ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸಿದ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯ (KCET 2023) ಫಲಿತಾಂಶ ಜೂನ್ 15 ರಂದು (ನಾಳೆ) ಬೆಳಗ್ಗೆ 9.30ಕ್ಕೆ (KCET 2023 Result) ಪ್ರಕಟವಾಗಲಿದೆ.
ಈ ವಿಷಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ. ಈ ಪರೀಕ್ಷೆಯ ಕುರಿತು ಪ್ರಕಟಿಸಿದ್ದ ಮಾಹಿತಿ ಪುಸ್ತಕದಲ್ಲಿ ಜೂನ್ 12 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿತ್ತು. ಹೀಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕಾತುರದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.
ಜೂನ್ 15 ರ ಗುರುವಾರದಂದು ಬೆಳಗ್ಗೆ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ ಎಂದು ರಮ್ಯಾ ಮಾಹಿತಿ ನೀಡಿದ್ದಾರೆ. ಫಲಿತಾಂಶವನ್ನು ಪ್ರಕಟಿಸಲು ಪತ್ರಿಕಾಗೋಷ್ಠಿ ಕರೆಯಲಾಗಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್ ಮತ್ತು ಕೆಇಎಯ ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಈಗಾಗಲೇ ಸಿಇಟಿ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದು, ಸಿಇಟಿ ಅಂಕ ಮತ್ತು ದ್ವಿತೀಯ ಪಿಯುಸಿ ಅಂಕಗಳನ್ನು ಆಧರಿಸಿ ರ‍್ಯಾಂಕ್ ಪಟ್ಟಿ ಸಿದ್ಧಪಡಿಸುವ ಕಾರ್ಯವನ್ನೂ ಮುಗಿಸಲಾಗಿದೆ.
ಉನ್ನತ ಶಿಕ್ಷಣ ಸಚಿವರ ಲಭ್ಯತೆ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ನಿಗದಿತ ದಿನದಂದು ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಈಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಫಲಿತಾಂಶ ಪ್ರಕಟಿಸಲಾಗುತ್ತಿದೆ ಎಂದು ರಮ್ಯಾ ಹೇಳಿದ್ದಾರೆ.
ಫಲಿತಾಂಶ ನೋಡಲು ವೆಬ್ ವಿಳಾಸ: https://cetonline.karnataka.gov.in/kea
ಫಲಿತಾಂಶ ನೋಡುವುದು ಹೇಗೆ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನ ಮುಖಪುಟದಲ್ಲಿ ʻಯುಜಿಸಿಇಟಿ -2023 ಫಲಿತಾಂಶʼ ಎಂಬ ಲಿಂಕ್ ನೀಡಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಆಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಮತ್ತು ಪಾಸ್‌ವರ್ಡ್, ನಮೂದಿಸಿ ಲಾಗಿನ್ ಆಗಿ. ನಂತರ ಪರದೆಯ ಮೇಲೆ ನಿಮ್ಮ ಫಲಿತಾಂಶ ಕಾಣಸಿಗುತ್ತದೆ. ಫಲಿತಾಂಶವನ್ನು ಮುಂದಿನ ರೆಫ್ರೆನ್ಸ್‌ಗಾಗಿ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಈ ಬಾರಿ 2 ಲಕ್ಷದ 39 ಸಾವಿರದ 716 ಜನ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದರು. ಶೇ.93 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮೇ 20- ಜೀವಶಾಸ್ತ್ರ ಮತ್ತು ಗಣಿತ, ಮೇ 21- ರಸಾಯನಶಾಸ್ತ್ರ, ಭೌತಶಾಸ್ತ್ರ, ಮೇ 22- ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಸಲಾಗಿತ್ತು. ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆದು ಯಾವುದೇ ಗೊಂದಲವಿಲ್ಲದಂತೆ ಪರೀಕ್ಷೆಯನ್ನು ಪ್ರಾಧಿಕಾರ ನಡೆಸಿತ್ತು. ತಾತ್ಕಾಲಿಕ ಕೀ ಉತ್ತರಗಳನ್ನು (KCET Key Answer 2023) ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ವಿದ್ಯಾರ್ಥಿಗಳಿಂದ ಆಕ್ಷೇಪಣೆಗಳನ್ನೂ ಆಹ್ವಾನಿಸಿ, ಪರಿಶೀಲನೆ ನಡೆಸಿತ್ತು. ಅಂತಿಮ ಫಲಿತಾಂಶ ಪ್ರಕಟಿಸುವುದು ಮಾತ್ರ ಬಾಕಿ ಇತ್ತು.
ಈ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು , 2023-24ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕರ್ನಾಟಕ
ರಾಜ್ಯದಲ್ಲಿರುವ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿರುವ ಎಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ (ಬಿ.ಎ.ಎಸ್.ಸಿ & ಎ ಹೆಚ್), ಕೃಷಿ ವಿಜ್ಞಾನ ಕೋರ್ಸುಗಳು ಅಂದರೆ ಬಿ.ಎಸ್. (ಆನರ್ಸ್) ಕೃಷಿ, ಬಿ.ಎಸ್ಸಿ. (ಆನರ್ಸ್) ಅರಣ್ಯ ವಿಜ್ಞಾನ, ಬಿ.ಎಸ್ಸಿ. (ಆನರ್ಸ್) ರೇಷ್ಮೆಕೃಷಿ, ಬಿ.ಎಸ್. (ಆನರ್ಸ್) ತೋಟಗಾರಿಕೆ, ಬಿ.ಎಸ್ಸಿ. (ಆನರ್ಸ್) ಸಮುದಾಯ ವಿಜ್ಞಾನ, ಬಿ.ಟೆಕ್. (ಕೃಷಿ ಎಂಜಿನಿಯರಿಂಗ್), ಬಿ.ಟೆಕ್. (ಬಯೋಟೆಕ್ನಾಲಜಿ), ಬಿ.ಟೆಕ್ (ಹೈನುಗಾರಿಕೆ ತಂತ್ರಜ್ಞಾನ), ಬಿ.ಎಫ್.ಎಸ್‌ಸಿ. (ಮೀನುಗಾರಿಕೆ), ಬಿ.ಟೆಕ್. (ಆಹಾರ ತಂತ್ರಜ್ಞಾನ), ಬಿ.ಎಸ್ಸಿ. (ಆನರ್ಸ್) ಕೃಷಿ ವ್ಯವಹಾರ ನಿರ್ವಹಣೆ, ಬಿ-ಫಾರ್ಮ, ಎರಡನೇ ವರ್ಷದ ಬಿ.ಫಾರ್ಮ ಮತ್ತು ಫಾರ್ಮಾ-ಡಿ ಕೋರ್ಸುಗಳಲ್ಲಿ ಲಭ್ಯವಿರುವ ಸರ್ಕಾರದ ಪಾಲಿನ ಸೀಟುಗಳಿಗೆ ಸಂಬಂಧಿಸಿದಂತೆ, ಪೂರ್ಣಾವಧಿ ಕೋರ್ಸುಗಳ ಮೊದಲನೇ ವರ್ಷಕ್ಕೆ ಅಥವಾ ಮೊದಲನೇ ಸೆಮಿಸ್ಟರ್‌ಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಹಾಗೂ ಜಮ್ಮು ಮತ್ತು ಕಾಶ್ಮೀರದಿಂದ ವಲಸೆ ಬಂದಿರುವವರ ಮಕ್ಕಳಿಗೆ ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ಅರ್ಹತೆ/ಮೆರಿಟ್ ಅನ್ನು ನಿರ್ಧರಿಸುವ ಉದ್ದೇಶದಿಂದ ನಡೆಸಲಾಗುತ್ತದೆ.
ಇದನ್ನೂ ಓದಿ : NIRF Ranking 2023 : ರಾಜ್ಯದ ಬೆಸ್ಟ್ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್ 10 ಕಾಲೇಜುಗಳು!