ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ಸರ್ಕಾರಿ (Government School) ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡಿನ ಕ್ಲೈಮಾಕ್ಸ್ನಲ್ಲಿ ಗಡಿನಾಡು ಕಾಸರಗೋಡಿ ಶಾಲೆಗೆ ಕನ್ನಡ ಶಾಲೆಯನ್ನು ನೇಮಕ ಮಾಡುವಂತೆ ಅಲ್ಲಿನ ಕೋರ್ಟ್ ಆದೇಶ ನೀಡುತ್ತದೆ. ಅಂಥದ್ದೇ ಒಂದು ಪ್ರಸಂಗ ಇದೀಗ ನಡೆದಿದೆ. ಕಾಸರಗೋಡು ಜಿಲ್ಲೆಯ ಅಡೂರು ಎಂಬಲ್ಲಿನ ಸರ್ಕಾರಿ ಶಾಲೆಯೊಂದಕ್ಕೆ ಕನ್ನಡ ಮೇಷ್ಟ್ರನ್ನು ನೇಮಕ ಮಾಡುವಂತೆ ಅಲ್ಲಿನ ಹೈಕೋರ್ಟ್ ಆದೇಶ ನೀಡಿದೆ.
ಕನ್ನಡ ಗೊತ್ತಿಲ್ಲದ ಮಲಯಾಳಿ ಶಿಕ್ಷಕನನ್ನು ಬೇರೆ ಶಾಲೆಗೆ ವರ್ಗಾಯಿಸಿ, ಅಡೂರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕನ್ನಡ ಬಲ್ಲ ಶಿಕ್ಷಕರನ್ನು ನೇಮಿಸುವಂತೆ ಕೇರಳ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಹಲವು ವರ್ಷಗಳಿಂದ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಕೇರಳ ಸರ್ಕಾರ, ಶಿಕ್ಷಣ ಇಲಾಖೆ ಮತ್ತು ಕೇರಳ ಲೋಕ ಸೇವಾ ಆಯೋಗಕ್ಕೆ ಈ ತೀರ್ಪಿನಿಂದ ಭಾರಿ ಹಿನ್ನಡೆಯಾಗಿದೆ. ಇದೇ ವೇಳೆ ಕನ್ನಡ ಪರ ಹೋರಾಟ ಮಾಡುತ್ತಿದ್ದ ಪೋಷಕರಿಗೆ ಜಯ ದೊರಕಿದೆ.
ಎರಡು ತಿಂಗಳಿಂದ ನೇಮಕವಾಗಿಲ್ಲ
ಶಾಲೆಗೆ ನೇಮಕಗೊಂಡ ಮಲಯಾಳಿ ಶಿಕ್ಷಕರಿಗೆ ಕನ್ನಡ ಭಾಷೆ ಗೊತ್ತಿಲ್ಲದ ಕಾರಣ ಅಡೂರು ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಎರಡು ತಿಂಗಳಿನಿಂದ ಸಮಾಜ ವಿಜ್ಞಾನ ವಿಷಯವನ್ನು ಕಲಿಸಿಯೇ ಇಲ್ಲ . ಕಳೆದ ವರ್ಷ ಉದುಮ ಮತ್ತು ಹೊಸಕೋಟೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಲೆಯಾಳಂ ಮಾತ್ರ ತಿಳಿದಿರುವ ಶಿಕ್ಷಕರನ್ನು ಕನ್ನಡ ವಿಭಾಗಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು.
ಅಡೂರು ಮತ್ತು ಉದುಮ ಶಾಲೆಗಳ ಕನ್ನಡ ವಿಭಾಗಕ್ಕೆ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದ್ದರು. ಅವರು ಕೇರಳ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದರು. ಈಗ ಜಿಲ್ಲೆಯ ಸರ್ಕಾರಿ ಶಾಲೆಗಳ ಕನ್ನಡ ಮಾಧ್ಯಮ ವಿಭಾಗಗಳಿಗೆ ಕನ್ನಡ ಬಲ್ಲ ಶಿಕ್ಷಕರನ್ನು ಮಾತ್ರ ನೇಮಕ ಮಾಡಲು ಹೈಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.
ಇನ್ಮುಂದೆ ಸರ್ಕಾರಿ ಶಾಲೆಯಲ್ಲೂ ಪ್ರೀ ನರ್ಸರಿ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲೂ (Govt School) ಇನ್ನು ಮುಂದೆ ಪೂರ್ವ ಪ್ರಾಥಮಿಕ ತರಗತಿ (Lkg Class) ಪ್ರಾರಂಭಿಸಲಾಗುತ್ತಿದೆ. ಮುಂದಿನ 2023-24ರ ಶೈಕ್ಷಣಿಕ ವರ್ಷಕ್ಕೆ ಆಯ್ದ 262 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (Pre Primary Schools Opening) ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಕೆಲ ಷರತ್ತುಗಳೊಂದಿಗೆ ನಡೆಸಲು ಕೇಂದ್ರ ಶಿಕ್ಷಣ ಇಲಾಖೆಯ ಪಿಎಬಿಯಲ್ಲಿ ಅನುಮತಿ ನೀಡಲಾಗಿದೆ.
ಹೀಗಾಗಿ ಆಗಸ್ಟ್‌ನಿಂದಲೇ ಸಿದ್ಧತೆ ಆರಂಭಿಸಲು ರಾಜ್ಯ ಸಮಗ್ರ ಶಿಕ್ಷಣ ಇಲಾಖೆ ಆಯಾ ನಿರ್ದೇಶಕರಿಗೆ ಸೂಚನೆ ನೀಡಿದೆ. 2023-24ನೇ ಸಾಲಿನ ಪೂರ್ವ ಪ್ರಾಥಮಿಕ (LKG) ಒಂದು ವಿಭಾಗವನ್ನು ಮಾತ್ರ ಆರಂಭಿಸಬೇಕು. ಎಲ್‌ಕೆಜಿ ತರಗತಿಗೆ 4 -5 ವರ್ಷ ವಯೋಮಿತಿಯೊಳಗಿನ ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳಬೇಕು. ಕನಿಷ್ಠ 20 ಮಕ್ಕಳು ಮತ್ತು ಗರಿಷ್ಠ 30 ಮಕ್ಕಳ ದಾಖಲಾತಿಗೆ ಅವಕಾಶ ನೀಡಲಾಗಿದೆ.
ಮಕ್ಕಳ ಆಕರ್ಷಣೆಯತ್ತ ಗಮನಹರಿಸಿ
ತರಗತಿಯನ್ನು ಆರಂಭಿಸಲು ಕೊಠಡಿಯೊಂದು ಗುರುತಿಸಬೇಕು. ಮಕ್ಕಳನ್ನು ಆಕರ್ಷಿಸಲು ಸ್ಥಳೀಯ ಚಿತ್ರಕಲಾ ಶಿಕ್ಷಕರಿಂದ ಕೊಠಡಿಯಲ್ಲಿ ಚಿತ್ರಗಳ ರಚನೆ ಮಾಡಿಸುವುದು. ಗೋಡೆ ಮೇಲೆ ನೆಲ ಮಟ್ಟದಿಂದ 2 ಅಡಿಯವರೆಗೆ ಮಕ್ಕಳು ಬರೆಯಲು ಸಾಧ್ಯವಾಗುವಂತೆ ಗ್ರೀನ್ ಬೋರ್ಡ್ ರಚನೆ ಮಾಡುವಂತೆ ಸೂಚಿಸಲಾಗಿದೆ.
ಹೇಗಿರಲಿದೆ ಪೂರ್ವ ಪ್ರಾಥಮಿಕ ಶಾಲೆ?
-ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸಲು ಪ್ರಾಥಮಿಕ ಶಾಲೆಗಳಲ್ಲಿ ಒಂದು ಸುಸಜ್ಜಿತ ಕೊಠಡಿ ಮೀಸಲು
-ಅಗತ್ಯ ಸಾಧನ ಸಾಮಗ್ರಿಗಳನ್ನು ನಿಯಮಾನುಸಾರ ಖರೀದಿಸಲು ಸೂಚನೆ
-ಚಿತ್ರಕಲಾ ಶಿಕ್ಷಕರನ್ನ ಬಳಸಿಕೊಂಡು ಆಕರ್ಷಕವಾಗಿ ಚಿತ್ರ ಬಿಡಿಸಿ ಪಾಠ
-ಎಸ್‌ಡಿಎಂಸಿ (SDMC) ಗೆ ಅತಿಥಿ ಶಿಕ್ಷಕಿ ಅಥವಾ ಶಿಕ್ಷಕರೊಬ್ಬರನ್ನು ನೇಮಿಸಿಕೊಳ್ಳುವ ಹೊಣೆ
-ಅತಿಥಿ ಶಿಕ್ಷಕರಿಗೆ ಮಾಸಿಕ 7,500 ರೂ., ಹಾಗೂ ಆಯಾರನ್ನು ನೇಮಿಸಿ ಕೊಳ್ಳಲು 5 ಸಾವಿರ ರೂ. ಸಂಭಾವನೆ
-ಬೆಳಗ್ಗೆ 10 ರಿಂದ ಮಧ್ಯಾಹ್ನ 3:30ರ ವರೆಗೆ ತರಗತಿ ಸಮಯ ನಿಗದಿ
-ಆಗಸ್ಟ್ ಅಂತ್ಯದೊಳಗೆ ಸರ್ಕಾರದಿಂದಲೇ ಪಠ್ಯ ಪುಸ್ತಕ ಪೂರೈಕೆ
-ನೇಮಕಗೊಳ್ಳುವ ಅತಿಥಿ ಶಿಕ್ಷಕರಿಗೆ ಡಯಟ್ ಮೂಲಕ ತರಬೇತಿ
-ಅಂಗನವಾಡಿಗಳಲ್ಲಿ ನೀಡುವ ಹಾಲು, ಊಟ, ಉಪಾಹಾರ ಕೂಡ ಇರಲಿದೆ.