ಬೆಂಗಳೂರು: “ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಯಶಸ್ಸಿಗೆ ಎಷ್ಟು ಸಮಯ ಓದುತ್ತೇವೆ ಎಂಬುದು ಮುಖ್ಯವಲ್ಲ, ಹೇಗೆ ಓದುತ್ತೇವೆ ಎಂಬುದು ಮುಖ್ಯʼʼ ಹೀಗೆಂದ ವಿದ್ಯಾರ್ಥಿ ಬೆಂಗಳೂರಿನ ಆರ್.ಕೆ. ಶಿಶಿರ್. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ ಟೆಕ್ನಾಲಜಿ (ಐಐಟಿ) ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸಿದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ನಲ್ಲಿ (JEE Advanced Result 2022) ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ದೇಶದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆ ಎಂದು ಗುರುತಿಸಿಕೊಂಡಿರುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ನಲ್ಲಿ ಅರ್ಹತೆ ಪಡೆಯಬೇಕಾದರೆ ಕಷ್ಟಪಟ್ಟು ಹಗಲು ರಾತ್ರಿ ಓದಬೇಕೆಂಬ ಸಾಮಾನ್ಯವಾದ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಶಿಶಿರ್ ಅಭ್ಯಾಸ ನಡೆಸಿ, ಈ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
“ಬಹುತೇಕವಾಗಿ ಈ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು 12 ರಿಂದ 14 ಗಂಟೆ ಅಭ್ಯಾಸ ನಡೆಸುತ್ತಾರೆ. ಆದರೆ ನಾನು ಓದಿದಷ್ಟು ಹೊತ್ತು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಗಮನ ನೀಡುತ್ತಿದ್ದೆ. ಯಾವತ್ತೂ ಇಷ್ಟೇ ಹೊತ್ತು ಓದಬೇಕೆಂದು ಸಮಯ ನಿಗದಿಪಡಿಸಿಕೊಳ್ಳುತ್ತಿರಲಿಲ್ಲʼʼ ಎಂದು ಶಿಶಿರ್ ಹೇಳಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ನಾರಾಯಣ ಟೆಕ್ನೋ ಸ್ಕೂಲ್‌ನ ವಿದ್ಯಾರ್ಥಿಯಾಗಿರುವ ಶಂಕರ ನಗರದ ನಿವಾಸಿ ಆರ್.ಕೆ. ಶಿಶಿರ್, “ನಾನು ಅಭ್ಯಾಸ ನಡೆಸುವಾಗ ಪ್ರತಿಯೊಂದು ಗಂಟೆಗೊಮ್ಮೆ ಬಿಡುವುಮಾಡಿಕೊಳ್ಳುತ್ತಿದ್ದೆ. ಈ ರೀತಿ ನಿರಂತರವಾಗಿ ಓದಿನ ನಡುವೆ ಬಿಡುವು ಮಾಡಿಕೊಳ್ಳುತ್ತಿದ್ದುದ್ದರಿಂದ ಗ್ರಹಿಕೆಯ ಮಟ್ಟ ಹೆಚ್ಚುತ್ತಿತ್ತು. ಹೀಗೆ ಬಿಟ್ಟು ಬಿಟ್ಟು ಓದುವುದರಿಂದ ಏಕಾಗ್ರತೆಗೆ ತೊಂದರೆಯಾಗುತ್ತದೆ ಎಂದೇನಿಲ್ಲ. ನಾನು ನಿರಂತರವಾಗಿ ಅಭ್ಯಾಸ ನಡೆಸುವುದನ್ನು ನಿಲ್ಲಿಸುತ್ತಿರಲಿಲ್ಲ. ಪ್ರತಿ ನಿತ್ಯ ಅಭ್ಯಾಸ ಮಾಡುತ್ತಲೇ ಇದ್ದೆʼʼ ಎಂದು ಶಿಶಿರ್ ತಮ್ಮ ಸಾಧನೆಯ ಗುಟ್ಟು ರಟ್ಟು ಮಾಡಿದ್ದಾರೆ.
ಫಲಿತಾಂಶ ಮಾಹಿತಿಗೆ ವೆಬ್: https://jeeadv.ac.in/
ಎಂಟು ಗಂಟೆ ನಿದ್ರೆ ಮಾಡುತ್ತಿದ್ದೆ!
ಪ್ರತಿನಿತ್ಯ ಎಂಟು ಗಂಟೆ ನಿದ್ರೆ ಮಾಡುತ್ತಿದ್ದೆ. ನಾನು ಬೆಳಗ್ಗೆ 6.30 ಕ್ಕೆ ಎದ್ದು ಎಂಟು ಗಂಟೆಯವರಗೆ ಓದುತ್ತಿದ್ದೆ. ಯೂಟ್ಯೂಬ್ ವಿಡಿಯೋ ನೋಡುವುದು, ಕೆಲ ಗೇಮ್ಸ್ ಆಡುವುದು, ಎಜುಕೇಷನ್‌ಗೆ ಸಂಬಂಧಿಸಿದ ವಿಡಿಯೋ ನೋಡುವುದು ಮಾಡುತ್ತಿದ್ದೆ. ನನಗೆ ಗಣಿತ ಎಂದರೆ ಇಷ್ಟ. ಹೀಗಾಗಿ ಇದರ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದೆ ಎಂದಿರುವ ಶಿಶಿರ್ 11ನೇ ತರಗತಿಯಲ್ಲಿರುವಾಗಲೇ ಈ ಪರೀಕ್ಷೆಗೆ ಅಭ್ಯಾಸ ಆರಂಭಿಸಿದ್ದೆ. ಶಾಲೆಯವರು ಪ್ರತಿ ವಾರಕ್ಕೆ ನೀಡುವ ಟಾಪಿಕ್ ಅನ್ನು ತಪ್ಪದೇ ಅಭ್ಯಾಸ ಮಾಡುತ್ತಿದ್ದೆ ಎಂದು ತಮ್ಮ ಅಭ್ಯಾಸದ ಕುರಿತು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಶಿಶಿರ್ ಈ ಪರೀಕ್ಷೆಯಲ್ಲಿ ಒಟ್ಟು 360 ಅಂಕಗಳಿಗೆ 314 ಅಂಕ ಪಡೆದಿದ್ದಾರೆ. ಇವರ ತಂದೆ ಆರ್ ವಿ ಕೃಷ್ಣಕುಮಾರ್ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಉದ್ಯೋಗಿಯಾಗಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ. ಒಟ್ಟು 1,55,538 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು, ಕೇವಲ 40,712 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಆರ್.ಕೆ. ಶಿಶಿರ್ ಸಿಬಿಎಸ್‌ಇ 12ನೇ ತರಗತಿಯಲ್ಲಿ ಶೇ. 97.9 ಅಂಕ ಪಡೆದು ಉತ್ತೀರ್ಣರಾಗಿದ್ದರು. ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯ ಫರ್ಮಾ ವಿಭಾಗದಲ್ಲಿ ರಾಜ್ಯಕ್ಕೇ ಮೊದಲ ರ‍್ಯಾಂಕ್ ಪಡೆದಿದ್ದರು. ಸಿಇಟಿಯಲ್ಲಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದರು. ಮುಂದೆ ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಓದಲು ಶಿಶಿರ್ ನಿರ್ಧರಿಸಿದ್ದಾರೆ.
ಇದನ್ನೂ ಓದಿ| JEE Advanced Result 2022 | ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶ ಪ್ರಕಟ; ಬೆಂಗಳೂರು ಹುಡುಗ ಟಾಪರ್