Site icon Vistara News

NEET MDS 2024: ನೀಟ್‌ ಎಂಡಿಎಸ್‌ ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

exam writing

exam writing

ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ-ಮಾಸ್ಟರ್ ಆಫ್ ಡೆಂಟಲ್ ಸರ್ಜರಿ 2024 (NEET MDS 2024) ಅನ್ನು ಮುಂದೂಡಲು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ನಿರಾಕರಿಸಿದೆ. ಮಾರ್ಚ್ 18ರಂದು ನಿಗದಿಯಾಗಿರುವ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ ವಿವಿಧ ಅರ್ಜಿಗಳಲ್ಲಿನ ವಾದಗಳನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ.ಚಂದ್ರಚೂಡ್ ಅವರು ʼʼದಂತವೈದ್ಯಕೀಯ ಕೋರ್ಸ್‌ಗಳನ್ನು ಪುನಃಸ್ಥಾಪಿಸುವ ರಾಷ್ಟ್ರೀಯ ದಂತ ಆಯೋಗದ (NDC) ಪ್ರಯತ್ನಗಳನ್ನು ನಿರಂಕುಶವೆಂದು ಭಾವಿಸಬಾರದು. ನ್ಯಾಯಾಲಯವು ಈ ಕೊನೆ ಹಂತದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಹೇಳಿದರು.

ʼʼದಂತ ವೈದ್ಯಕೀಯ ಕೋರ್ಸ್‌ ಅನ್ನು ಕೋವಿಡ್ ಪೂರ್ವದ ಸ್ಥಿತಿಗೆ ತರಲು ರಾಷ್ಟ್ರೀಯ ದಂತ ಆಯೋಗ ಶ್ರಮಿಸುತ್ತಿದೆ. ಈ ಹಂತದಲ್ಲಿ ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ ಎಂದು ನಾವು ಭಾವಿಸುತ್ತೇವೆ. ಹೀಗಾಗಿ ಪ್ರಸ್ತುತ ವಿಷಯದಲ್ಲಿ ಮಧ್ಯಪ್ರವೇಶಿಸಲು ನಾವು ನಿರಾಕರಿಸುತ್ತೇವೆ” ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಪರೀಕ್ಷೆಯನ್ನು ಮುಂದೂಡಲು ನಿರಾಕರಿಸಿದರು.

ಎನ್‌ಡಿಎಸ್‌ ಹೇಳಿದ್ದೇನು?

ಮಾರ್ಚ್‌ 18ರಂದು ನಡೆಯಲಿರುವ ನೀಟ್‌ ಎಂಡಿಎಸ್‌ 2024 ಪರೀಕ್ಷೆಗಾಗಿ ಸುಮಾರು 28,000 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಇದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಈ ಕೊನೆಯ ಕ್ಷಣದಲ್ಲಿ ಪರೀಕ್ಷೆ ಮುಂದೂಡಿದರೆ ಅವರಿಗೆ ನೋವಾಗುತ್ತದೆ. ಇದಲ್ಲದೆ ಕೇಂದ್ರ ಸರ್ಕಾರವು ಇಂಟರ್ನ್‌ಶಿಪ್‌ ಗಡುವನ್ನು ವಿಸ್ತರಿಸಿದೆ. ಇದರ ಪರಿಣಾಮವಾಗಿ 568 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಎಂದು ಎನ್‌ಡಿಎಸ್‌ ಕೋರ್ಟ್‌ಗೆ ತಿಳಿಸಿತ್ತು.

ನೀಟ್ ಪಿಜಿ ಕೌನ್ಸೆಲಿಂಗ್‌ನ ವೇಳಾಪಟ್ಟಿ ಸಮಸ್ಯೆಗಳನ್ನು ಉಲ್ಲೇಖಿಸಿ ನೀಟ್ ಎಂಡಿಎಸ್ 2024 ಅನ್ನು ಜುಲೈಗೆ ಮುಂದೂಡಬೇಕೆಂದು ವೈದ್ಯರ ಸಂಘಟನೆಗಳು ಮತ್ತು ಹಲವು ವಿದ್ಯಾರ್ಥಿಗಳು ಕೋರ್ಟ್‌ ಮೊರೆ ಹೋಗಿದ್ದರು. ಪರೀಕ್ಷೆಯ ಬಗೆಗಿನ ಗೊಂದಲವು ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡಿದ್ದು, ದಿನಾಂಕ ಬದಲಾಯಿಸಬೇಕು ಎಂದು ಅವರು ಹೇಳಿದ್ದರು.

ಪ್ರವೇಶ ಪತ್ರ ಡೌಲ್‌ಲೋಡ್‌ ಮಾಡುವ ವಿಧಾನ

ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) ನೀಟ್ ಎಂಡಿಎಸ್ 2024ರ ಪ್ರವೇಶ ಪತ್ರವನ್ನು ಶೀಘ್ರ ಬಿಡುಗಡೆ ಮಾಡಲಿದೆ. ನೀಟ್ ಎಂಡಿಎಸ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್ ಅನ್ನು ಅಧಿಕೃತ ವೆಬ್‌ಸೈಟ್‌ natboard.edu.inನಲ್ಲಿ ಡೌನ್‌ಲೋಡ್‌ ಮಾಡಬಹುದು. ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: ಕಾಶ್ಮೀರಿ ಕೂಲಿ ಕಾರ್ಮಿಕ ಉಮರ್‌ ಅಹ್ಮದ್ ನೀಟ್‌ ಪಾಸಾದ, ಕಣಿವೆ ಈಗ ಪ್ರತಿಭೆಗಳ ಬಣವೆ‌

2024-2025ರ ವಿವಿಧ ಎಂಡಿಎಸ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಅರ್ಹತಾ ಮತ್ತು ಶ್ರೇಯಾಂಕ ಪರೀಕ್ಷೆ ನೀಟ್-ಎಂಡಿಎಸ್ 2024. ಇದನ್ನು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಇನ್ ಮೆಡಿಕಲ್ ಸೈನ್ಸಸ್ ನಡೆಸುತ್ತದೆ. ಕಂಪ್ಯೂಟರ್ ಆಧಾರಿತ ಈ ಪರೀಕ್ಷೆಯನ್ನು ಮಾರ್ಚ್‌ 18ರ ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ನಡೆಸಲಾಗುತ್ತದೆ. ತಪ್ಪು ಉತ್ತರಗಳಿಗೆ ನೆಗೆಟಿವ್‌ ಅಂಕಗಳಿವೆ. ಹೀಗಾಗಿ ಎಚ್ಚರಿಕೆಯಿಂದ ಉತ್ತರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version