ಕಾಮರಾಜ್ ನಾಡಾರ್ ಅವರು ತಮಿಳುನಾಡಿನ ಶಕ್ತಿಶಾಲಿ ಮುಖ್ಯಮಂತ್ರಿ ಆಗಿ ಒಂಬತ್ತು ವರ್ಷಗಳ ಕಾಲ ಆಳಿದವರು (1954-1963). ಅವರು ಹೆಚ್ಚು ಓದಿದವರು ಅಲ್ಲ. ಆರು ವರ್ಷ ಪ್ರಾಯದಲ್ಲಿ ಅಪ್ಪನನ್ನು ಕಳೆದುಕೊಂಡು ಬಡತನದ ಬಾಲ್ಯವನ್ನು ಕಳೆದವರು. ಅದರಿಂದ ಅವರು ಪ್ರಾಥಮಿಕ ಶಾಲೆಗಿಂತ ಮುಂದೆ ಹೋಗಲು ಸಾಧ್ಯ ಆಗಿರಲಿಲ್ಲ.
ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಒಂದು ಘಟನೆಯು ಒಂದು ಕ್ರಾಂತಿಕಾರಕ ನಿರ್ಧಾರಕ್ಕೆ ಕಾರಣ ಆಯಿತು. ಒಮ್ಮೆ ಅವರು ತಮ್ಮ ಹಳೆಯ ಕಾರಿನಲ್ಲಿ ಸಂಚಾರ ಹೊರಟಿದ್ದರು. ಚಿರನ್ಮಹಾದೇವಿ ಎಂಬ ಊರಿನ ರೈಲ್ವೇ ಕ್ರಾಸಿಂಗ್ ಪಕ್ಕದಲ್ಲಿ ಕಾರು ತುಂಬಾ ಹೊತ್ತು ನಿಲ್ಲಬೇಕಾಯಿತು.
ಕಾಮರಾಜ್ ನಾಡಾರ್ ಕಾರಿನ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸುತ್ತ ಕುಳಿತಿದ್ದರು. ಅವರ ಕಣ್ಣಿಗೆ ಒಬ್ಬ ಆದಿವಾಸಿ ಹುಡುಗ ಕಂಡ. ಅವನು ತುಂಡು ಬಟ್ಟೆ ತೊಟ್ಟುಕೊಂಡು ದನಗಳನ್ನು ಮೇಯಿಸುತ್ತಿದ್ದ. ಅವನನ್ನು ಕರೆದು ಕಾಮರಾಜರು ಮಾತಿಗೆ ತೊಡಗಿದರು. ಅವನಿಗೆ ಈ ವ್ಯಕ್ತಿ ತಮಿಳುನಾಡಿನ ಮುಖ್ಯಮಂತ್ರಿ ಎಂದು ಗೊತ್ತಿರಲಿಲ್ಲ. ಕಾಮರಾಜರು ಮೊದಲು ಅವನ ಹೆಸರು ಕೇಳಿದರು. ನಂತರ ಯಾಕೋ ಶಾಲೆಗೆ ಹೋಗಲಿಲ್ಲ? ಎಂದರು.
ಹುಡುಗ ಸಿಡಿದು ಹೇಳಿದ – ನಾನು ಶಾಲೆಗೆ ಹೋದರೆ ದನ ಮೇಯಿಸುವುದು ಯಾರು? ನನಗೆ ಊಟ ಕೊಡುವುದು ಯಾರು?
ಕಾಮರಾಜರಿಗೆ ಕಪಾಳಕ್ಕೆ ಎರಡು ಬಿಗಿದ ಅನುಭವ ಆಯಿತು. ಅವರ ಬಾಲ್ಯದ ಹಸಿವು, ಅಪಮಾನ, ನೋವು ಎಲ್ಲವೂ ಸೇರಿ ಕಣ್ಣೀರು ಗಲ್ಲವನ್ನು ತೋಯಿಸಿತು. ಅವರು ಭಾವಜೀವಿ ಮತ್ತು ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣ ಇದ್ದವರು.
ಮರುದಿನವೇ ಅವರು ಚೆನ್ನೈಗೆ ಬಂದು ಕ್ಯಾಬಿನೆಟ್ ಮೀಟಿಂಗ್ ಕರೆದರು. ಶಾಲೆಯ ಮಕ್ಕಳಿಗೆ ಉಚಿತ ಬಿಸಿಯೂಟವನ್ನು ಒದಗಿಸುವ ಪ್ರಸ್ತಾವ ಮುಂದಿಟ್ಟರು. ಒಂದಿಬ್ಬರು ಒಡಕು ಮಾತು ಹೇಳಿದರೂ ಅವರು ಕ್ಯಾರ್ ಮಾಡಲಿಲ್ಲ. ಅವರಿಗೆ ಹಸಿವಿನ ಬೆಲೆ ಗೊತ್ತಿತ್ತು!
ಅವರ ಹಠ ಮತ್ತು ಬದ್ಧತೆಯ ಫಲವಾಗಿ ಇಡೀ ಭಾರತದಲ್ಲಿ ಮೊತ್ತಮೊದಲ ಬಾರಿಗೆ ಸರಕಾರಿ ಶಾಲೆಯ ಅಷ್ಟೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯು ಜಾರಿಗೆ ಬಂದಿತು(1956)!
ಕಾಮರಾಜರು ಅದೇ ಹುಡುಗನನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆದು ಸನ್ಮಾನ ಮಾಡಿದರು. ಆ ಕಾಲಕ್ಕೆ ಅದು ಕ್ರಾಂತಿಕಾರಕವಾದ ಯೋಜನೆಯೇ ಆಗಿತ್ತು. ಮುಂದೆ ಬೇರೆ ಬೇರೆ ರಾಜ್ಯಗಳು ಕೂಡ ಆ ಯೋಜನೆಯನ್ನು ಜಾರಿಗೆ ತಂದವು. ಕರ್ನಾಟಕ ಸರಕಾರ ಕೂಡ ‘ಅಕ್ಷರ ದಾಸೋಹ’ ಎಂಬ ಹೆಸರಿನಿಂದ ಈ ಯೋಜನೆಯನ್ನು ಅನುಷ್ಠಾನ ಮಾಡಿತು.
ಆ ಬಾಲಕನ ಸ್ಫೂರ್ತಿಯಿಂದ ಮತ್ತು ಕಾಮರಾಜರ ಸಂಕಲ್ಪ ಶಕ್ತಿಯಿಂದ ಜಾರಿಗೆ ಬಂದ ಯೋಜನೆಯು ಮುಂದೆ ಇಡೀ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕವಾದ ಬದಲಾವಣೆಯನ್ನೇ ತಂದಿತು. ಮುಂದೆ ಕಾಮರಾಜ ನಾಡಾರ್ ಅವರಿಗೆ ಭಾರತರತ್ನ ಪ್ರಶಸ್ತಿ ಕೂಡ ದೊರೆಯಿತು.
ಇದನ್ನೂ ಓದಿ| ಎವರೆಸ್ಟ್ ವೀರ ಎಡ್ಮಂಡ್ ಹಿಲರಿ ಹೇಳಿದ ಸವಾಲು ಎದುರಿಸುವ ಪಾಠ
ಇದನ್ನೂ ಓದಿ| ರಾಜಮಾರ್ಗ ಅಂಕಣ| ಮಧ್ಯ ರಾತ್ರಿ ಎದ್ದುಬಂದು ಎರಡು ಹಾಡು ಹಾಡಿದ್ದರು ಸುಬ್ಬುಲಕ್ಷ್ಮಿ, ಯಾಕೆಂದರೆ..