Site icon Vistara News

NEET PG 2023: ನೀಟ್ ಎಕ್ಸಾಮ್ ಬರೆದ ಎಲ್ಲರೂ ಕೌನ್ಸೆಲಿಂಗ್‌ಗೆ ಅರ್ಹರು! ರೂಲ್ಸ್ ಚೇಂಜ್ ಆಗಿದ್ದೇಕೆ?

NEET PG 2023, Everyone who wrote NEET exam is eligible for counselling

ನವದೆಹಲಿ: 2023ರ ಸಾಲಿನ ನೀಟ್ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಖುಷಿಯ ಸುದ್ದಿ ಇದು. 2023ರ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET)ಯ ಶೇಕಡಾವಾರು ಕಟ್ ಆಫ್ ಅಂಕವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (Union Health and Family Planning Ministry)ಶೇಕಡಾವಾರು ಅಂಕಗಳನ್ನು ‘ಶೂನ್ಯ’ಕ್ಕೆ ಇಳಿಸಿದೆ(zero percentile). ಪರಿಣಾಮ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳು ಈಗ ಕೋರ್ಸ್ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳು ಅರ್ಹರಾಗಿದ್ದಾರೆ!(eligible for counselling)

ಮಾಧ್ಯಮಗಳ ವರದಿಯ ಪ್ರಕಾರ, ಶೇಕಡವಾರು ಕಟ್ ಆಫ್ ಮಾರ್ಕ್ಸ್ ಅನ್ನು ಶೂನ್ಯಕ್ಕೆ ಇಳಿಸಿದ್ದರಿಂದಾಗಿ, ಋಣಾತ್ಮಕ ಮಾರ್ಕ್ಸ್ ಪಡೆದಿದ್ದ 13 ಹಾಗೂ ಜೀರೋ ಪರ್ಸಂಟೈಲ್ ಪಡೆದ ಅಭ್ಯರ್ಥಿಗಳು ಕೂಡ ಈಗ ನೀಟ್ ಪಿಜಿ 2023ರ ಕೌನ್ಸೆಲಿಂಗ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಈ ಹೊಸ ಕ್ರಮವು ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಕಟಣೆಯ ಪ್ರಕಾರ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಸ್ನಾತಕೋತ್ತರ (NEET PG) 2023 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

2023ರ ನೀಟ್ ಪಿಜಿ ಕೌನ್ಸೆಲಿಂಗ್‌ಗಾಗಿ ಪಿಜಿ ಕೋರ್ಸ್‌ಗಳಿಗೆ (ವೈದ್ಯಕೀಯ / ದಂತವೈದ್ಯಕೀಯ) ಅರ್ಹತಾ ಶೇಕಡಾವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಎಲ್ಲಾ ವಿಭಾಗಗಳಲ್ಲಿ ‘ಶೂನ್ಯ’ಕ್ಕೆ ಇಳಿಸಿದೆ ಎಂದು ಭಾರತ ಸರ್ಕಾರದ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಮೆಜಿಕಲ್ ಕೌನ್ಸೆಲಿಂಗ್ ಕಮಿಟಿ ತನ್ನ ನೋಟಿಸ್‌ನಲ್ಲಿ ಹೇಳಿದೆ. ಶೇಕಡಾವಾರು ಕಡಿತದ ನಂತರ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪಿಜಿ ಕೌನ್ಸೆಲಿಂಗ್‌ನ 3ನೇ ಸುತ್ತಿಗಾಗಿ ಹೊಸ ನೋಂದಣಿ ಮತ್ತು ಆಯ್ಕೆ ಭರ್ತಿಯನ್ನು ಪುನಃ ತೆರೆಯಲಾಗುತ್ತದೆ ಎಂದು ತಿಳಿಸಲಾಗಿದೆ.

ಅರ್ಹತೆ ಪಡೆದ ಎಲ್ಲ ವಿದ್ಯಾರ್ಥಿಗಳು ಮೂರನೇ ಸುತ್ತಿನ ಕೌನ್ಸೆಲಿಂಗ್‌ಗೆ ನೋಂದಣಿ ಮಾಡಿಕೊಳ್ಳಬಹುದು ಮತ್ತು ಭಾಗವಹಿಸಬಹುದಾಗಿದೆ. ಈಗಾಗಲೇ ನೋಂದಣಿ ಮಾಡಿಕೊಂಡವರು ಮತ್ತೆ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಹಾಗಿದ್ದೂ ಅವರಿಗೆ ತಮ್ಮ ಆಯ್ಕೆಗಳ ಬದಲಾವಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮೂರನೇ ಸುತ್ತಿನ ಕೌನ್ಸೆಲಿಂಗ್‌ ವೇಳಾ ಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ.

ಶೇಕಡಾವಾರು ಕಟ್‌ ಆಫ್ ಶೂನ್ಯಕ್ಕೆ ಇಳಿಸಿದ್ದೇಕೆ?

ಇತ್ತೀಚೆಗೆ, ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(FORDA), 2023ರ ನೀಟ್-ಪಿಜಿ ಪರೀಕ್ಷೆಗೆ ಕಡಿಮೆ ಕಟ್ ಆಫ್ ಮಾರ್ಕ್ಸ್ ಪರಿಗಣಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯಕ್ಕೆ ಮನವಿ ಮಾಡಿತ್ತು. ಸಂಸ್ಥೆಯ ಈ ಮನವಿಗೂ ಕಾರಣವಿದೆ.

ಈ ಸುದ್ದಿಯನ್ನೂ ಓದಿ: NEET Exam : ನೀಟ್ ಅಭ್ಯರ್ಥಿಗಳಿಗೊಂದು ಸೂಚನೆ; ರೌಂಡ್ 1 ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ

ಕಳೆದ ವರ್ಷಗಳಲ್ಲಿ ನೀಟ್‌ ಪಿಜಿಗಾಗಿ ಹಲವಾರು ಸುತ್ತಿನ ಕೌನ್ಸೆಲಿಂಗ್‌ನ ನಂತರವೂ, ರಾಷ್ಟ್ರದಾದ್ಯಂತ ವೈದ್ಯಕೀಯ ಸಂಸ್ಥೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೀಟುಗಳು ಖಾಲಿ ಉಳಿದ್ದವು. ಇದು ಆರೋಗ್ಯ ವ್ಯವಸ್ಥೆಗೆ ಮಾತ್ರವಲ್ಲದೆ ನಮ್ಮ ರಾಷ್ಟ್ರದ ಆರೋಗ್ಯ ರಕ್ಷಣೆಯ ಮೂಲಸೌಕರ್ಯಕ್ಕೆ ಕೊಡುಗೆ ನೀಡಲು ಉತ್ಸುಕರಾಗಿರುವ ವೈದ್ಯಕೀಯ ವೃತ್ತಿಪರರ ಮಹತ್ವಾಕಾಂಕ್ಷೆಯನ್ನು ದಮನಿಸುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ, 2023ರ ನೀಟ್ ಪಿಜಿ ಪರೀಕ್ಷೆಯಲ್ಲಿ ಕಟ್ ಆಫ್ ಮಾರ್ಕ್ಸ್‌ ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಸಚಿವಾಲಯದಲ್ಲಿ ವಿನಂತಿಸುತ್ತಿದ್ದೇವೆ. ಇದರಿಂದಾಗಿ, ಖಾಲಿ ಇರುವ ಸೀಟುಗಳ ಭರ್ತಿಗೆ ಬೃಹತ್ ಸಂಖ್ಯೆಯ ಅಭ್ಯರ್ಥಿಗಳಿಗೆ ಅವಕಾಶ ಒದಗಿಸಿದಂತಾಗುತ್ತದೆ ಎಂದು ಪತ್ರದಲ್ಲಿ ಅಸೋಶಿಯೇಷನ್ ತಿಳಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version