Site icon Vistara News

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಇಂದು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ?

government school teacher transfer

ಶಿಕ್ಷಕರು

ಬೆಂಗಳೂರು: ಸೇವಾ ನಿರತ ಪದವೀಧರ ಶಿಕ್ಷಕರನ್ನು ಪರೀಕ್ಷೆ ನಡೆಸದೇ 6 ರಿಂದ 8 ನೇ ತರಗತಿ ಶಿಕ್ಷಕರನ್ನಾಗಿ ನಿಯುಕ್ತಿಗೊಳಿಸುವ (graduate teacher promotion) ಪ್ರಸ್ತಾಪ ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗುವುದು ಬಹುತೇಕ ಖಚಿತ ಪಟ್ಟಿದೆ.

ಸೇವಾನಿರತ ಪದವೀಧರ ಶಿಕ್ಷಕರಲ್ಲಿ ಶೇ.40 ರಷ್ಟು ಮಂದಿಯನ್ನು ಪರೀಕ್ಷೆ ನಡೆಸದೇ 6 ರಿಂದ 8 ನೇ ತರಗತಿಗೆ ನಿಯುಕ್ತಿಗೊಳಿಸಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಬದಲಾವಣೆ ಮಾಡುವ ಪ್ರಸ್ತಾಪಕ್ಕೆ ಈಗಾಗಲೇ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಆರ್ಥಿಕ ಇಲಾಖೆಯೂ ಸಮ್ಮತಿ ಸೂಚಿಸಿವೆ. ಶಿಕ್ಷಣ ಇಲಾಖೆಯು ಕಳೆದ ವಾರವೇ ಸಂಪುಟದ ಅನುಮೋದನೆಗಾಗಿ ಈ ಪ್ರಸ್ತಾಪವನ್ನು ಕ್ಯಾಬಿನೆಟ್‌ ಶಾಖೆಗೆ ಸಲ್ಲಿಸಿದೆ.

2017ರಲ್ಲಿ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶೀಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (graduate teacher promotion) ಆಗಿರುವ ಅನ್ಯಾಯವನ್ನು ಸರಿಪಡಿಸಲು ಮತ್ತೊಂದು ತಿದ್ದುಪಡಿ ಮಾಡುವ ಪ್ರಸ್ತಾಪ ಕೊನೆಗೂ ಅಂತಿಮ ಹಂತಕ್ಕೆ ಬಂದಂತಾಗಿದೆ.

ಬುಧವಾರ ಸಂಜೆ 4 ಗಂಟೆಗೆ ಸಚಿವ ಸಂಪುಟದ ಸಭೆಯು ನಿಗದಿಯಾಗಿದ್ದು, ಸಭೆಯಲ್ಲಿ ಈ ಪ್ರಸ್ತಾಪವನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಮಂಡಿಸಲಿದ್ದಾರೆ. ಈಗಾಗಲೇ ಸರ್ಕಾರ ಈ ನಿರ್ಧಾರಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿರುವುದರಿಂದ ಸಂಪುಟ ಸಭೆಯಲ್ಲಿ ಚರ್ಚೆಯಿಲ್ಲದೇ ಇದಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ʻʻತಡ ಮಾಡಿದರೆ ಚುನವಾಣೆಯ ನೀತಿ ಸಂಹಿತೆ ಜಾರಿಗೆ ಬರಬಹುದು. ಹೀಗಾಗಿ ಈ ಬಾರಿಯ ಸಚಿವ ಸಂಪುಟದ ಸಭೆಯಲ್ಲಿಯೇ ಈ ಪ್ರಸ್ತಾಪಕ್ಕೆ ಅನುಮತಿ ಪಡೆಯಲಾಗುವುದುʼʼ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ʻವಿಸ್ತಾರ ನ್ಯೂಸ್‌ʼ ಗೆ ತಿಳಿಸಿದ್ದಾರೆ.

ಈ ಕುರಿತ ಸರ್ಕಾರದ ನಿರ್ಧಾರಕ್ಕಾಗಿ ಕಳೆದ ಇಪ್ಪತ್ತು, ಇಪ್ಪತ್ತೈದು ವರ್ಷಗಳಿಂದ ಶಾಲೆಗಳಲ್ಲಿ ಬೋಧಿಸುತ್ತಿರುವ ಸುಮಾರು 75 ಸಾವಿರಕ್ಕೂ ಹೆಚ್ಚು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಕಾತುರದಿಂದ ಎದುರು ನೋಡುತ್ತಿದ್ದಾರೆ.

ಸಚಿವ ಸಂಪುಟದ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮತಿ ನೀಡಿದ ಕೂಡಲೇ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಬದಲಾವಣೆ ಮಾಡಿ ಕರಡು ಅಧಿಸೂಚನೆ ಪ್ರಕಟಿಸಲಾಗುತ್ತದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಿದ್ದು, ಹದಿನೈದು ದಿನಗಳ ನಂತರ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಅಧಿಸೂಚನೆ ಪ್ರಕಟಿಸಲಾಗುತ್ತದೆ. ಆ ನಂತರವಷ್ಟೇ ಬಡ್ತಿ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಶಿಕ್ಷಕರ ಸಂಘದಿಂದ ನಿರಂತರ ಪ್ರಯತ್ನ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸೇವಾ ನಿರತ ಪದವೀಧರ ಶಿಕ್ಷಕರ ಪರವಾಗಿ ಈ ಬಡ್ತಿಗಾಗಿ ಹೋರಾಟ ನಡೆಸಿಕೊಂಡು ಬಂದಿತ್ತು. ಇತ್ತೀಚೆಗೆ ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಿದ ಸಂದರ್ಭದಲ್ಲಿಯೂ ಸೇವಾ ನಿರತ ಪದವೀಧರ ಶಿಕ್ಷಕರ ನೇಮಕದ ಕುರಿತು ತೀರ್ಮಾನ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು.

ಸಂಘದ ನಿಯೋಗವು ಇದಕ್ಕಾಗಿ ಹಲವಾರು ಬಾರಿ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿತ್ತು. ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಬದಲಾವಣೆ ಮಾಡುವ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಳ್ಳುವಂತೆ ಮಾಡಿದ್ದ ಸಂಘವು ಇದಕ್ಕೆ ಸಂಬಂಧಿಸಿದ ಕಡತವು ತ್ವರಿತವಾಗಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅನುಮತಿ ಪಡೆಯುವಂತೆ ನೋಡಿಕೊಂಡಿತ್ತು.

ಸುಮಾರು 75 ಸಾವಿರಕ್ಕೂ ಹೆಚ್ಚು ಪದವೀಧರ ಶಿಕ್ಷಕರು ಆರರಿಂದ ಎಂಟನೇ ತರಗತಿಯವರೆಗೆ ಬೋಧಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸೇವಾ ಜೇಷ್ಠತೆಯೊಂದಿಗೆ ಇವರನ್ನು ಬಡ್ತಿಗೆ ಪರಿಗಣಿಸಿ ಸೂಕ್ತ ಆರ್ಥಿಕ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿಕೊಂಡೇ ಬರಲಾಗಿದೆ. ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಶಂಭುಲಿಂಗನ ಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 7th pay commission : ಸರ್ಕಾರಿ ನೌಕರರಿಗೆ ಶನಿವಾರವೂ ರಜೆ; ಸಂಘದ ಬೇಡಿಕೆ ಕುರಿತು ಬಿಸಿಬಿಸಿ ಚರ್ಚೆ

Exit mobile version