ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸಿದ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯ (KCET 2023) ಫಲಿತಾಂಶ (KCET 2023 Result) ಪ್ರಕಟವಾಗಿದ್ದು, ಬೆಂಗಳೂರಿನ ಕುಮಾರನ್ಸ್ ಕಾಲೇಜಿನ ವಿಘ್ನೇಶ್ ನಟರಾಜ್ ಕುಮಾರ್ ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಆರ್‌ವಿ ಕಾಲೇಜಿನ ಅರ್ಜುನ್ ಕೃಷ್ಣಸ್ವಾಮಿ ಎರಡನೇಯ ಹಾಗು ಧಾರವಾಡದ ಸಮೃದ್ ಶೆಟ್ಟಿ ಮೂರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಬಳ್ಳಾರಿಯ ಸುಮೇದ್ ನಾಲ್ಕನೇ ರ‍್ಯಾಂಕ್ ಪಡೆದಿದ್ದರೆ, ಬೆಂಗಳೂರಿನ ಮಾಧವ್ ಸೂರ್ಯ ತದೇಪಲ್ಲಿ, ಸುಜಿತ್ ಅಡಿಗ, ಉಜ್ವಲ್ ಎಲ್ ಶಂಕರ್, ರಿಶಿತ್ ಗುಪ್ತಾ, ಅಭಿನವ್, ಭುವನ್ ಕೆ ಪ್ರಸಾದ್ ಕ್ರಮವಾಗಿ ಐದರಿಂದ ಹತ್ತನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಟಾಪ್ ಹತ್ತರ ಪಟ್ಟಿಯಲ್ಲಿ ಈ ಬಾರಿ ಒಬ್ಬರೂ ಬಾಲಕಿಯರಿಲ್ಲದಿರುವುದು ವಿಶೇಷವಾಗಿದೆ.
1,66,808 ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ಈ ಬಾರಿಯೂ ಒಟ್ಟಾರೆ ಫಲಿತಾಂಶ ಪಡೆದವರಲ್ಲಿ ಬಾಲಕಿಯುರು ಮುಂದಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ ಕೆಇಎ ನಿರ್ದೇಶಕಿ ರಮ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಬೆಳಗ್ಗೆ 11 ಗಂಟೆಯಿಂದ ಕೆಇಎ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದಾಗಿದೆ.
ಎಂಜಿನಿಯರಿಂಗ್ ಕೋರ್ಸಿಗೆ 2,03,381 ರ‍್ಯಾಂಕ್ ನೀಡಲಾಗಿದೆ. ಕೃಷಿ ವಿಜ್ಞಾನ ಕೋರ್ಸುಗಳಿಗೆ 1,64,187 ರ‍್ಯಾಂಕ್ ನೀಡಲಾಗಿದ್ದರೆ, ಪಶುಸಂಗೋಪನೆ1,66,756, ಯೋಗ ಮತ್ತು ನ್ಯಾಚುರೋಪಥಿ 1,66,746 ರ‍್ಯಾಂಕ್ ನೀಡಲಾಗಿದೆ. ಬಿ. ಫಾರ್ಮ ಕೋರ್ಸಿಗೆ 2,06,191 ಮತ್ತು ಫಾರ್ಮ-ಡಿ ಕೋರ್ಸಿಗೆ 2,06,340 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಐಎನ್‌ಸಿ ಕ್ರಮದ ಅನುಸಾರ ಹಾಗು ಸರ್ಕಾರದ ಆದೇಶದ ಅನ್ವಯ ಬಿ.ಎಸ್.ಸಿ (ನರ್ಸಿಂಗ್) ಕೋರ್ಸಿಗೂ ಸಹ ಸಿಇಟಿ ನಡೆಸಲಾಗಿದ್ದು, ಒಟ್ಟು 1,66,808 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಆನ್ ಲೈನ್ ವೇರಿಫಿಕೇಷನ್ ಆದ ಬಳಿಕ ಕೌನ್ಸಿಲಿಂಗ್ ನಡೆಯಲಿದೆ. ಬಿಇಓ ಕಚೇರಿಗಳಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ದಾಖಲೆಗಳನ್ನು ಅಪ್‌ಡೇಟ್ ಮಾಡದವರಿಗೆ ಬಿಇಓ ಕಚೇರಿಯಲ್ಲಿ ಅಪ್‌ಡೇಟ್ ಮಾಡಲು ಅವಕಾಶ ನೀಡಲಾಗುವುದು. ಈ ಬಾರಿ ಬಹಳ ವಿದ್ಯಾರ್ಥಿಗಳು ಸರಿಯಾಗಿ ದಾಖಲೆ ಸಲ್ಲಿಸದೇ ಇರುವುದರಿಂದ ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಹೊಸ ಆ್ಯಪ್ ಒಂದನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಫಲಿತಾಂಶ ನೋಡಲು ವೆಬ್ ವಿಳಾಸ: https://cetonline.karnataka.gov.in/kea
ಫಲಿತಾಂಶ ನೋಡುವುದು ಹೇಗೆ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನ ಮುಖಪುಟದಲ್ಲಿ ʻಯುಜಿಸಿಇಟಿ -2023 ಫಲಿತಾಂಶʼ ಎಂಬ ಲಿಂಕ್ ನೀಡಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಆಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಮತ್ತು ಪಾಸ್‌ವರ್ಡ್, ನಮೂದಿಸಿ ಲಾಗಿನ್ ಆಗಿ. ನಂತರ ಪರದೆಯ ಮೇಲೆ ನಿಮ್ಮ ಫಲಿತಾಂಶ ಕಾಣಸಿಗುತ್ತದೆ. ಫಲಿತಾಂಶವನ್ನು ಮುಂದಿನ ರೆಫ್ರೆನ್ಸ್‌ಗಾಗಿ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಈ ಬಾರಿ 2,61,610 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದರು. ಶೇ.93 ರಷ್ಟು ವಿದ್ಯಾರ್ಥಿಗಳು ಅಂದರೆ 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮೇ 20- ಜೀವಶಾಸ್ತ್ರ ಮತ್ತು ಗಣಿತ, ಮೇ 21- ರಸಾಯನಶಾಸ್ತ್ರ, ಭೌತಶಾಸ್ತ್ರ, ಮೇ 22- ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಸಲಾಗಿತ್ತು. ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಒಟ್ಟು 592 ಪರೀಕ್ಷಾ ಕೇಂದ್ರಗಳನ್ನು ತೆರೆದು ಯಾವುದೇ ಗೊಂದಲವಿಲ್ಲದಂತೆ ಪರೀಕ್ಷೆಯನ್ನು ಪ್ರಾಧಿಕಾರ ನಡೆಸಿತ್ತು.
ಇದನ್ನೂ ಓದಿ : NIRF Ranking 2023 : ರಾಜ್ಯದ ಬೆಸ್ಟ್ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್ 10 ಕಾಲೇಜುಗಳು!