Site icon Vistara News

KCET 2022| ಅರ್ಜಿ ಪೂರ್ಣಗೊಳಿಸಲು 8ನೇ ಬಾರಿಗೆ ಅವಕಾಶ ನೀಡಿದ ಕೆಇಎ

KCET 2022

ಬೆಂಗಳೂರು: ಎಂಜಿನಿಯರಿಂಗ್‌, ಕೃಷಿ ವಿಜ್ಞಾನ ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (KCET) ಅಪೂರ್ಣ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತೊಂದು ಅವಕಾಶ ನೀಡಿದೆ.

ಇದುವರೆಗೆ ಕೆಇಎಯು ಏಳು ಬಾರಿ ಅವಕಾಶ ನೀಡಿತ್ತು. ಈಗ ಎಂಟನೇ ಬಾರಿಗೆ ಅವಕಾಶ ನೀಡಲಾಗಿದೆ. ಏಳು ಬಾರಿ ಅವಕಾಶ ನೀಡಿದರೂ ಕೆಲ ವಿದ್ಯಾರ್ಥಿಗಳು ಪೂರ್ಣವಾಗಿ ಅರ್ಜಿ ತುಂಬಿಲ್ಲ, ಕೆಲವರು ಫೋಟೊ ಅಪ್‌ ಲೋಡ್‌ ಮಾಡಿಲ್ಲ, ಇನ್ನು ಕೆಲವರು ಅರ್ಜಿ ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸಿಲ್ಲ. ಸಹಿ ಮತ್ತು ಹೆಬ್ಬೆಟ್ಟಿನ ಗುರುತನ್ನು ಸರಿಯಾಗಿ ಅಪ್‌ಲೋಡ್‌ ಮಾಡಿಲ್ಲ. ಹೀಗಾಗಿ ಪರೀಕ್ಷೆಗೆ ಕೆಲವೇ ದಿನ ಬಾಕಿ ಇರುವಾಗ ಮತ್ತೊಂದು ಅವಕಾಶ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೆಇಎ ತಿಳಿಸಿದೆ.

ಅರ್ಜಿಯನ್ನು ಸರಿಯಾಗಿ ಸಲ್ಲಿಸದೇ ಇರುವ ಆಸಕ್ತ ವಿದ್ಯಾರ್ಥಿಗಳು ಈಗ ಆನ್‌ಲೈನ್‌ನಲ್ಲಿಯೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜೂನ್‌ 11ರ ಸಂಜೆ 4 ಗಂಟೆಯಿಂದ ಜೂನ್‌ 13 ರ ಸಂಜೆ 4 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಪೊರ್ಟಲ್‌ ಅನ್ನು ತೆರೆಯಲಾಗುತ್ತದೆ.

ಕೆಇಎ ಪ್ರಕಟಣೆ ಹೀಗಿದೆ;

ಇದು ಕೊನೆಯ ಅವಕಾಶವಾಗಿದ್ದು, ಮತ್ತೆ ಅವಕಾಶ ನೀಡಲಾಗುವುದಿಲ್ಲ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕೊನೆಯ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವನ್ನು ಕೆಇಎ ನಿಗದಿಪಡಿಸಲಿದೆ. ರಾಜ್ಯದ ಯಾವುದೇ ಭಾಗದಲ್ಲಿ ಕೇಂದ್ರವನ್ನು ನಿಗದಿಪಡಿಸಬಹುದಾಗಿರುತ್ತದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು, ಕೇಂದ್ರ ಬದಲಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ.

ಈ ಪರೀಕ್ಷೆಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿಗೆ ಭೇಟಿ ನೀಡಿ, ನಿಗದಿತ ಲಿಂಕ್‌ ಅನ್ನು ಆಯ್ಕೆ ಮಾಡಿಕೊಂಡು, “ಸಿಇಟಿ-2022ʼʼ (KCET-2022)ರ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಯಾವ ಪರೀಕ್ಷೆ ಎಂದು?

ಈಗಾಗಲೇ ಕೆಇಎ ಪ್ರಕಟಿಸಿದ ದಿನಗಳಂದೇ ಸಿಇಟಿ (KCET) ನಡೆಯಲಿದೆ. ಯಾವ ಪರೀಕ್ಷೆ ಎಂದು ನಡೆಯಲಿದೆ ಎಂಬ ವೇಳಾಪಟ್ಟಿ ಇಂತಿದೆ;

ಇದನ್ನೂ ಓದಿ | KCET 2022 | ಪರೀಕ್ಷೆಯಲ್ಲಿ ಹಿಜಾಬ್‌ಗಿಲ್ಲ ಅವಕಾಶ

Exit mobile version