ಬೆಂಗಳೂರು: ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳನ್ನು ಹಾಗೂ ಪಠ್ಯ ವಿಷಯಗಳನ್ನು ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಬಜೆಟ್‌ನಲ್ಲಿ (Karnataka Budget 2023) ಪ್ರಕಟಿಸಲಾಗಿದೆ.
ಇದರಿಂದ ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯಲು ಇದ್ದ ದೊಡ್ಡ ತೊಡಕು ನಿವಾರಣೆಯಾಗುವ ಸಾಧ್ಯತೆ ಇದೆ. ಕನ್ನಡ ಮಾಧ್ಯಮದಲ್ಲಿಯೇ ಓದಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಾಕಷ್ಟು ಅಧ್ಯಯನ ಸಾಮಗ್ರಿಗಳಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದರು.
ಇದಲ್ಲದೆ ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಯೂನಿವರ್ಸಿಟಿಯನ್ನು (UVCE) ಉನ್ನತೀಕರಣಗೊಳಿಸಲು ಮೂಲಭೂತ ಸೌಕರ್ಯಕ್ಕಾಗಿ 25 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ನಕಲಿ ಅಂಕಪಟ್ಟಿ ಹಾವಳಿಗೆ ತಡೆ
ನಕಲಿ ಅಂಕಪಟ್ಟಿ ಹಾವಳಿಯನ್ನು ತಪ್ಪಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಎಲ್ಲ ವಿದ್ಯಾರ್ಥಿಗಳು Academic Bank of Credits ನಲ್ಲಿ ನೋಂದಾಯಿಸಿಕೊಂಡು ಹಾಗೂ ನೇಮಕಾತಿಯಲ್ಲಿ NAD/Digilocker ನಲ್ಲಿನ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಉನ್ನತ ಶಿಕ್ಷಣ ಇಲಾಖೆಯಡಿ ನಿರ್ಮಿಸಿರುವ 13,169 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ 224 ವಸತಿ ನಿಲಯಗಳನ್ನು ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಗೆ ಈ ವಸತಿ ನಿಲಯಗಳ ನಿರ್ವಹಣೆ ದೊಡ್ಡ ತಲೆಬಿಸಿಯಾಗಿತ್ತು.
ಪುಸ್ತಕ ಖರೀದಿಗೆ 10 ಕೋಟಿ
ರಾಜ್ಯದ ಸಾಹಿತಿಗಳ ಹಾಗೂ ಪ್ರಕಾಶಕರ ಬೇಡಿಕೆಗಳಿಗೆ ಸ್ಪಂದಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಉತ್ತಮ ಪುಸ್ತಕಗಳನ್ನು ಖರೀದಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯಡಿ ಎಲ್ಲಾ ಶಿಷ್ಯ ವೇತನ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಏಕ ಶಿಷ್ಯ ವೇತನ ಕಾರ್ಯಕ್ರಮದಡಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಸಾರ್ವಜನಿಕ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆಯನ್ನು ಉತ್ತಮಪಡಿಸಲು 10 ಸುಶಾಸನ ಸೂಚ್ಯಂಕಗಳನ್ನು (Good Governance Indicators) ರಚಿಸಲಾಗಿದ್ದು, ಇದರನ್ವಯ ಅತ್ಯುತ್ತಮ ಸಾಧನೆ ಮಾಡುವ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷ ರೂ. ಗಳಂತೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.
ಇದನ್ನೂ ಓದಿ : Karnataka Budget 2023 : ರಾಷ್ಟ್ರೀಯ ಶಿಕ್ಷಣ ನೀತಿ ರದ್ದು; ರಾಜ್ಯದಲ್ಲಿ ಜಾರಿಗೆ ಬರಲಿದೆ ಹೊಸ ನೀತಿ
ಪಿಎಚ್‌ಡಿ ಸೀಟುಗಳಿಗೆ ಕೌನ್ಸೆಲಿಂಗ್
ವೃತ್ತಿ ಚೈತನ್ಯ ಯೋಜನೆಯಡಿಯಲ್ಲಿ ಇಲಾಖೆಯ ಸುಮಾರು 7,800 ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಯೋಜಿಸಲಾಗುವುದು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ Ph.D. ಸೀಟುಗಳನ್ನು ಭರ್ತಿ ಮಾಡುವ ವಿಧಾನದಲ್ಲಿ ಏಕರೂಪತೆಯನ್ನು ತರಲಾಗುವುದು. ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳ Ph.D. ಸೀಟುಗಳಿಗೆ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಶೇ.40 ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು.
ಬಜೆಟ್‌ನ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಕಾಲೇಜುಗಳಲ್ಲಿ ಇಂಗ್ಲಿಷ್ ಕ್ಲಾಸ್
ಬೆಂಗಳೂರಿನ ಎಸ್.ಕೆ.ಎಸ್.ಜೆ.ಟಿ.ಐ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಜವಳಿ ತಂತ್ರಜ್ಞಾನ ವಿಭಾಗವನ್ನು ರಾಷ್ಟ್ರೀಯ Technical Textile ಅಭಿಯಾನ ಮತ್ತು ಪಿಎಂ-ಮಿತ್ರ ಯೋಜನೆಗಳಡಿ Smart and Technical Textile Centre ಆಗಿ ಉನ್ನತೀಕರಿಸಲಾಗುವುದು. ರಾಜ್ಯದ ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಿಟಿಷ್ ಕೌನ್ಸಿಲ್ ಮತ್ತು ಪ್ರಾದೇಶಿಕ ಆಂಗ್ಲ ಸಂಸ್ಥೆಯ ಸಹಕಾರದೊಂದಿಗೆ ವ್ಯಾವಹಾರಿಕ ಆಂಗ್ಲ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.