ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ (NEET Paper Leak) ಉತ್ತರ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಆರೋಪದ ಬಗ್ಗೆ ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ಉತ್ತರ ಪತ್ರಿಕೆ ಸೋರಿಕೆಯ ಕುರಿತು ಹೊಸಹೊಸ ಮಾಹಿತಿಗಳು ಹೊರಬೀಳುತ್ತಿದೆ. ಈ ನಡುವೆ, ಬಿಹಾರದ (bihar) ಸಂಜೀವ್ ಮುಖಿಯಾ (Sanjeev Mukhiya) ಈ ಹಗರಣದ ಮುಖ್ಯ ರೂವಾರಿ ಎನ್ನುವುದು ಈಗ ಬಯಲಾಗಿದೆ. ಈತ ಇಂಥ ಕೃತ್ಯಗಳಿಗೆ ನಟೋರಿಯಸ್ ಆಗಿದ್ದಾನೆ. ಬಿಹಾರದ ನಳಂದಾ ಜಿಲ್ಲೆಯ ಸಂಜೀವ್ ಸಿಂಗ್ ಎಂದು ಕರೆಯಲ್ಪಡುವ ಸಂಜೀವ್ ಮುಖಿಯಾ ಇತ್ತೀಚಿನ ವೈದ್ಯಕೀಯ ಪ್ರವೇಶ ಪರೀಕ್ಷೆಯ ಹಗರಣದ ಹಿಂದಿನ ಮಾಸ್ಟರ್‌ಮೈಂಡ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಈತ ಈಗ ನೇಪಾಳಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಈತನಿಗಿದೆ ವಂಚನೆಯ ಇತಿಹಾಸ
ಸಂಜೀವ್ ಮುಖಿಯಾ ಎರಡು ದಶಕಗಳಿಂದ ಪರೀಕ್ಷೆಯ ವಂಚನೆಯಲ್ಲಿ ತೊಡಗಿದ್ದಾನೆ ಎನ್ನಲಾಗಿದೆ. ಈ ಹಿಂದೆ ನಳಂದ ಕಾಲೇಜಿನ ನೂರ್ಸರಾಯ್ ಶಾಖೆಯಲ್ಲಿ ತಾಂತ್ರಿಕ ಸಹಾಯಕನಾಗಿ ನೇಮಕಗೊಂಡ ಮುಖಿಯಾ 2016ರ ಬಿಹಾರ ಸಾರ್ವಜನಿಕ ಸೇವಾ ಆಯೋಗದ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಅನೇಕ ಘಟನೆಗಳಲ್ಲಿ ಆರೋಪಿಯಾಗಿದ್ದು, ಬಳಿಕ ಆತನನ್ನು ವಜಾಗೊಳಿಸಲಾಗಿತ್ತು.
ರವಿ ಅತ್ರಿ ಎಂಬ ಮತ್ತೊಬ್ಬ ಕುಖ್ಯಾತನೊಂದಿಗೆ ‘ಸಾಲ್ವರ್ ಗ್ಯಾಂಗ್’ ನಡೆಸುತ್ತಿದ್ದ ಸಂಜೀವ್ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಮಾರುತ್ತಾನೆ. ಅಷ್ಟೇ ಅಲ್ಲ, ಪರೀಕ್ಷೆಯನ್ನು ತೆಗೆದುಕೊಳ್ಳಲು ನಕಲಿ ಅಭ್ಯರ್ಥಿಗಳನ್ನೂ ನೀಡುತ್ತಾನೆ ಎಂದು ಆರೋಪಿಸಲಾಗಿದೆ. ತನಿಖೆಯು ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗಳಿಂದ ಹಿಡಿದು ಅನೇಕ ರಾಜ್ಯಗಳಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳವರೆಗೆ ವಿಸ್ತರಿಸಿರುವ ಜಾಲವನ್ನು ಬಹಿರಂಗಪಡಿಸಿದೆ. ಇದು ಕಾರ್ಯಾಚರಣೆಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ವಿವರಿಸುತ್ತದೆ.
ಈತನಿಗೆ ಕುಟುಂಬ ಮತ್ತು ರಾಜಕೀಯ ಸಂಪರ್ಕಗಳು
ಮುಖಿಯಾ ಅವರ ಪತ್ನಿ ಮಮತಾ ದೇವಿ ಅವರು ‘ಮುಖಿಯಾ’ ಅಥವಾ ಭೂತಾಖರ್ ಪಂಚಾಯತ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಲೋಕ ಜನಶಕ್ತಿ ಪಕ್ಷದಿಂದ ಟಿಕೆಟ್ ಪಡೆದ ಅನಂತರ ಈ ಸ್ಥಾನವನ್ನು ಪಡೆದರು. ಬಿಹಾರದ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದ ಮತ್ತೊಂದು ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರ ಮಗ ಶಿವಕುಮಾರ್ ವಿಚಾರಣೆ ಎದುರಿಸಿದ್ದ. ಹಳ್ಳಿಯಲ್ಲಿ ಮುಖಿಯಾ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಾಮಾನ್ಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾನೆ. ಆದರೆ ಈತನ ಅಕ್ರಮದ ಜಾಲ ದೇಶವ್ಯಾಪಿ ವ್ಯಾಪಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: NEET UG Retest: ನೀಟ್ ಮರುಪರೀಕ್ಷೆಗೆ ಅರ್ಧದಷ್ಟು ಅಭ್ಯರ್ಥಿಗಳು ಗೈರು; ಇವರ ಭವಿಷ್ಯದ ಗತಿ ಏನು?
ನೀಟ್ ಸೋರಿಕೆಯಲ್ಲಿ ಭಾಗಿ
ನೀಟ್ ಯುಜಿ ಪರೀಕ್ಷೆಯಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ 720 ಅಂಕಗಳನ್ನು ಗಳಿಸಿದ ಅನಂತರ ವಿವಾದ ಭುಗಿಲೆದ್ದಿತ್ತು. ಆರಂಭದಲ್ಲಿ ದೋಷಯುಕ್ತ ಪ್ರಶ್ನೆ ಮತ್ತು ಲಾಜಿಸ್ಟಿಕಲ್ ಸಮಸ್ಯೆಗಳಿಂದ ಗ್ರೇಸ್ ಅಂಕಗಳು ನೀಡಲಾಯಿತು ಎನ್ನಲಾಗಿತ್ತು. ಆದರೆ ಬಿಹಾರ ಪೊಲೀಸರಿಂದ ನಡೆದ ತನಿಖೆಗಳು ವಿಭಿನ್ನ ಅಂಶವನ್ನು ಬಹಿರಂಗಪಡಿಸಿದವು. ಪರೀಕ್ಷೆಯ ಒಂದು ದಿನ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು.
ತನಿಖಾ ಅಧಿಕಾರಿಗಳ ಪ್ರಕಾರ, ಸಂಜೀವ್ ಮುಖಿಯಾ 2024ರ ಪರೀಕ್ಷೆಗೆ ನೀಟ್ ಯುಜಿ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳ ವಿತರಣೆಗೆ ವ್ಯವಸ್ಥೆ ಮಾಡಿದ್ದಾನೆ. ಅವನ ಮೊಬೈಲ್‌ನಲ್ಲಿ ಕೆಲವು ದಾಖಲೆಗಳು ಪತ್ತೆಯಾಗಿವೆ. ಈತನ ಅಕ್ರಮ ದಂಧೆ ಮತ್ತು ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಸಂಕಟ ಪಡುವಂತಾಗಿದೆ.