ಜೂನ್‌ ಮತ್ತು ಜುಲೈ ತಿಂಗಳುಗಳಲ್ಲಿ ಶಾಲಾ ಹಂತದಲ್ಲಿಯೇ ಪರಿಹಾರ ಬೋಧನೆ (remedial teaching) ಪ್ರಕ್ರಿಯೆ ಕೈಗೊಂಡು ಕಲಿಕಾ ಸಾಮರ್ಥ್ಯವನ್ನು ಉತ್ತಮಪಡಿಸಲಾಗುವುದು” ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ತಿಳಿಸಿದೆ. ಒಟ್ಟಾರೆ ಪಬ್ಲಿಕ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮತ್ತೆ ಪರೀಕ್ಷೆ ನಡೆಸದಿರುವಂತೆ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.

ಕಡ್ಡಾಯ ಶಿಕ್ಷಣಕ್ಕಾಗಿ (Education News) ಮಕ್ಕಳ ಹಕ್ಕು ಕಾಯ್ದೆಯ ಪ್ರಕಾರ ಯಾವುದೇ ಮಕ್ಕಳನ್ನು ಅನುತ್ತೀರ್ಣಗೊಳಿಸಿ, ಒಂದೇ ತರಗತಿಯಲ್ಲಿಟ್ಟುಕೊಳ್ಳುವಂತಿಲ್ಲ. ಅವರಿಗೆ ಅಗತ್ಯ ಶಿಕ್ಷಣ ನೀಡಿ, ಮುಂದಿನ ತರಗತಿಗಳಿಗೆ ಅರ್ಹತೆ ಪಡೆಯುವಂತೆ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಪೂರಕ ಪರೀಕ್ಷೆಯನ್ನು ನಡೆಸುವ ತೀರ್ಮಾನದಿಂದ ಇಲಾಖೆ ಹಿಂದೆ ಸರಿದಿದೆ.

ಏಕೆ ಈ ಪರೀಕ್ಷೆ?
ಪ್ರಸ್ತುತ 2022-23ನೇ ಸಾಲಿನಲ್ಲಿ ಮಕ್ಕಳ ಕಲಿಕಾ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಪ್ರಸ್ತುತ 1ನೇ ತರಗತಿಯಿಂದ 9ನೇ ತರಗತಿವರೆಗೆ ಶಾಲಾ ಹಂತದಲ್ಲಿ ಸಿಸಿಇ ಅಡಿ ಮೌಲ್ಯಾಂಕನ ವಿಶ್ಲೇಷಣೆ (Education News) ಮಾಡುತ್ತಿರುವುದರಿಂದ ಪರೀಕ್ಷೆಗಳನ್ನು ನಿರ್ವಹಿಸುತ್ತಿಲ್ಲವಾದ್ದರಿಂದ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಒಟ್ಟಾರೆಯಾಗಿ ಮಕ್ಕಳ ಕಲಿಕೆಯ ಮಟ್ಟವೇನು? ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ? ಇವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ.

ಆದ್ದರಿಂದ ಎಲ್ಲಾ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು, ಕಲಿಕಾ-ಫಲಗಳನ್ನು ಸಾಮರ್ಥ್ಯಗಳನ್ನಾಧರಿಸಿದ ಏಕರೂಪದ ಸಾಧನಾ ಮತ್ತು ತಂತ್ರ ಬಳಸಿ ಮೌಲ್ಯಮಾಪನ ಮಾಡಿ ವಿಶ್ಲೇಷಣೆ ಮಾಡುವುದು ಅವಶ್ಯವಾಗಿದೆ ಎಂಬ ಕಾರಣಕ್ಕೆ ಇಲಾಖೆಯು ಈ ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಈ ಪರೀಕ್ಷೆ ನಡೆಸುವುದರಿಂದ, ಮುಂದೆ ಮೌಲ್ಯಾಂಕನ (Education News) ವಿಶ್ಲೇಷಣೆ ಮಾಡಿ, ಕಲಿಕಾ ಪ್ರಗತಿ ಕುಂಠಿತವಾಗಿರುವ ವಿಷಯವಾರು, ಶಾಲಾವಾರು, ತಾಲೂಕುವಾರು ವಿಶ್ಲೇಷಣೆ ನಡೆಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ಮತ್ತು ಬೋಧನಾ -ಕಲಿಕಾ ಪ್ರಕ್ರಿಯೆಗಳನ್ನು ರೂಪಿಸಲು ಇಲಾಖೆ ಉದ್ದೇಶಿಸಿದೆ.

ಇದನ್ನೂ ಓದಿ | Education News | 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ; ಪೋಷಕರು, ಖಾಸಗಿ ಶಾಲೆಗಳ ಮಿಶ್ರ ಪ್ರತಿಕ್ರಿಯೆ

Exit mobile version