ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ 2020 (national education policy) ಯನ್ನು ರದ್ದು ಪಡಿಸುವ ಮಹತ್ವದ ತೀರ್ಮಾನವನ್ನು ಶುಕ್ರವಾರದಂದು ಮಂಡಿಸಲಾದ ರಾಜ್ಯ ಬಜೆಟ್‌ನಲ್ಲಿ (Karnataka Budget 2023) ಘೋಷಿಸಲಾಗಿದೆ. ಇದಕ್ಕೆ ಬದಲಾಗಿ ʻರಾಜ್ಯ ಶಿಕ್ಷಣ ನೀತಿʼಯನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಲಾಗಿದೆ.
ʻʻಕೇಂದ್ರ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವಂತಹ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ. ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿ ಇರುವ ನಮ್ಮ ದೇಶಕ್ಕೆ ಏಕರೂಪದ ಶಿಕ್ಷಣ ವ್ಯವಸ್ಥೆ ಹೊಂದಿಕೊಳ್ಳುವುದಿಲ್ಲʼʼ ಎಂದು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ʻʻರಾಜ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯುವ, ಉನ್ನತ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಿ ಯುವಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿಸಲು ಒತ್ತು ನೀಡುವ ನಿಟ್ಟಿನಲ್ಲಿ ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಾಂಶಗಳನ್ನು ಒಳಗೊಂಡ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗುವುದುʼʼ ಎಂದು ಕೂಡ ಅವರು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಈ ನೀತಿ ಜಾರಿಯಲ್ಲಿದೆ. ಆದರೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ʻʻಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲಾಗುವುದುʼʼ ಎಂದು ಸ್ಪಷ್ಟವಾಗಿಯೇ ಹೇಳಿತ್ತು. ಅದರಂತೆಯೇ ಸರ್ಕಾರ ಈಗ ನಡೆದುಕೊಂಡಿದೆ. ಆದರೆ ಸರ್ಕಾರದ ಈ ನಿರ್ಧಾರ ಶಿಕ್ಷಣ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಲಿದೆ.
ʻಶಿಕ್ಷಣವು ವಿಮೋಚನಾ ಶಕ್ತಿಯಾಗಿದೆ ಮತ್ತು ನಮ್ಮ ಕಾಲದಲ್ಲಿ ಜನತಂತ್ರವನ್ನು ಸ್ಥಾಪಿಸುವ ಶಕ್ತಿಯೂ ಆಗಿದೆ; ಶಿಕ್ಷಣವು ಜಾತಿ ಮತ್ತು ವರ್ಗದ ನಿರ್ಬಂಧಗಳನ್ನು ತೊಲಗಿಸಿ, ಹುಟ್ಟಿನಿಂದ ಅಥವಾ ಇನ್ನಾವುದೇ ಪರಿಸ್ಥಿತಿಯಿಂದ ಉದ್ಭವಿಸಿದ ಅಸಮಾನತೆಗಳನ್ನು ನಿವಾರಿಸುತ್ತದೆʼ. ಎಂಬ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮಾತಿನೊಂದಿಗೆ ಶಿಕ್ಷಣಕ್ಕೆ ಸಂಬಂಧಿಸಿದ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಈ ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ.
ಶಾಲಾ ಶಿಕ್ಷಣ ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ, ಆ ಮೂಲಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವು ಮಕ್ಕಳ ಶಾರೀರಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ, ಜ್ಞಾನ ಮತ್ತು ಮನೋವಿಕಾಸಕ್ಕೆ ಪೂರಕವಾಗಿರಬೇಕು. ಶಿಕ್ಷಣವು ಬಾಂಧವ್ಯ, ಭ್ರಾತೃತ್ವ, ಸಾಮರಸ್ಯ ಮತ್ತು ಸಹಬಾಳ್ವೆಯ ಮನೋಭಾವ ಮೂಡಿಸುವಂತಿರಬೇಕು. ಈ ಆಶಯಕ್ಕೆ ವಿರುದ್ಧವಾದ ಪಠ್ಯಗಳನ್ನು ಹಿಂದಿನ ಸರ್ಕಾರವು ಪಠ್ಯ ಪರಿಷ್ಕರಣೆಯಲ್ಲಿ ಸೇರ್ಪಡೆಗೊಳಿಸಿದ್ದು, ಅವುಗಳನ್ನು ಪ್ರಸಕ್ತ ಸಾಲಿನಿಂದಲೇ ಕೈಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಬಜೆಟ್‌ನ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಶಾಲಾ ಕೊಠಡಿಗಳಿಗೆ 310 ಕೋಟಿ
ಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂ.ಗಳು ಹಾಗೂ ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂ. ಸೇರಿದಂತೆ ಒಟ್ಟು 550 ಕೋಟಿ ರೂ.ಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯದ ದೃಷ್ಟಿಯಿಂದ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಕಡಿಮೆ ಶೌಚಾಲಯಗಳಿರುವ 5,775 ಶಾಲೆಗಳಲ್ಲಿ ಹಾಗೂ 150 ಕಾಲೇಜುಗಳಲ್ಲಿ ಶೌಚಾಲಯ ಘಟಕಗಳನ್ನು ನರೇಗಾ ಯೋಜನೆಯ ಸಂಯೋಜನೆಯೊಂದಿಗೆ 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.
ಹಳೆಯ ಶಾಲಾ ಕಾಲೇಜು ಕಟ್ಟಡಗಳು ಹಾಗೂ ಮಳೆಯಿಂದಾಗಿ ಶಿಥಿಲಗೊಂಡಿರುವ 3,833 ಶಾಲೆಗಳು ಹಾಗೂ 724 ಪದವಿ ಪೂರ್ವ ಕಾಲೇಜು ಕೊಠಡಿಗಳನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿಗೊಳಿಸುವ ಮೂಲಕ ಬಳಕೆಗೆ ಯೋಗ್ಯಗೊಳಿಸಲಾಗುವುದು. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣೆಗಾಗಿ ನೀಡುತ್ತಿರುವ ಅನುದಾನವನ್ನು ಕನಿಷ್ಠ 20,000 ರೂ. ದಿಂದ 45,000 ರೂ. ಗಳವರೆಗೆ ಹೆಚ್ಚಿಸಿ 47,227 ಶಾಲೆಗಳು ಹಾಗೂ 1,231 ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಗಾಗಿ ಒಟ್ಟಾರೆಯಾಗಿ 153 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
9 ಮತ್ತು 10ನೇ ತರಗತಿಗೂ ಮೊಟ್ಟೆ
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ/ ಶೇಂಗಾ ಚಿಕ್ಕಿ/ ಬಾಳೆಹಣ್ಣನ್ನು ವಿತರಿಸಲಾಗುತ್ತಿದ್ದು, ಈಗ ವಾರದಲ್ಲಿ ಎರಡು ದಿವಸ ವಿತರಿಸಲಾಗುವುದು. ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಿ 280 ಕೋಟಿ ರೂ.ಗಳ ವೆಚ್ಚದಲ್ಲಿ 60 ಲಕ್ಷ ಮಕ್ಕಳಿಗೆ ಒದಗಿಸಲಾಗುವುದು ಎಂದು ಪ್ರಕಟಿಸಲಾಗಿದೆ.
ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ನ್ಯೂನತೆಯನ್ನು ಹೋಗಲಾಡಿಸಲು ಸುಮಾರು 33 ಲಕ್ಷ ವಿದ್ಯಾರ್ಥಿಗಳಿಗೆ 80 ಕೋಟಿ ರೂ.ಗಳ ವೆಚ್ಚದಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ʻಮರುಸಿಂಚನʼ ಎಂಬ ಹೊಸ ಯೋಜನೆಯಡಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಒಂದೂವರೆ ಲಕ್ಷ ವಿದ್ಯಾರ್ಥಿಗಳನ್ನು ಪ್ರೌಢ ಹಂತದ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ವಿಶೇಷ ತರಬೇತಿಯನ್ನು ನೀಡಲಾಗುವುದು. ಶಾಲಾ ಶಿಕ್ಷಣ ಇಲಾಖೆಯಲ್ಲಿನ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸುವ ಸ್ಯಾಟ್ಸ್ ತಂತ್ರಾಂಶವನ್ನು SATS 2.0 ಎಂದು ಉನ್ನತೀಕರಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Karnataka Budget 2023: ಕರ್ನಾಟಕ ರಾಜ್ಯ ಸರಕಾರ ಸಂಗ್ರಹಿಸಲಿರುವ ತೆರಿಗೆ ವಿವರಗಳು ಇಂತಿದೆ
ಕಾಲೇಜುಗಳಲ್ಲಿ ಇನ್ನೋವೇಶನ್ ಲ್ಯಾಬ್
ಹೊಸ ಕಲ್ಪನೆಯನ್ನು ವಾಸ್ತವಕ್ಕೆ ತರಲು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮಾಧ್ಯಮಿಕ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಇನ್ನೋವೇಶನ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. 2023-24ನೇ ಸಾಲಿನಲ್ಲಿ ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ನಾಲ್ಕು ಪ್ರಯೋಗಾಲಯಗಳನ್ನು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನ ʻಸಸ್ಯ ಶ್ಯಾಮಲʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.