ಬೆಂಗಳೂರು: ರಾಜ್ಯದಲ್ಲಿನ ಎಲ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಇನ್ನು ಮುಂದೆ ಪ್ರತಿದಿನ 10 ನಿಮಿಷ ಧ್ಯಾನ ಮಾಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉದ್ದೇಶಿಸಿದೆ.
ಶಾಲೆಗಳಲ್ಲಿ ಪ್ರತಿನಿತ್ಯ ಧಾನ್ಯ ಮಾಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗಲಿದೆ ಎಂದು ಇಲಾಖೆಯು ಈ ನಿರ್ಧಾರ ತೆಗೆದುಕೊಂಡಿದೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಾಡಿಕೊಂಡ ಮನವಿಯ ಮೇರೆಗೆ ಇಲಾಖೆಯ ಸಚಿವ ಬಿ.ಸಿ. ನಾಗೇಶ್ ಈ ಸಂಬಂಧ ಆದೇಶ ಹೊರಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಸಮಯ ನಿಗದಿಪಡಿಸಿಕೊಂಡು, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಶಾಲೆಗಳಿಗೆ ಸೂಚಿಸುವಂತೆ ತಿಳಿಸಿದ್ದಾರೆ.
ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದೆ. ಈಗಾಗಲೇ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಧ್ಯಾನವನ್ನು ಮಾಡಸಲಾಗುತ್ತಿದ್ದು, ರಾಜ್ಯದಲ್ಲಿನ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿಯೂ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿಸಲು ಅವಕಾಶ ಕಲ್ಪಿಸಬೇಕೆಂದು ಸಂಘವು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿತ್ತು.
“ನಮ್ಮ ಮನವಿಯನ್ನು ಶಿಕ್ಷಣ ಸಚಿವರು ಒಪ್ಪಿ ಎಲ್ಲ ಶಾಲೆಗಳಲ್ಲಿಯೂ ಧ್ಯಾನ ಮಾಡಿಸಲು ಸೂಚಿಸಿದ್ದಾರೆ. ಇದರಿಂದ ಶಾಲೆಗಳ ವಾತಾವರಣದಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದು, ಇದಕ್ಕೆ ಅವಕಾಶ ಮಾಡಿಕೊಟ್ಟ ಶಿಕ್ಷಣ ಸಚಿವರಿಗೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆʼʼ ಎಂದು ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.
ವಿದ್ಯಾರ್ಥಿಗಳು ಧ್ಯಾನ ಮಾಡುವುದರಿಂದ ಶರೀರದಲ್ಲಿರುವ 72 ಸಾವಿರ ನಾಡಿಗಳು ಶುಚಿಯಾಗುತ್ತವೆ. ನಾಡೀಮಂಡಲ ಶುದ್ಧಿ ಆಗುವುದರಿಂದ ಶರೀರ ದೃಢಕಾಯವಾಗುತ್ತದೆ. ಧ್ಯಾನ ಸಾಧನೆಯಿಂದ ಮಕ್ಕಳಲ್ಲಿ ಆಲಸ್ಯ, ಹಿಂಜರಿಕೆ ದೂರವಾಗಿ ಚುರುಕುತನ, ಧೈರ್ಯ ಮೊಳಕೆಯೊಡೆಯುತ್ತದೆ. ಕಲಿಕೆಯಲ್ಲಿ ಮಾತ್ರವಲ್ಲದೆ ಆಟಗಳಲ್ಲಿಯೂ ಪ್ರಗತಿ ಸಾಧಿಸಲಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಎಲ್ಲ ಕಾರ್ಯಗಳನ್ನು ಅವರು ಏಕಾಗ್ರತೆಯಿಂದ ಮಾಡಲಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ವಿವರಿಸಿದ್ದಾರೆ.
ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನೆ ಮಾಡಿಸಿದ ನಂತರ ಧ್ಯಾನ ಮಾಡಿಸಬೇಕೆಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಸದ್ಯವೇ ಈ ಸಂಬಂಧ ಇಲಾಖೆಯು ಆದೇಶ ಹೊರಡಿಸಲಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ “ವಿಸ್ತಾರ ನ್ಯೂಸ್ʼʼಗೆ ವಿವರಿಸಿದ್ದಾರೆ.
ಇದನ್ನೂ ಓದಿ| ನ್ಯೂಯಾರ್ಕ್ ಸಿಟಿಯಲ್ಲಿ ದೀಪಾವಳಿ ಹಬ್ಬಕ್ಕೆ ಶಾಲೆಗಳಿಗೆ ಸಾರ್ವತ್ರಿಕ ರಜೆ; ಬರುವ ವರ್ಷದಿಂದ ನಿಯಮ ಜಾರಿ