Site icon Vistara News

KCET 2023 : ದಾಖಲೆ ಪರಿಶೀಲಿನೆ ಶುರು; ಶಾಲಾ ಕಾಲೇಜು ವಿವರ ತಿದ್ದುಪಡಿಗೆ ಆನ್‌ಲೈನ್‌ನಲ್ಲಿ ಅವಕಾಶ

document verification KCET

#image_title

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ (KCET 2023) ಶಾಲಾ, ಕಾಲೇಜು ವಿವರಗಳಲ್ಲಿ ಏನಾದರು ತಪ್ಪುಗಳಾಗಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ. ಈ ನಡುವೆ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆಯನ್ನು (cet document verification date 2023) ಇಂದಿನಿಂದ (ಜೂ.27) ಆರಂಭಿಸಲಾಗಿದೆ.

ಒಂದುವೇಳೆ ಅಭ್ಯರ್ಥಿಗಳು ನಮೂದಿಸಿರುವ ಶಾಲೆ/ಕಾಲೇಜುಗಳಲ್ಲಿನ ವ್ಯಾಸಂಗ, ಅವಧಿ, ತೇರ್ಗಡೆ ವರ್ಷ ಹಾಗೂ ಅರ್ಹತಾ ಕಂಡಿಕೆ ವಿವರಗಳಿಗೆ ತಿದ್ದುಪಡಿ ಅವಶ್ಯವಿದ್ದಲ್ಲಿ ವಿದ್ಯಾರ್ಥಿಗಳು ಪ್ರಾಧಿಕಾರದ ಪೋರ್ಟಲ್‌ನಲ್ಲಿ ನಿಗದಿತ ಲಿಂಕ್‌ ಅನ್ನು ಆಯ್ಕೆ ಮಾಡಿ ವಿದ್ಯಾರ್ಥಿಯ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ಅನ್ನು ದಾಖಲಿಸಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳು ಜೂನ್‌ 27 ರಿಂದ ಜುಲೈ 15 ರವರೆಗೆ ಈ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಬಿಇಓ ದಾಖಲೆಗಳನ್ನು ಪರಿಶೀಲಿಸುವುದಕ್ಕೂ ಮೊದಲು ಈ ತಿದ್ದುಪಡಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ. ದಾಖಲೆ ಪರಿಶೀಲನೆಯ ನಂತರ ಯಾವುದೇ ತಿದ್ದುಪಡಿಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅರ್ಹತಾ ಕಂಡಿಕೆ ʻಎʼ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಇತರ ಅರ್ಹತಾ ಕಂಡಿಕೆಯನ್ನು ಕ್ಲೇಮ್‌ ಮಾಡಿದ್ದಲ್ಲಿ ಎ ಅರ್ಹತಾ ಕಂಡಿಕೆಯನ್ನು ಮಾತ್ರ ಕ್ಲೇಮ್‌ ಮಾಡಬಹುದು ಎಂದು ಪ್ರಾಧಿಕಾರವು ಸೂಚಿಸಿದೆ.

ರ‍್ಯಾಂಕ್‌ವಾರು ದಾಖಲೆ ಪರಿಶೀಲನೆಗೆ ವೇಳಾಪಟ್ಟಿ

ದಾಖಲೆ ಪರಿಶೀಲನೆಯು ಇಂದಿನಿಂದ ಅಂದರೆ ದಿನಾಂಕ 27-06-2023 ರಿಂದ ಆರಂಭವಾಗಿದ್ದು, 15-07-2023 ರವರೆಗೆ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆ/ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಆಯಾ ಶಾಲೆಗಳಿಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಗೆ ನಿಗದಿತ ದಿನದಂದು ತೆರಳಿ ದಾಖಲೆ ಪರಿಶೀಲನೆ ಮಾಡಿಸಬೇಕಿರುತ್ತದೆ. ದಾಖಲೆಗಳ ಪರಿಶೀಲನೆಯನ್ನು ಆನ್‌ಲೈನ್‌ ಮುಖಾಂತರ ಮಾಡಲಾಗುತ್ತದೆ. ಬೆಂಗಳೂರು ನಗರದ ವಿದ್ಯಾರ್ಥಿಗಳು ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಸಂಬಂಧಪಟ್ಟ ದಾಖಲೆಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಯಾವೆಲ್ಲಾ ದಾಖಲೆಗಳಿರಬೇಕು?

ಅರ್ಹತಾ ಕಂಡಿಕೆ ʻಎʼ ವಿದ್ಯಾರ್ಥಿಗಳಿಗೆ ಈ ಮುಂದೆ ವಿವರಿಸಿರುವಂತೆ ಆನ್‌ಲೈನ್‌ ಪರಿಶೀಲನೆಯನ್ನು ನಡೆಸಲಾಗುತ್ತದೆ;

  1. ಸಿಇಟಿ-2023ರ ಪ್ರವೇಶ ಪತ್ರ, ಅಂತಿಮವಾಗಿ ಅರ್ಜಿ ಪ್ರಿಂಟ್‌ ಮಾಡಿದ ಪ್ರತಿ, 10ನೇ ತರಗತಿ ಅಂಕಪಟ್ಟಿ, ಮೊದಲನೇ ಮತ್ತು ಎರಡನೇ ಪಿಯುಸಿ / 11 ಮತ್ತು 12ನೇ ತರಗತಿ ಅಂಕಪಟ್ಟಿ, ಮತ್ತು ಬಿಇಓ / ಡಿಡಿಪಿಯು ಅವರಿಂದ ಮೇಲು ರುಜು ಮಾಡಿರುವ (ಹತ್ತನೇ ತರಗತಿ ಅಥವಾ 12ನೇ ತರಗತಿಯನ್ನು ಒಳಗೊಂಡಿರಬೇಕು) ವಿದ್ಯಾರ್ಥಿಯ 7 ವರ್ಷದ ವ್ಯಾಸಂಗ ಪ್ರಮಾಣ ಪತ್ರ.
  2. ಗ್ರಾಮೀಣ ಕೋಟಾ ಕ್ಷೇಮ್‌ ಮಾಡಿದ್ದಲ್ಲಿ:- 1ನೇ ತರಗತಿಯಿಂದ 10ನೇ ತರಗತಿಯವರೆಗೆ ಹತ್ತು ಪೂರ್ಣ ವರ್ಷಗಳನ್ನು ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವುದಕ್ಕೆ ಸಂಬಂಧಿಸಿದ ಪ್ರಮಾಣಪತ್ರ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪರಿಶೀಲನಾ ಪ್ರಮಾಣ ಪತ್ರ.
  3. ಕನ್ನಡ ಮಾಧ್ಯಮ ಕೋಟಾ ಕ್ಷೇಮ್‌ ಮಾಡಿದ್ದಲ್ಲಿ- 1ನೇ ತರಗತಿಯಿಂದ 10ನೇ ತರಗತಿವರೆಗೆ ಹತ್ತು ಪೂರ್ಣ ವರ್ಷಗಳನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವುದಕ್ಕೆ ಸಂಬಂಧಿಸಿದ ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ.

ಅಭ್ಯರ್ಥಿಗಳು ಸಲ್ಲಿಸುವ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ, ಗ್ರಾಮೀಣ ಪ್ರದೇಶ ವ್ಯಾಸಂಗ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ವಿದ್ಯಾರ್ಥಿಯ ಮಾಹಿತಿಯನ್ನು ಎರಡನೇ ಪಿಯುಸಿ/12ನೇ ತರಗತಿಯ ಅಂಕಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನ್‌ಲೈನ್‌ ಮೂಲಕ ಸಲ್ಲಿಸುತ್ತಾರೆ.

ಉಳಿದ ದಾಖಲೆಗಳು ಅಂದರೆ, ಜಾತಿ ಪ್ರಮಾಣ ಪತ್ರ / ಜಾತಿ ಆದಾಯ ಪ್ರಮಾಣ ಪತ್ರಗಳನ್ನು ನೇರವಾಗಿ
ಸಂಬಂಧಿಸಿದ ಇಲಾಖೆಗಳಿಂದ ಪ್ರಾಧಿಕಾರವು ಆನ್‌ಲೈನ್‌ ಪರಿಶೀಲನೆ ಮಾಡುತ್ತದೆ. ಜಾತಿ ಪ್ರಮಾಣ ಪತ್ರ / ಜಾತಿ ಆದಾಯ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಗಳು ನಮೂದಿಸಿರುವ 8ರ ಸಂಖ್ಯೆ ಮೂಲಕ ತಾಳೆ ಮಾಡಲಾಗುತ್ತದೆ.

ಇದನ್ನೂ ಓದಿ: KCET Topper 2023 : ನಾನೇ ಫಸ್ಟ್‌ ರ‍್ಯಾಂಕ್‌ ಬರಬಹುದಿತ್ತು ಎಂದ ಸೆಕೆಂಡ್‌ ಟಾಪರ್‌!

371(ಜೆ)-ಹೈದರಾಬಾದ್‌-ಕರ್ನಾಟಕ ಪ್ರದೇಶ ಮೀಸಲಾತಿ ವಿವರಗಳು ಮತ್ತು ಆದಾಯ ಪ್ರಮಾಣ ಪತ್ರ ವಿವರ ಗಳನ್ನೂ ಸಹ ವಿದ್ಯಾರ್ಥಿಗಳು ನಮೂದಿಸಿರುವ 80 ಸಂಖ್ಯೆ ಆಧಾರದ ಮೇಲೆ ಆನ್‌ಲೈನ್‌ ಮುಖಾಂತರ ತಾಳೆ
ಮಾಡಲಾಗುತ್ತದೆ. ಅರ್ಹತೆ ಪಡೆಯುವ ವಿದ್ಯಾರ್ಥಿಗಳು ತಮ್ಮ ಪರಿಶೀಲನಾ ಪತ್ರವನ್ನು ಪ್ರಾಧಿಕಾರದ ವೆಬ್‌ಸೈಟಿನಿಂದ ಲಾಗಿನ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಡೌನ್‌ಲೋಡ್‌ ಮಾಡಿಕೊಳ್ಳಲು ದಿನಾಂಕಗಳನ್ನು ಮುಂದೆ ಪ್ರಚುರ ಪಡಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

Exit mobile version