ನವ ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಜೆಇಇ (ಮೇನ್) 2023 (JEE Main 2023) ಸೆಷನ್-1ರ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, 20 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಆದರೆ ಈ 20 ವಿದ್ಯಾರ್ಥಿಗಳಲ್ಲಿ ಒಬ್ಬರೂ ವಿದ್ಯಾರ್ಥಿನಿಯರಿಲ್ಲ ಎಂಬುದು ವಿಶೇಷ.
ಎನ್‌ಟಿಎಯು ದಾಖಲೆಯ ಕಡಿಮೆ ಅವಧಿಯಲ್ಲಿ ಈ ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆ ಮುಗಿದು ಐದು ದಿನಗಳಲ್ಲಿ ಫಲಿತಾಂಶ ಪ್ರಕಟವಾಗಿದೆ. ಜನವರಿ 24, 25, 27, 28, 29, 30, 31 ಮತ್ತು ಫೆಬ್ರವರಿ 1 ರಂದು ಈ ಪರೀಕ್ಷೆ ನಡೆದಿತ್ತು. ಫೆಬ್ರವರಿ 6ರ ಸೋಮವಾರ ರಾತ್ರಿ ಫಲಿತಾಂಶ ಪ್ರಕಟಿಸಲಾಗಿದೆ.
ಕಳೆದ ವರ್ಷ ನಡೆದ ಜೆಇಇ (ಮೇನ್) 2022 ಪರೀಕ್ಷೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳು ಶೇ. ನೂರಕ್ಕೆ ನೂರು ಅಂಕ ಪಡೆದಿದ್ದರು. ಇದರಲ್ಲಿ ಇಬ್ಬರು ವಿದ್ಯಾರ್ಥಿನಿಯರಿದ್ದರು. ಇಂಗ್ಲಿಷ್, ಹಿಂದಿ, ಕನ್ನಡ, ಉರ್ದು, ಅಸ್ಸಾಮಿ, ಬೆಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಭಾಷೆಗಳಲ್ಲಿ ಈ ಜೆಇಇ ಮೇನ್ ಪರೀಕ್ಷೆ ನಡೆದಿತ್ತು.
20 ಮಂದಿ ಟಾಪರ್‌ಗಳಲ್ಲಿ ಹದಿನಾಲ್ಕು ಮಂದಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಾಗಿದ್ದಾರೆ. ನಾಲ್ವರು ಓಬಿಸಿಯ ವಿದ್ಯಾರ್ಥಿಗಳಾಗಿದ್ದರೆ, ತಾಲ ಒಬ್ಬರು ಎಸ್‌ಸಿ ಮತ್ತು ಇಡಬ್ಲ್ಯುಎಸ್‌ಗೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ಸೆಷನ್‌ನಲ್ಲಿ ಪೇಪರ್-1 (ಬಿಟೆಕ್/ಬಿಐ) ಪರೀಕ್ಷೆಗೆ 8.6 ಲಕ್ಷ ವಿದ್ಯಾರ್ಥಿಗಳು, ಪೇಪರ್-2 (ಬಿಆರ್‌ಕ್/ಬಿಪ್ಲಾನಿಂಗ್) 46 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಶೇ.95.79 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಎನ್‌ಟಿಎ ತಿಳಿಸಿದೆ.
ಜೆಇಇ ಮೇನ್ಸ್‌ನ ಸೆಷನ್ -2 ಪರೀಕ್ಷೆ ಏಪ್ರಿಲ್‌ನಲ್ಲಿ ನಡೆಯಲಿದೆ. ಸೆಷನ್-1 ಮತ್ತು 2 ರಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಬಹುದಾಗಿದೆ. ಈ ಪರೀಕ್ಷೆ ಮೂಲಕ ದೇಶದ ಪ್ರತಿಷ್ಠಿತ 23 ತಾಂತ್ರಿಕ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಬಹುದಾಗಿದೆ.
ಸೆಷನ್-2 ಕ್ಕೆ ಅರ್ಜಿ ಸಲ್ಲಿಕೆ ಶುರು
ಜೆಇಇ (ಮೇನ್) 2023 (JEE Main 2023) ಸೆಷನ್-2 ನೋಂದಣಿ ಪ್ರಕ್ರಿಯೆ ಫೆಬ್ರವರಿ 7 ರಿಂದ ಪ್ರಾರಂಭವಾಗಿದೆ. ಮಾರ್ಚ್ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 6, 7, 8, 9, 10, 11, 12 ರಂದು ಪರೀಕ್ಷೆ ನಡೆಸಲಾಗುತ್ತದೆ. ಮಾರ್ಚ್ ಕೊನೆಯ ವಾರದಲ್ಲಿ ಪ್ರವೇಶ ಪತ್ರವನ್ನು ಒದಗಿಸಲಾಗುವುದು ಎಂದು ಎನ್‌ಟಿಎ ತಿಸಿದೆ.
ಅರ್ಜಿ ಸಲ್ಲಿಸಲು ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಪರೀಕ್ಷೆ ಹೇಗಿರುತ್ತದೆ?
ಸೆಷನ್ -1ಕ್ಕೆ ಹಾಜರಾಗಿರುವ ವಿದ್ಯಾರ್ಥಿಗಳು ಕೂಡ ಸೆಷನ್- 2 ರಲ್ಲಿ ಪರೀಕ್ಷೆಗೆ ಹಾಜರಾಗಬಹುದು. ಎರಡರಲ್ಲಿ ಯಾವುದರಲ್ಲಿ ಹೆಚ್ಚು ಅಂಕಪಡೆದಿರುತ್ತಾರೋ ಅದನ್ನು ಜೆಇಇ ಅಡ್ವಾನ್ಸ್‌ಗೆ ಪರಿಗಣಿಸಲಾಗುತ್ತದೆ.
ಕಳೆದ ವರ್ಷ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಉತ್ತರ ಪ್ರದೇಶ ರಾಜ್ಯದಿಂದ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು. ನಂತರದ ಸ್ಥಾನವನ್ನು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳು ಪಡೆದಿದ್ದವು.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://jeemain.nta.nic.in
ಇದನ್ನೂ ಓದಿ : JEE Advanced Result | ಜೆಇಇ ಅಡ್ವಾನ್ಸ್ಡ್ನಲ್ಲಿ 26ನೇ ಶ್ರೇಯಾಂಕ ಪಡೆದ ವಿದ್ಯಾರ್ಥಿಯಲ್ಲಿದೆ ವಿಶೇಷತೆ