ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸಿದ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯ (KCET 2023) ಫಲಿತಾಂಶ ಜೂನ್ 15 ರಂದು ಪ್ರಕಟವಾಗುವುದು (KCET 2023 Result) ಖಚಿತ ಪಟ್ಟಿದೆ. ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಪರೀಕ್ಷೆಯ ಕುರಿತು ಪ್ರಕಟಿಸಿದ್ದ ಮಾಹಿತಿ ಪುಸ್ತಕದಲ್ಲಿ ಜೂನ್ 12 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿತ್ತು. ಹೀಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕಾತುರದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಆದರೆ ಕೆಇಎ ಈ ಬಗ್ಗೆ ಯಾವುದೇ ಪ್ರಕಟಣೆ ನೀಡಿರಲಿಲ್ಲ. ಕೆಲ ಅಧಿಕಾರಿಗಳು ಜೂನ್ 14 ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದರು. ಹೀಗಾಗಿ ಫಲಿತಾಂಶ ಎಂದು ಪ್ರಕಟವಾಗಲಿದೆ ಎಂಬ ಕುರಿತು ಗೊಂದಲ ಉಂಟಾಗಿತ್ತು.
ಫಲಿತಾಂಶ ಪ್ರಕಟಿಸಲು ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೂನ್ 15 ರಂದು ಪ್ರಕಟಿಸಲು ನಿರ್ಧರಿಸಿದ್ದೇವೆ. ಯಾವುದೇ ಗೊಂದಲವಿಲ್ಲದೆ ಈ ಫಲಿತಾಂಶ ಪ್ರಕಟವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಈಗಾಗಲೇ ಸಿಇಟಿ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದು, ಈಗ ಸಿಇಟಿ ಅಂಕ ಮತ್ತು ದ್ವಿತೀಯ ಪಿಯುಸಿ ಅಂಕಗಳನ್ನು ಆಧರಿಸಿ ರ‍್ಯಾಂಕ್ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
ಉನ್ನತ ಶಿಕ್ಷಣ ಸಚಿವರ ಲಭ್ಯತೆ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ನಿಗದಿತ ದಿನದಂದು ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿಲ್ಲ. ಜೂನ್ 14 ಕ್ಕೆ ಪ್ರಕಟಿಸಲು ಈ ಹಿಂದೆ ಉದ್ದೇಶಿಸಲಾಗಿತ್ತು. ಅಂತಿಮವಾಗಿ ಈಗ ಜೂನ್ 15 ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಿದ್ದೇವೆ ಎಂದು ಕೆಇಎ ಅಧಿಕಾರಿಗಳು ʻವಿಸ್ತಾರ ನ್ಯೂಸ್ʼ ಗೆ ತಿಳಿಸಿದ್ದಾರೆ.
ಜೂನ್ 15 ರಂದು ಬೆಳಗ್ಗೆ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದಾಗಿದೆ. ಈಗಾಗಲೇ ಕೆಇಎಯು ತಾತ್ಕಾಲಿಕ ಕೀ ಉತ್ತರಗಳನ್ನು (KCET Key Answer 2023) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳಿಂದ ಆಕ್ಷೇಪಣೆಗಳನ್ನೂ ಆಹ್ವಾನಿಸಿ, ಪರಿಶೀಲನೆ ನಡೆಸಿದೆ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://cetonline.karnataka.gov.in/kea/
ಆರ್‌ಡಿ ಅಪ್‌ಡೇಟ್ ಮುಗಿದಿಲ್ಲ !
ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಮೂದಿಸಿರುವ ಜಾತಿ/ಆದಾಯ ಪ್ರಮಾಣ ಪತ್ರ/ ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆಯನ್ನು ಕಂದಾಯ ಇಲಾಖೆಯಲ್ಲಿರುವ ಆರ್‌ಡಿ ಸಂಖ್ಯೆಗೆ ಆನ್‌ಲೈನ್ ಮೂಲಕ ಪರಿಶೀಲನೆ ಮಾಡುವ ಕಾರ್ಯ ಇನ್ನೂ ಮುಗಿದಿಲ್ಲ.
ಪರಿಶೀಲನೆಯ ಪ್ರಕ್ರಿಯೆಯ ಸಂದರ್ಭದಲ್ಲಿ ಸುಮಾರು 80 ಸಾವಿರ ವಿದ್ಯಾರ್ಥಿಗಳ ಹೆಸರು ಅಥವಾ ನಮೂದಿಸಿರುವ ಜಾತಿ ತಾಳೆಯಾಗದಿರುವುದು, ಪ್ರಮಾಣ ಪತ್ರವು ಚಾಲ್ತಿಯಲ್ಲಿ ಇಲ್ಲದೇ ಇರುವುದು, ವಿದ್ಯಾರ್ಥಿಗಳ ಹೆಸರಿನಲ್ಲಿ ಪ್ರಮಾಣ ಪತ್ರ ಇಲ್ಲದೇ ಇರುವುದು ಅಥವಾ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ ಪಡೆಯದೇ ಇರುವುದು ಕಂಡು ಬಂದಿತ್ತು. ಈ ರೀತಿ ತಿರಸ್ಕೃತಗೊಂಡವರಿಗೆ ಮತ್ತೆ ಸರಿಯಾದ ಆರ್‌ಡಿ ಸಂಖ್ಯೆಯನ್ನು ಅಪ್‌ಡೇಟ್ ಮಾಡಲು ಕೆಇಎ ಅವಕಾಶ ನೀಡಿತ್ತು. ಇದಕ್ಕೆ ಜೂನ್ 12 ಕೊನೆಯ ದಿನವಾಗಿದೆ. ಇನ್ನೂ ಸುಮಾರು 30 ಸಾವಿರ ವಿದ್ಯಾರ್ಥಿಗಳು ಆರ್‌ಡಿ ಸಂಖ್ಯೆಯನ್ನು ಅಪ್‌ಡೇಟ್ ಮಾಡಬೇಕಾಗಿದೆ. ಇದೂ ಸಹ ಫಲಿತಾಂಶ ಪ್ರಕಟಣೆ ಮುಂದೂಡಲು ಕಾರಣ ಎಂದು ಹೇಳಲಾಗಿದೆ. ಒಂದು ವೇಳೆ ಆರ್‌ಡಿ ಅಪ್‌ಡೇಟ್ ಮಾಡದ ವಿದ್ಯಾರ್ಥಿಗಳನ್ನು ಸಾಮಾನ್ಯ ವರ್ಗದ (ಜನರಲ್ ಮೆರಿಟ್) ವಿದ್ಯಾರ್ಥಿಗಳು ಎಂದು ಪರಿಗಣಿಸಿ ರ‍್ಯಾಂಕ್ ಪಟ್ಟಿ ಪ್ರಕಟಿಸಲಾಗುತ್ತದೆ.
ಈ ಬಾರಿ 2 ಲಕ್ಷದ 61 ಸಾವಿರದ 610 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದರು. ಮೇ 20- ಜೀವಶಾಸ್ತ್ರ ಮತ್ತು ಗಣಿತ, ಮೇ 21- ರಸಾಯನಶಾಸ್ತ್ರ, ಭೌತಶಾಸ್ತ್ರ, ಮೇ 22- ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಸಲಾಗಿತ್ತು. ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆದು ಯಾವುದೇ ಗೊಂದಲವಿಲ್ಲದಂತೆ ಪರೀಕ್ಷೆಯನ್ನು ಪ್ರಾಧಿಕಾರ ನಡೆಸಿತ್ತು.
ಈ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು , 2023-24ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕರ್ನಾಟಕ
ರಾಜ್ಯದಲ್ಲಿರುವ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿರುವ ಎಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ (ಬಿ.ಎ.ಎಸ್.ಸಿ & ಎ ಹೆಚ್), ಕೃಷಿ ವಿಜ್ಞಾನ ಕೋರ್ಸುಗಳು ಅಂದರೆ ಬಿ.ಎಸ್. (ಆನರ್ಸ್) ಕೃಷಿ, ಬಿ.ಎಸ್ಸಿ. (ಆನರ್ಸ್) ಅರಣ್ಯ ವಿಜ್ಞಾನ, ಬಿ.ಎಸ್ಸಿ. (ಆನರ್ಸ್) ರೇಷ್ಮೆಕೃಷಿ, ಬಿ.ಎಸ್. (ಆನರ್ಸ್) ತೋಟಗಾರಿಕೆ, ಬಿ.ಎಸ್ಸಿ. (ಆನರ್ಸ್) ಸಮುದಾಯ ವಿಜ್ಞಾನ, ಬಿ.ಟೆಕ್. (ಕೃಷಿ ಎಂಜಿನಿಯರಿಂಗ್), ಬಿ.ಟೆಕ್. (ಬಯೋಟೆಕ್ನಾಲಜಿ), ಬಿ.ಟೆಕ್ (ಹೈನುಗಾರಿಕೆ ತಂತ್ರಜ್ಞಾನ), ಬಿ.ಎಫ್.ಎಸ್‌ಸಿ. (ಮೀನುಗಾರಿಕೆ), ಬಿ.ಟೆಕ್. (ಆಹಾರ ತಂತ್ರಜ್ಞಾನ), ಬಿ.ಎಸ್ಸಿ. (ಆನರ್ಸ್) ಕೃಷಿ ವ್ಯವಹಾರ ನಿರ್ವಹಣೆ, ಬಿ-ಫಾರ್ಮ, ಎರಡನೇ ವರ್ಷದ ಬಿ.ಫಾರ್ಮ ಮತ್ತು ಫಾರ್ಮಾ-ಡಿ ಕೋರ್ಸುಗಳಲ್ಲಿ ಲಭ್ಯವಿರುವ ಸರ್ಕಾರದ ಪಾಲಿನ ಸೀಟುಗಳಿಗೆ ಸಂಬಂಧಿಸಿದಂತೆ, ಪೂರ್ಣಾವಧಿ ಕೋರ್ಸುಗಳ ಮೊದಲನೇ ವರ್ಷಕ್ಕೆ ಅಥವಾ ಮೊದಲನೇ ಸೆಮಿಸ್ಟರ್‌ಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಹಾಗೂ ಜಮ್ಮು ಮತ್ತು ಕಾಶ್ಮೀರದಿಂದ ವಲಸೆ ಬಂದಿರುವವರ ಮಕ್ಕಳಿಗೆ ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ಅರ್ಹತೆ/ಮೆರಿಟ್ ಅನ್ನು ನಿರ್ಧರಿಸುವ ಉದ್ದೇಶದಿಂದ ನಡೆಸಲಾಗುತ್ತದೆ.
ಇದನ್ನೂ ಓದಿ : NIRF Ranking 2023 : ರಾಜ್ಯದ ಬೆಸ್ಟ್ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್ 10 ಕಾಲೇಜುಗಳು!