ನವ ದೆಹಲಿ: ಭಾರತದಲ್ಲಿ ನಿರ್ದಿಷ್ಟ ಪದವಿ ಹಾಗೂ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಮಾಡಿದವರಿಗೆ ಬ್ರಿಟನ್‌ನಲ್ಲಿ ಮಾನ್ಯತೆ ಸಿಗಲಿದ್ದು, ಅಲ್ಲೂ ಉದ್ಯೋಗಾವಕಾಶಗಳನ್ನು ಹೊಂದಲು ಅನುಕೂಲವಾಗಲಿದೆ. ಅದೇ ರೀತಿ ಬ್ರಿಟನ್‌ನ ನಿರ್ದಿಷ್ಟ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಭಾರತದಲ್ಲೂ ಮಾನ್ಯತೆ ಸಿಗಲಿದೆ. ಉಭಯ ದೇಶಗಳು ಈ ಸಂಬಂಧ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿವೆ.
ಹೀಗಿದ್ದರೂ, ಈ ಒಪ್ಪಂದದ ವ್ಯಾಪ್ತಿಯಿಂದ ವೈದ್ಯಕೀಯ, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಫಾರ್ಮಸಿಯನ್ನು ಹೊರಗಿಡಲಾಗಿದೆ ಎಂದು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯಂ ತಿಳಿಸಿದ್ದಾರೆ.
” ಇಂದಿನಿಂದ ಬ್ರಿಟನ್‌ನ ಪದವಿಗಳಿಗೆ ಭಾರತದಲ್ಲಿ ಸಮಾನ ಮಾನ್ಯತೆ ಸಿಗಲಿದೆ. ನೀವು ಬ್ರಿಟನ್‌ನಲ್ಲಿ ಡಿಗ್ರಿ ಪಡೆದು ಭಾರತದಲ್ಲಿ ಕೆಲಸಕ್ಕೆ ಸೇರಬಹುದು. ಅದೇ ರೀತಿ ಭಾರತದ ಬಿ.ಎ, ಎಂ.ಎ ಪದವಿಗೂ ಬ್ರಿಟನ್‌ನಲ್ಲಿ ಮಾನ್ಯತೆ ದೊರೆಯಲಿದೆ. ಆನ್‌ಲೈನ್ ಕೋರ್ಸ್‌ಗಳ ಮೂಲಕ ಪಡೆಯುವ ಪದವಿಗೂ ಇದು ಅನ್ವಯವಾಗಲಿದೆʼʼ ಎಂದರು.
ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ನಡೆಯುತ್ತಿದ್ದು, ಆಗಸ್ಟ್ ೩೧ಕ್ಕೆ ಮುಕ್ತಾಯವಾಗಬಹುದು. ದೀಪಾವಳಿ ವೇಳೆಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.