ನವ ದೆಹಲಿ: ನೀವು ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸಿನೊಂದಿಗೆ ಕಾಲೇಜೊಂದಕ್ಕೆ ಅಡ್ಮಿಷನ್ ಪಡೆಯಲು ಮುಂದಾಗಿದ್ದೀರಿ. ಶುಲ್ಕವನ್ನೂ ಪಾವತಿಸಿದ್ದೀರಿ. ಆದರೆ ನಿಮಗೆ ಮುಂದೆ ಆ ಕೋರ್ಸ್ ಬೇಡವೆನಿಸಿ, ಬೇರೆ ಕಾಲೇಜಿಗೆ ಹೋಗಬಹುದು. ಆಗ ನೀವು ಕಟ್ಟಿದ ಶುಲ್ಕವನ್ನು ಹಿಂದಕ್ಕೆ ಪಡೆಯಲು ಹೋದರೆ ಕಾಲೇಜಿನವರು ಕೊಡದಿರಬಹುದು. ಆದರೆ ಇನ್ನು ಮುಂದೆ ಹಾಗೆ ಮಾಡುವಂತಿಲ್ಲ! ಹೌದು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಈ ಸಂಬಂಧ ಸ್ಪಷ್ಟ ಸೂಚನೆ (Education News) ನೀಡಿದೆ.
2023-24 ಶೈಕ್ಷಣಿಕ ಸಾಲಿನಲ್ಲಿಯೇ ಶುಲ್ಕ ಮರುಪಾವತಿ ನೀತಿಯ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಉನ್ನತ ಶಿಕ್ಷಣ ಸಂಸ್ಥೆ, (Education News) ವಿಶ್ವವಿದ್ಯಾಲಯಗಳಿಗೆ ಯುಜಿಸಿ ನಿರ್ದೇಶನ ನೀಡಿದೆ. ಪ್ರವೇಶವನ್ನು ರದ್ದುಪಡಿಸಿದ ನಂತರ ಅಥವಾ ಪ್ರವಶಾತಿಯಿಂದ ವಿದ್ಯಾರ್ಥಿಗಳು ಹಿಂದೆ ಸರಿದ ನಂತರ ಉನ್ನತ ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಮರುಪಾವತಿ ಮಾಡದಿರುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಅನೇಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಯೋಗವು ಈ ಸೂಚನೆ ನೀಡಿದೆ.
ಇದರಿಂದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಗೊಂದಲಕ್ಕೆ ಬೀಳುವ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಪಾವತಿಸಿ, ಹಣ ಕಳೆದುಕೊಳ್ಳುವ ನಷ್ಟ ತಪ್ಪಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರ್ಯ ನೀಡುವ ಸಲುವಾಗಿ ನಿಗದಿತ ಅವಧಿಯೊಳಗೆ ಶುಲ್ಕದ ಪೂರ್ಣ ಮರುಪಾವತಿಗೆ ಅವಕಾಶ ನೀಡಬೇಕು ಎಂದು ಯುಜಿಸಿ ಈ ಸೂಚನೆಯಲ್ಲಿ ಹೇಳಿದೆ. ಜೂನ್ 27 ರಂದು ನಡೆದ ಯುಜಿಸಿಯ 570 ನೇ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚಿಸಿ ತೀರ್ಮಾನಿಸಲಾಗಿದೆ.
ಈಗಾಗಲೇ ಹೊರಡಿಸಿರುವ ಪ್ರಾಸ್ಪೆಕ್ಟಸ್ ಅಥವಾ ಪ್ರಕಟಣೆಯಲ್ಲಿ ಏನೇ ಹೇಳಲಾಗಿದ್ದರೂ ಮುಂದಿನ ಸೆಪ್ಟೆಂಬರ್ 30 ರವರೆಗಿನ ಎಲ್ಲ ಪ್ರವೇಶ ರದ್ದತಿಯ ಸಂದರ್ಭದಲ್ಲಿ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಬೇಕು. ಅಲ್ಲಿಂದ ಮುಂದಿನ ಅಕ್ಟೋಬರ್ 30ರ ವರೆಗೆ ರದ್ದು ಮಾಡಿದಲ್ಲಿ ಒಂದು ಸಾವಿರ ರೂ. ಮೀರದಂತೆ ಪ್ರೊಸೆಸಿಂಗ್ ಶುಲ್ಕವನ್ನು ಕಡಿತ ಮಾಡಿಕೊಂಡು ಶುಲ್ಕವನ್ನು ಮರುಪಾವತಿಸಬೇಕು ಎಂದು ಯುಜಿಸಿಯು ಸೂಚನೆಯಲ್ಲಿ ಹೇಳಿದೆ.
Read UGC Letter regarding Fee Refund Policy 2023-24
— UGC INDIA (@ugc_india) July 4, 2023
Visit:https://t.co/Zs25TVKyv3 pic.twitter.com/eFJeB8k4yh
ಎಷ್ಟು ಶುಲ್ಕ ಮರುಪಾವತಿಸಲಾಗುತ್ತದೆ?
ಅಧಿಕೃತವಾಗಿ ತಿಳಿಸಲಾದ ಪ್ರವೇಶದ ವೇಳಾಪಟ್ಟಿಯಲ್ಲಿ ಮೊದಲ 15 ದಿನ ಅಥವಾ ಅದಕ್ಕಿಂತ ಹೆಚ್ಚು ಸಮಯದಲ್ಲಿ ಪ್ರವೇಶವನ್ನು ರದ್ದು ಪಡಿಸಿದಲ್ಲಿ ಶೇ. 100 ರಷ್ಟು ಹಿಂದಿರುಗಿಸಬೇಕು. ಪ್ರವೇಶದ ಕೊನೆಯ ದಿನಾಂಕಕ್ಕಿಂತ 15 ದಿನಗಳ ಮೊದಲು ಪ್ರವೇಶವನ್ನು ರದ್ದುಪಡಿಸಿದಲ್ಲಿ ಶೇ.90 ರಷ್ಟು ಹಿಂದಿರುಗಿಸಬೇಕೆಂದು ತಿಳಿಸಲಾಗಿದೆ.
ಪ್ರವೇಶದ ಗಡುವಿನ ನಂತರ 15 ದಿನಗಳು ಅಥವಾ ಅದಕ್ಕಿಂತ ಮೊದಲು ಪ್ರವೇಶವನ್ನು ರದ್ದುಪಡಿಸಿದಲ್ಲಿ ಶೇ.80 ರಷ್ಟು ಹಾಗೂ ಪ್ರವೇಶದ ಗಡುವಿನ 15 ದಿನಗಳ ನಂತರ 30 ದಿನಗಳ ಒಳಗೆ ರದ್ದುಪಡಿಸಿದಲ್ಲಿ ಶೇ.50 ರಷ್ಟನ್ನು ಕಡಿತ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Education Guide : ಜಾಬ್ ಗ್ಯಾರಂಟಿಯ ಎವರ್‌ಗ್ರೀನ್ ಎಂಜಿನಿಯರಿಂಗ್ ಬ್ರಾಂಚ್‌ಗಳಿವು!
ಎಲ್ಲ ಉನ್ನತ ಶಿಕ್ಷಣ (Education News) ಸಂಸ್ಥೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಶುಲ್ಕ ಮರುಪಾವತಿ ನೀತಿಯನ್ನು ಅಳವಡಿಸಿಕೊಳ್ಳಬೇಕು. ಅಲ್ಲದೆ, ಇದಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಯೂಜಿಸಿ ಸೂಚನೆ ನೀಡಿದೆ. ಶುಲ್ಕವನ್ನು ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಮರುಪಾವತಿ ಮಾಡದಿದ್ದಲ್ಲಿ, ಮೂಲ ದಾಖಲೆಗಳನ್ನು ಹಿಂದಿರುಗಿಸದಿದ್ದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದೂ ಆಯೋಗ ಎಚ್ಚರಿಕೆ ನೀಡಿದೆ.