ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು (2nd PUC Supplementary Result 2023) ಪ್ರಕಟಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ. ಕಾಲೇಜಿನಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಫಲಿತಾಂಶ ಪ್ರಕಟಿಸಲಗುತ್ತದೆ.
ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ ಇಂತಿದೆ; https://karresults.nic.in/slpusuppfirst.asp
ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ರಿಜಿಸ್ಟರ್ ನಂಬರ್ ಅನ್ನು ಎಂಟ್ರಿಮಾಡಿ, ಸಬ್ಜೆಕ್ಟ್ ಕಾಂಬಿನೇಷನ್ ಆಯ್ಕೆ ಮಾಡಿಕೊಳ್ಳಬೇಕಿದೆ. ನಂತರ ಸಬ್‌ಮಿಟ್ ಒತ್ತಿದರೆ ಫಲಿತಾಂಶ ತೆರೆಯ ಮೇಲೆ ಪ್ರಕಟವಾಗಲಿದೆ.
2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 74.64 ರಷ್ಟು ಫಲಿತಾಂಶ ದಾಖಲಾಗಿದ್ದು, ಇದರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಳೆದ ಮೇ 23ರಿಂದ 3 ಜೂನ್‌ವರೆಗೆ 304 ಪರೀಕ್ಷಾ ಕೇಂದ್ರಗಳಲ್ಲಿ ಈ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಬೆಂಗಳೂರು ನಗರದ ಒಟ್ಟು ಹತ್ತು ಸೆಂಟರ್‌ಗಳಲ್ಲಿ ಜೂನ್ 9 ರಿಂದ 14ರ ವರೆಗೆ ನಡೆಸಲಾಗಿತ್ತು.
ಶೇ. 32.00 ರಷ್ಟು ಫಲಿತಾಂಶ
ಈ ಪೂರಕ ಪರೀಕ್ಷೆಗೆ ಒಟ್ಟು 1,58,881 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದರು. ಇವರಲ್ಲಿ 1,S7,7S6 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 50,478 ವಿದ್ಯಾರ್ಥಿಗಳು (ಶೇ.32.00) ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬಾಲಕಿಯರ ಮೇಲುಗೈ
ಪೂರಕ ಪರೀಕ್ಷೆಯ ಫಲಿತಾಂಶದಲ್ಲಿಯೂ ಬಾಲಕಿಯರು ಮುಂದಿದ್ದಾರೆ. ಒಟ್ಟು 62,111 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು,ಇವರಲ್ಲಿ 21,577 ವಿದ್ಯಾರ್ಥಿನಿಯರು (ಶೇ.34.74) ಉತ್ತೀರ್ಣರಾಗಿದ್ದಾರೆ. 95,645 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 28, 901 ಬಾಲಕರು (ಶೇ.30.22) ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ಶೇ.32.69 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ ಗ್ರಾಮಾಂತರ ಭಾಗದ ಶೇ.29.37 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಶೇ.28.64 ಫಲಿತಾಂಶ ಬಂದಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇ.32.23 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.38.60 ರಷ್ಟು ಫಲಿತಾಂಶ ಬಂದಿದೆ. ಕನ್ನಡ ಮಾಧ್ಯಮದ ಶೇ.29.54 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಇಂಗ್ಲಿಷ್ ಮಾಧ್ಯಮದ ಶೇ.35.10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಜರಾತಿ ಕೊರತೆಯಿಂದಾಗಿ ಖಾಸಗಿ ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆದವರಲ್ಲಿ ಶೇ.15.65 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಮಾರ್ಚ್ 9ರಿಂದ 29ರವರೆಗೆ 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. ಅದರ ಫಲಿತಾಂಶವನ್ನು ಏಪ್ರಿಲ್ 21ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (kseeb) ಪ್ರಕಟಿಸಿತ್ತು. ಈ ಬಾರಿ ಶೇ.74.67 ಮಂದಿ ಉತ್ತೀರ್ಣರಾಗಿದ್ದರು. ಒಟ್ಟು 7,02,067 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ಶೇ. 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಶೇ.74.67 ಮಂದಿ ಉತ್ತೀರ್ಣರಾಗಿದ್ದರು. ಕಳೆದ ಬಾರಿ ಶೇ. 61.88 ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿಯದ್ದು ಇಲ್ಲಿಯವರೆಗಿನ ದಾಖಲೆಯಾಗಿದೆ.
ಮರು ಮೌಲ್ಯಮಾಪನಕ್ಕೆ ಅವಕಾಶ
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿಸಲ್ಲಿಸಲು ಇಂದಿನಿಂದಲೇ ಅವಕಾಶ ನೀಡಲಾಗಿದ್ದು, ಜೂನ್ 26 ಕೊನೆಯ ದಿನವಾಗಿರುತ್ತದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಯನ್ನು ಜೂನ್ 24 ರಿಂದ ಜೂನ್ 28ರ ವರೆಗೆ ವೆಬ್‌ಸೈಟ್‌ನಲ್ಲಿ (https://kseab.karnataka.gov.in) ಒದಗಿಸಲಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಬಹುದಾಗಿದೆ.
ಸ್ಕ್ಯಾನಿಂಗ್ ಪ್ರತಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಮರು ಮೌಲ್ಯಮಾಪನಕ್ಕೆ ಕೋರಿಕೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಜೂನ್24 ರಿಂದ ಜೂನ್ 30 ರವರೆಗೆ ವಿದ್ಯಾರ್ಥಿಗಳು ಕೋರಿಕೆ ಸಲ್ಲಿಸಬಹುದಾಗಿದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು 530ರೂ. ಹಾಗೂ ಮರು ಮೌಲ್ಯಮಾಪನ ಮಾಡಿಸಲು 1,670 ರೂ. ಶುಲ್ಕ ಪಾವತಿಸಬೇಕಿರುತ್ತದೆ. ಮರು ಮೌಲ್ಯಮಾಪನದ ಫಲಿತಾಂಶವನ್ನು ಮಂಡಳಿಯ ವೆಬ್ಸೈಟ್‌ನಲ್ಲಿ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080-23310075 ಸಂಪರ್ಕಿಸಬಹುದಾಗಿದೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : PUC Supplementary Exams 2023: ಹಾಜರಾತಿ ಕೊರತೆ: ಪರೀಕ್ಷೆ ವಂಚಿತ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್