ಬೆಂಗಳೂರು: ಸಿಇಟಿ ಪರೀಕ್ಷೆ (CET Exam) ಬರೆಯುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮತ್ತೊಮ್ಮೆ ಯುಜಿಸಿಇಟಿಗೆ (UGCET) ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದೇ ಕೊನೇ ಅವಕಾಶವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ನೋಂದಣಿ ಮಾಡಿ ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೇ ದಿನವಾಗಿದ್ದು, ಮಾ. 16 ಶುಲ್ಕ ಪಾವತಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ – Karnataka Examination Authority) ಪ್ರಕಟಣೆಯಲ್ಲಿ ತಿಳಿಸಿದೆ.
ಕೆಇಎ ಪ್ರಕಟಣೆಯಲ್ಲಿ ಏನಿದೆ?
ಎಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸ್‌ಗಳು, (ಬಿ.ಎಸ್.ಸಿ (ಆನರ್ಸ್) ಕೃಷಿ, ಬಿ.ಎಸ್.ಸಿ (ಆನರ್ಸ್) (ರೇಷ್ಮೆ ಕೃಷಿ) ಮುಂತಾದ), (ಬಿ.ಎಸ್.ಸಿ (ನರ್ಸಿಂಗ್) ಬಿ.ಫಾರ್ಮಾ, 2ನೇ ವರ್ಷದ ಬಿ-ಫಾರ್ಮಾ ಮತ್ತು ಫಾರ್ಮಾ-ಡಿ ಮುಂತಾದ ಕೋರ್ಸುಗಳಿಗೆ ದಿನಾಂಕ 18-04-2024 ಮತ್ತು 19-04-2024 ರಂದು ನಡೆಸಲಾಗುವ ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಹಲವು ಅಭ್ಯರ್ಥಿಗಳು ಹಾಗೂ ಪೋಷಕರು ಸಲ್ಲಿಸಿರುವ ಮನವಿಗಳನ್ನು ಪರಿಗಣಿಸಿ, ಪ್ರಾಧಿಕಾರವು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ಹಾಗೂ ಅಂತಿಮ ಅವಕಾಶವನ್ನು ನೀಡಿದೆ.
ಇಲ್ಲಿಯವರೆಗೆ ಅರ್ಜಿ ಸಲ್ಲಿಸದಿರುವ ಅಥವಾ ಅರ್ಜಿ ಪೂರ್ಣಗೊಳಿಸದೆ ಇರುವ ಅಥವಾ ಶುಲ್ಕ ಪಾವತಿಸದೆ ಇರುವ ಅಭ್ಯರ್ಥಿಗಳು ದಿನಾಂಕ 12-03-2024 ರ ಬೆಳಗ್ಗೆ 11.00 ರಿಂದ 15-03-2024ರ ರಾತ್ರಿ 11.59 ರವರೆಗೆ ನೋಂದಣಿ ಮಾಡಿ ಅರ್ಜಿ ಸಲ್ಲಿಸಲು ಹಾಗೂ 16-03-2024 ರ ಸಂಜೆ 5.30 ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ. ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಸಂದರ್ಭದಲ್ಲಿ ಮತ್ತೆ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಕೆಇಎ ಹೇಳಿದೆ.
ಅರ್ಜಿದಾರರೇ ಗಮನಿಸಿ!
ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಯುನಾನಿ, ಹೋಮಿಯೋಪತಿ, ಆರ್ಕಿಟೆಕ್ಟರ್, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳು ಸೇರಿದಂತೆ ಇತ್ಯಾದಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅಭ್ಯರ್ಥಿಗಳು ಸಿಇಟಿ-2024ಕ್ಕೆ ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು, ಆನ್‌ಲೈನ್ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ನಂತರದ ದಿನಗಳಲ್ಲಿ ಅರ್ಜಿ ಸಲ್ಲಿಸಲು ಪೋರ್ಟಲ್ ತೆರೆಯಲಾಗುವುದಿಲ್ಲ ಎಂಬುದನ್ನು ಗಮನಿಸಿ ಎಂದು ಅರ್ಜಿದಾರರಿಗೆ ಕೆಇಎ ಸೂಚನೆ ನೀಡಿದೆ.
ಇದನ್ನೂ ಓದಿ: Public Exam : ತಡೆಯಾಜ್ಞೆ ತೆರವು; 5,8,9 ಮತ್ತು11ನೇ ತರಗತಿ ಪಬ್ಲಿಕ್ ಪರೀಕ್ಷೆ ಯಥಾವತ್
ವೃತ್ತಿಪರ ಕೋರ್ಸುಗಳಿಗೆ ನೋಂದಣಿ, ಆನ್‌ಲೈನ್ ಅರ್ಜಿ ಸಲ್ಲಿಸುವುದು ಮತ್ತು ಅರ್ಹತಾ ಷರತ್ತುಗಳ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅರ್ಜಿ ಸಲ್ಲಿಕೆ ಹಾಗೂ ಪರಿಶೀಲನೆಗೆ ಮಾಹಿತಿ ಪುಸ್ತಕ ಮತ್ತು ದಿನಾಂಕ 09-01-2024 ರ ಅಧಿಸೂಚನೆಯನ್ನು ಓದಿಕೊಳ್ಳಲು ಕೆಇಎ ಸೂಚಿಸಿದೆ.