ಬೆಂಗಳೂರು: ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳ 2021ನೇ ಸಾಲಿನ ಪಿಯು ಅಂಕಗಳನ್ನು 2022 ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗೆ (KCET 2022) ಪರಿಗಣಿಸುವ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಈಗ ಮತ್ತೆ ಸರ್ಕಾರದ ಅಂಗಳಕ್ಕೆ ಬಂದಿದ್ದು, ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ವಿದ್ಯಾರ್ಥಿಗಳೆಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.
ಸೋಮವಾರದಂದು ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಈ ಬಿಕ್ಕಟ್ಟು ಬಗೆಹರಿಸಲು ಎಲ್ಲರಿಗೂ ಒಪ್ಪಿಗೆಯಾಗುವಂತಹ ಪರಿಹಾರ ಸೂತ್ರ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಅಲ್ಲದೆ, ಸೂಕ್ತ ಕ್ರಮ ತೆಗೆದುಕೊಳ್ಳಲು ಸೆಪ್ಟೆಂಬರ್ 22ರವರೆಗೆ ರಾಜ್ಯ ಸರ್ಕಾರಕ್ಕೆ ಸಮಯ ನಿಗದಿಪಡಿಸಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಸರ್ಕಾರ ಯಾವ ವಿದ್ಯಾರ್ಥಿಗೂ ಅನ್ಯಾಯವಾಗದಂತಹ ಒಂದು ದಾರಿಯನ್ನು ಕಂಡುಕೊಳ್ಳಬೇಕಾಗಿದೆ.
ಪ್ಲ್ಯಾನ್ “ಬಿʼʼ ರೆಡಿ ಇದೆಯೇ?
2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ, ಪುನರಾವರ್ತಿತ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆದ ಅಂಕಗಳನ್ನೂ ಪರಿಗಣಿಸಿ, ಹೊಸದಾಗಿ ರ‍್ಯಾಂಕ್ ಪಟ್ಟಿ ಪ್ರಕಟಿಸಲು ಕೆಇಎಗೆ ನಿರ್ದೇಶನ ನೀಡಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠ ನೀಡಿದ್ದ ತೀರ್ಪನ್ನು ರದ್ದುಪಡಿಸುವಂತೆ ಕೋರಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರ, ಒಂದು ವೇಳೆ ಹೈಕೋರ್ಟ್ ಒಪ್ಪದಿದ್ದರೆ, ಏನು ಮಾಡಬೇಕೆಂಬ ಕುರಿತು ಈಗಾಗಲೇ ಯೋಚಿಸಿದ್ದು, ಪರ್ಯಾಯ ಕ್ರಮಗಳನ್ನು (ಪ್ಲ್ಯಾನ್ “ಬಿʼʼ) ತೆಗೆದುಕೊಳ್ಳಲು ಸಿದ್ಧತೆ ನಡೆಸಿತ್ತು.
ಈಗ ಹೈ ಕೋರ್ಟ್ ಎಲ್ಲರಿಗೂ ಒಪ್ಪಿಗೆಯಾಗುವಂತಹ ಪರಿಹಾರ ಸೂತ್ರ ರೂಪಿಸುವಂತೆ ಸೂಚಿಸಿರುವುದರಿಂದ ಅದರ ಜಾರಿಯ ಕುರಿತು ಚರ್ಚಿಸಿ ಈಗ ಹೈಕೋರ್ಟ್‌ಗೆ ಅದನ್ನು ಸಲ್ಲಿಸಬೇಕಾಗಿದೆ. ಪರ್ಯಾಯವಾಗಿ ಈಗಾಗಲೇ ಪುನರಾವರ್ತಿತ ವಿದ್ಯಾರ್ಥಿಗಳನ್ನೂ ಒಳಗೊಂಡ ರ‍್ಯಾಂಕ್ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡಿದೆ. ಆದರೆ ಪುನರಾವರ್ತಿತ ವಿದ್ಯಾರ್ಥಿಗಳು ಕಳೆದ ವರ್ಷದ ಪಿಯುಸಿಯಲ್ಲಿ ಪಡೆದ ಅಂಕ ಮತ್ತು ಸಿಇಟಿಯಲ್ಲಿ ಪಡೆದ ಅಂಕವನ್ನು ಯಾವ ಅನುಪಾತದಲ್ಲಿ (ratio) ಲೆಕ್ಕಾಚಾರ ಹಾಕಬೇಕೆಂಬ ಕುರಿತು ಗೊಂದಲವಿದ್ದು, ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನಕ್ಕೆ ಬರಬೇಕಾಗಿದೆ.
ರ‍್ಯಾಂಕ್ ಪಟ್ಟಿಯಲ್ಲಿ ಏನೆಲ್ಲಾ ಬದಲಾವಣೆ?
ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 50:50 ಮತ್ತು 75:25 ಅನುಪಾತದಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳ ಅಂಕಗಳನ್ನು ಪರಿಗಣಿಸಿ ರ‍್ಯಾಂಕ್ ಪಟ್ಟಿ ಸಿದ್ಧಪಡಿಸಿಟ್ಟುಕೊಂಡಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ. ಒಂದು ವೇಳೆ 75:25 ಅನುಪಾತದ ಪ್ರಕಾರ ರ‍್ಯಾಂಕ್ ಪಟ್ಟಿ ಸಿದ್ಧಪಡಿಸಿದಲ್ಲಿ, 1 ರಿಂದ 1,000ದ ರ‍್ಯಾಂಕ್ ಪಟ್ಟಿಯಲ್ಲಿ ಕೇವಲ ಐದು ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಮಾತ್ರ ಸ್ಥಾನ ಪಡೆಯಲಿದ್ದಾರೆ. 50:50 ಅನುಪಾತದ ಪ್ರಕಾರ ರ‍್ಯಾಂಕ್ ಪಟ್ಟಿ ಸಿದ್ಧಪಡಿಸಿದರೆ 64 ವಿದ್ಯಾರ್ಥಿಗಳು ಸ್ಥಾನ ಪಡೆದುಕೊಳ್ಳಲಿದ್ದಾರೆ. 75:25 ಅನುಪಾತದ ಪ್ರಕಾರ ರ‍್ಯಾಂಕ್ ಪಟ್ಟಿ ಸಿದ್ಧಪಡಿಸಿದಲ್ಲಿ, ಒಂದು ಸಾವಿರದಿಂದ ಒಂದು ಲಕ್ಷದವರೆಗಿನ ರ‍್ಯಾಂಕ್ ಪಟ್ಟಿಯಲ್ಲಿ 10,056 ವಿದ್ಯಾರ್ಥಿಗಳು ಸ್ಥಾನ ಪಡೆಯಲಿದ್ದಾರೆ. 50:50 ಅನುಪಾತದ ಪ್ರಕಾರ ಪಟ್ಟಿ ಸಿದ್ಧಪಡಿಸಿದರೆ 19,801 ವಿದ್ಯಾರ್ಥಿಗಳಷ್ಟೇ ಸ್ಥಾನ ಪಡೆಯಲಿದ್ದಾರೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಸಿಇಟಿ ಪ್ರಕಟಿಸಿರುವ ರ‍್ಯಾಂಕ್ ಪಟ್ಟಿಯಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳ ಸಿಇಟಿ ಅಂಕವನ್ನು ಮಾತ್ರ ಪರಿಗಣಿಸಲಾಗಿದ್ದು, ಒಂದು ಸಾವಿರದಿಂದ ಒಂದು ಲಕ್ಷದವರೆಗಿನ ರ‍್ಯಾಂಕ್ ಪಟ್ಟಿಯಲ್ಲಿ 24,074 ವಿದ್ಯಾರ್ಥಿಗಳ ಪೈಕಿ 3,521 ವಿದ್ಯಾರ್ಥಿಗಳು ಮಾತ್ರ ಸ್ಥಾನ ಪಡೆದಿದ್ದರು. 10,000 ದಿಂದ15,000 ದೊಳಗಿನ ರ‍್ಯಾಂಕ್ ಪಟ್ಟಿಯಲ್ಲಿ ಕೇವಲ 70 ಪುನರಾವರ್ತಿತ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದರು. 90,000 ರಿಂದ 1 ಲಕ್ಷದವರೆಗಿನ ಪಟ್ಟಿಯಲ್ಲಿ 514 ವಿದ್ಯಾರ್ಥಿಗಳಿದ್ದರು.
ಈ ಬಾರಿಯ ವಿದ್ಯಾರ್ಥಿಗಳಿಗೆ ಅನ್ಯಾಯ?
ಪುನರಾವರ್ತಿತ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ರ‍್ಯಾಂಕ್ ಪಟ್ಟಿ ಸಿದ್ಧಪಡಿಸಿದರೆ, ಈ ವರ್ಷ ಪಿಯುಸಿ ಬರೆದ 1.74 ಲಕ್ಷ ವಿದ್ಯಾರ್ಥಿಗಳ ರ‍್ಯಾಂಕಿಂಗ್ ಏರುಪೇರಾಗಲಿದೆ. ಇದರಿಂದ ಎಲ್ಲ ವಿದ್ಯಾರ್ಥಿಗಳಿಗೂ ತೊಂದರೆಯಾಗಲಿದೆ ಎಂದು ಸರ್ಕಾರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿತ್ತು. ಆದರೆ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಂತೆ ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರ ಇದುವರೆಗೂ ಹೇಳಿರಲಿಲ್ಲ. ಈಗ ಕೋರ್ಟ್ ಕೂಡ ಅವರಿಗೂ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಿರುವುದರಿಂದ ಅನಿವಾರ್ಯವಾಗಿ ಪರಿಹಾರವೊಂದನ್ನು ಸರ್ಕಾರವೇ ಕಂಡುಕೊಳ್ಳಬೇಕಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಇಲಾಖೆಯ ಯಾವುದೇ ಮುನ್ಸೂಚನೆ ನೀಡದೆ, ಪುನರಾವರ್ತಿತ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೇ ಇರಲು ತೀರ್ಮಾನಿಸಿರುವುದು ಈ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ.
ಸರ್ಕಾರದ ಈ ನಿರ್ಧಾರದಿಂದ ಪರೀಕ್ಷೆ ಬರೆದ ತಮಗೆ ಅನ್ಯಾಯವಾಗುತ್ತಿದೆ ಎಂದು 24,074 ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಪ್ರಾಧಿಕಾರವು ಸ್ವೇಚ್ಛೆಯಿಂದ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಇದು ಅತಾರ್ಕಿಕವಾಗಿದೆ ಮತ್ತು ವಿವೇಚನಾರಹಿತವಾಗಿದೆ. ಪುನರಾವರ್ತಿತ ವಿದ್ಯಾರ್ಥಿಗಳಿಗೆ ತಾರತಮ್ಯ ಎಸಗಿದೆ. ಅಲ್ಲದೆ ಸಿಇಟಿ-2006ರ ಪ್ರವೇಶ ನಿಯಮಗಳ ಉಲ್ಲಂಘಟನೆಯಾಗಿದೆ ಎಂದು ಪುನರಾವರ್ತಿತ ವಿದ್ಯಾರ್ಥಿಗಳು ಕೋರ್ಟ್‌ನಲ್ಲಿ ವಾದಿಸಿದ್ದರು.
ಕೋವಿಡ್-19 ಕಾರಣಕ್ಕೆ 2020-21ನೇ ಸಾಲಿನಲ್ಲಿ ಪರೀಕ್ಷೆ ನಡೆಯದ ಕಾರಣ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಅವರ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ತೇರ್ಗಡೆಮಾಡಲಾಗಿತ್ತು. ಈ ವಿದ್ಯಾರ್ಥಿಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಈ ವರ್ಷ ಸಿಇಟಿ ಬರೆದಿರುವುದರಿಂದ ಅವರು ಪಿಯುಸಿಯಲ್ಲಿ ಪಡೆದ ಅಂಕವನ್ನು ರ‍್ಯಾಂಕ್ ಪಟ್ಟಿ ಸಿದ್ಧಪಡಿಸುವಾಗ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೆಇಎ ಮತ್ತು ಸರ್ಕಾರ ವಾದಿಸುತ್ತಿವೆ.
ಇದನ್ನೂ ಓದಿ|Karnataka DCET 2022 | ಡಿಸಿಇಟಿ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆ; ಹೊಸ ನಿಯಮ ಜಾರಿ