Site icon Vistara News

Karnataka Board Exams 2023 : 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ; ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿದ ಪರೀಕ್ಷಾ ಮಂಡಳಿ

Karnataka Board Exams 2023

Karnataka Board Exams 2023

ಬೆಂಗಳೂರು: ಈ ವರ್ಷದಿಂದಲೇ (2022-23 ಸಾಲಿನಿಂದ) ರಾಜ್ಯದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ಮೌಲ್ಯಂಕನ ಪರೀಕ್ಷೆ ನೆಡೆಸಲಾಗುತ್ತಿದ್ದು (Karnataka Board Exams 2023), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEEB) ಮಾದರಿ ಪ್ರಶ್ನೆ ಪತ್ರಿಕೆಯನ್ನು (ಮೌಲ್ಯಾಂಕನದ ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು) ಬಿಡುಗಡೆ ಮಾಡಿದೆ.

ಮಂಡಳಿಯ ವೆಬ್‌ಸೈಟ್‌ನಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆಯ ಮೊದಲ ಪುಟದಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು SATS ಸಂಖ್ಯೆಯನ್ನು ಬರೆಯಬೇಕಿರುತ್ತದೆ ಮತ್ತು ಸಹಿ ಮಾಡಬೇಕಿರುತ್ತದೆ. ಕೊಠಡಿ ಮೇಲ್ವಿಚಾರಕರೂ ಇದೇ ಪ್ರಶ್ನೆ ಪತ್ರಿಕೆಯಲ್ಲಿಯೇ ಶಾಲೆಯ ಹೆಸರು, ವಿಳಾಸವನ್ನು ನಮೂದಿಸಬೇಕಿರುತ್ತದೆ. ನಂತರ ಮೊದಲ ಪುಟದಲ್ಲಿ ವಿದ್ಯಾರ್ಥಿಯು ಪಡೆಯಲಿರುವ ಅಂಕಗಳ ಮಾಹಿತಿಯನ್ನು ಭರ್ತಿ ಮಾಡಲು ಜಾಗ ಮೀಸಲಿಡಲಾಗಿರುತ್ತದೆ.

ಹೇಗಿರಲಿದೆ ಪರೀಕ್ಷೆ?

ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಕ್ತಾಯವಾಗಿರುವುದರಿಂದ ಉಳಿದ ಅರ್ಧ ವರ್ಷದಲ್ಲಿನ ಪಠ್ಯವಸ್ತುವನ್ನಾ ಧರಿಸಿದಂತೆ ಪರೀಕ್ಷೆಯನ್ನು ಐದು ಮತ್ತು ಎಂಟನೇ ತರಗತಿಗಳಿಗೆ 50 ಅಂಕಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ 40 ಅಂಕಗಳು ಲಿಖಿತ ಪರೀಕ್ಷೆಗೆ ಮೀಸಲಾಗಿದ್ದರೆ, 10 ಅಂಕಗಳ ಮೌಖಿಕ ಪರೀಕ್ಷೆ ನಡೆಸಲಾಗುತ್ತದೆ.

ಲಿಖಿತ ಪರೀಕ್ಷೆಯ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯು 40 ಅಂಕಗಳಿಗೆ ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, 20 ಅಂಕಗಳಿಗೆ ಎಂ.ಸಿ.ಕ್ಯೂ ಪಶ್ನೆಗಳನ್ನು ( ಒಂದು ಪ್ರಶ್ನೆಗೆ ನಾಲ್ಕು ಉತ್ತರ ನೀಡಲಾಗಿರುತ್ತದೆ. ಇದರಲ್ಲಿ ಸರಿಯಾದ ಉತ್ತರವನ್ನು ವಿದ್ಯಾರ್ಥಿಯು ಗುರುತಿಸಬೇಕಿರುತ್ತದೆ ) ಹಾಗೂ ಉಳಿದ 20 ಅಂಕಗಳಿಗೆ ವಾಕ್ಯ ರೂಪದಲ್ಲಿನ ಬರವಣಿಗೆಯನ್ನಾಧರಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉತ್ತರ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಇದನ್ನು ಸ್ಪಷ್ಟವಾಗಿ ತೋರಿಸಲಾಗಿದೆ.

ಮಾದರಿ ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ (Click Here) ಮಾಡಿ

ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ಮಾದರಿಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳು ತಾವು ಓದುವ ಮಾಧ್ಯಮದ ಪತ್ರಿಕೆಯನ್ನು ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಬಹುದಾಗಿದೆ.

ಎಂದು ಪರೀಕ್ಷೆ ನಡೆಯಲಿದೆ?
ಈಗ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅಂತಿಮ ವೇಳಾಪಟ್ಟಿಯನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದೆ ಪ್ರಕಟಿಸಲಿದೆ.
ಪರೀಕ್ಷೆಯು ದಿನಾಂಕ: 09.03.2023 ರಿಂದ 17.03.2023ರವರೆಗೆ ನಡೆಯಲಿದೆ.
ಮೌಲ್ಯಮಾಪನವನ್ನು ದಿನಾಂಕ: 21.03.2023 ರಿಂದ 28.03.2023ರವರೆಗೆ ನಡೆಸಲಾಗುತ್ತದೆ.
ಫಲಿತಾಂಶವನ್ನು ದಿನಾಂಕ: 31.03.2023 ರಿಂದ 05.04.2023ರವರೆಗೆ ಸಿದ್ಧಪಡಿಸಲಾಗುತ್ತದೆ.
ದಿನಾಂಕ: 08.04.2023 ಮತ್ತು 10.04.2023 ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.

ಈ ಪಬ್ಲಿಕ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ರೂಪಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ (KSEEB) ಈ ಪರೀಕ್ಷೆ ನಡೆಸುವ ಮತ್ತು ಮೌಲ್ಯಮಾಪನ ಮಾಡುವ ಜವಾಬ್ದಾರಿ ಹೊತ್ತಿದೆ. ರಾಜ್ಯಮಟ್ಟದಲ್ಲಿಯೇ ಮಾದರಿ ಪ್ರಶ್ನೆ ಪತ್ರಿಕೆಗಳು ಸಿದ್ಧವಾಗಿವೆ.

ಪ್ರಶ್ನೆ ಪತ್ರಿಕೆಯು ಕಲಿಕಾ ಚೇತರಿಕೆ ಪಠ್ಯಕ್ರಮದ ಅಡಿಯಲ್ಲಿ ತಯಾರಿಸಲು ಸರ್ಕಾರವು ಸೂಚಿಸಿದ್ದು, ಅದರಂತೆ ಕಲಿಕಾ ಚೇತರಿಕೆ ಪಠ್ಯ ಕ್ರಮವು ಪ್ರಸ್ತುತ ಪಠ್ಯವಸ್ತುವನ್ನಾಧರಿಸಿ ರೂಪಿಸಿರುವುದರಿಂದ ಪಠ್ಯ ಪುಸ್ತಕ ಮತ್ತು ಕಲಿಕಾ ಚೇತರಿಕೆಯನ್ನಾಧರಿಸಿದಂತೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿದೆ.

ಮೌಲ್ಯಮಾಪನ ಎಲ್ಲಿ?

ತಾಲೂಕು ಮಟ್ಟದಲ್ಲಿ ಈ ಪರೀಕ್ಷೆಯ ಮೌಲ್ಯಮಾಪನ ನಡೆಯಲಿದೆ. ತಾಲೂಕಿನ ಒಂದು ಶಾಲೆಯನ್ನು ಮೌಲ್ಯಮಾಪನ ಕೇಂದ್ರವನ್ನಾಗಿ ನಿಗದಿಪಡಿಸಲಾಗುತ್ತದೆ. ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ಮೌಲ್ಯಮಾಪನ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಏಕ ಕಾಲಕ್ಕೆ ಎಲ್ಲ ವಿಷಯಗಳಿಗೆ ವಿಷಯವಾರು ಪ್ರತ್ಯೇಕ ಕೊಠಡಿಯಲ್ಲಿ ಮೌಲ್ಯಮಾಪನ ಮಾಡಿ, ನಾಲ್ಕರಿಂದ ಐದು ದಿನಗಳಲ್ಲಿ ಮೌಲ್ಯಮಾಪನ ಮುಕ್ತಾಯಗೊಳಿಸಲಾಗುತ್ತದೆ.

ಇದನ್ನೂ ಓದಿ : Education News | 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ; ಫೇಲ್‌ ಆದರೆ ಮುಂದೇನು?

Exit mobile version