ಬೆಂಗಳೂರು: ʻʻಕೋವಿಡ್-19 ಸಂದರ್ಭದಲ್ಲಿ ನಮ್ಮ ವೈದ್ಯರು ನೀಡಿದ ಸೇವೆಯಿಂದ ಪ್ರೇರಣೆಗೊಂಡು ನಾನು ವೈದ್ಯಕೀಯ ಓದಲು ನಿರ್ಧರಿಸಿದೆʼʼ ಎಂದು ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಐದನೇ ರ‍್ಯಾಂಕ್ ಪಡೆದಿರುವ (NEET Result 2023) ಬೆಂಗಳೂರಿನ ಧ್ರುವ್ ಆಡ್ವಾಣಿ ಹೇಳಿದ್ದಾರೆ.
ಸಿಬಿಎಸ್‌ಸಿ 12 ನೇ ತರಗತಿಯಲ್ಲಿ ವಿಜ್ಞಾನ ವಿಷಯದಲ್ಲಿ ಶೇ. 99.4 ರಷ್ಟು ಅಂಕಗಳಿಸಿದ್ದ ಬೆಂಗಳೂರಿನ ಜೆ.ಆರ್. ಇಂಡರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಯಾಗಿರುವ ಧ್ರುವ್ ಆಡ್ವಾಣಿ ನೀಟ್ ಪರೀಕ್ಷೆಯಲ್ಲಿ 715 ಅಂಕ ಪಡೆದು ಅಂದರೆ ಶೇ.99.9 ರಷ್ಟು ಅಂಕ ಪಡೆದು ಐದನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಈ ಬಾರಿಯ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ವಿದ್ಯಾರ್ಥಿ ಇವರಾಗಿದ್ದಾರೆ.
ವಿಜ್ಞಾನ ಎಂದರೆ ಬಲು ಪ್ರೀತಿ!
ಧ್ರುವ್ ಆಡ್ವಾಣಿಗೆ ಐದನೇ ತರಗತಿಯಿಂದಲೇ ವಿಜ್ಞಾನ ಎಂದರೆ ಬಲು ಪ್ರೀತಿಯಂತೆ. ಅದರಲ್ಲಿಯೂ ಜೀವಶಾಸ್ತ್ರದಲ್ಲಿ ಬಹಳ ಆಸಕ್ತಿ ಇದೆ. ಹೀಗಾಗಿಯೇ ನಾನು ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ ಎಂದು ವಿವರಿಸುವ ಅವರು, ಸದ್ಯ ʻಇಂಟರ್‌ನ್ಯಾಷನಲ್ ಬಯೋಲಾಜಿ ಒಲಂಪಿಯಾಡ್ 2023ʼ ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಜುಲೈ 3 ರಿಂದ ಈ ಒಲಂಪಿಯಾಡ್ ಆರಂಭವಾಗಲಿದ್ದು, ಧ್ರುವ್ ಆಡ್ವಾಣಿ ಭಾರತವನ್ನು ಪ್ರತಿನಿಧಿಸಲಿರುವ ತಂಡದ ಸದಸ್ಯರಾಗಿದ್ದಾರೆ.
ದೆಹಲಿಯ ಏಮ್ಸ್‌ನಲ್ಲಿ ಓದುವ ಕನಸು ಹೊತ್ತಿರುವ ಧ್ರುವ್ ಆಡ್ವಾಣಿಗೆ ಜನರ ಸೇವೆ ಮಾಡಬೇಕೆಂಬ ಆಸೆ ಇದೆ. ʻʻನನ್ನ ಪೋಷಕರು ಮತ್ತು ಕುಟುಂಬದ ಸದಸ್ಯರೆಲ್ಲರೂ ಸೇವಾ ವೃತ್ತಿಯಲ್ಲಿದ್ದಾರೆ. ಹೀಗಾಗಿ ನಾನೂ ಜನರಿಗೆ ನೇರವಾಗಿ ಸೇವೆಮಾಡಬೇಕೆಂದುಕೊಂಡು ವೈದ್ಯನಾಗಬೇಕೆಂದುಕೊಂಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಈ ಬಗ್ಗೆ ತಿಳುವಳಿಕೆ ಇಲ್ಲದವರು, ಅರ್ಹತೆ ಇಲ್ಲದವರು ತಪ್ಪು ಮಾಹಿತಿ ಹರಡಿ, ಪರಿಸ್ಥಿತಿ ಹದಗೆಡಲು ಕಾರಣರಾಗುತ್ತಿದ್ದರು. ಇದೇ ಸಂದರ್ಭದಲ್ಲಿ ವೈದ್ಯರು ಮತ್ತು ದಾದಿಯರು ತಮ್ಮಷ್ಟಕ್ಕೆ ತಾವು ಸೇವೆ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಸರಿಯಾದ ಜ್ಞಾನ ಇರುವ ವೈದ್ಯರ ಅವಶ್ಯಕತೆ ಹೆಚ್ಚಿರುತ್ತದೆ. ಹೀಗಾಗಿ ನಾನು ವೈದ್ಯನಾಗುವ ದೃಢ ನಿರ್ಧಾರಕ್ಕೆ ಬಂದೆʼʼ ಎಂದು ವಿವರಿಸಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ವೇಳಾಪಟ್ಟಿ ಇಲ್ಲದೆ ಓದು!
ಧ್ರುವ್ ಆಡ್ವಾಣಿ ಅವರ ಅಜ್ಜ ಮತ್ತು ಚಿಕ್ಕಮ್ಮ ಇಬ್ಬರೂ ವೈದ್ಯರಾಗಿದ್ದಾರೆ. ಇವರೇ ನನಗೆ ರೋಲ್ ಮಾಡೆಲ್ ಎನ್ನುವ ಧ್ರುವ್ ಆಡ್ವಾಣಿ, ನರರೋಗ ತಜ್ಞರಾಗಬೇಕೆಂದುಕೊಂಡಿದ್ದಾರೆ. ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ನೀಟ್ ಪರೀಕ್ಷೆಗಾಗಿ ಕೋಚಿಂಗ್ ಪಡೆದಿರುವ ಅವರು, ದಿನಕ್ಕೆ ಎರಡು ಅಥವಾ ಮೂರು ಗಂಟೆ ಮಾತ್ರ ಓದುತ್ತಿದ್ದರಂತೆ.
ʻʻನಾನು ದಿನಕ್ಕೆ ಇಂತಿಷ್ಟು ಗಂಟೆ ಎಂದು ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಓದುತ್ತಿರಲಿಲ್ಲ. ನನಗೆ ಗೊತ್ತಿಲ್ಲದ ವಿಷಯವನ್ನು ತಿಳಿಯಬೇಕೆಂದುಕೊಂಡು ಓದುತ್ತಿದ್ದೆ. ಪರೀಕ್ಷೆಗೆ ಏನೆಲ್ಲಾ ವಿಷಯಗಳು ಬೇಕೋ ಅದನ್ನು ಓದಿ ಅರ್ಥಮಾಡಿಕೊಳ್ಳುತ್ತಿದ್ದೆ. ಹೀಗೆ ಓದಬೇಕೆಂದು ನಾನೆಂದೂ ಅಂದುಕೊಂಡಿರಲೂ ಇಲ್ಲ, ಅದು ನನಗೆ ಇಷ್ಟವೂ ಆಗುತ್ತಿರಲಿಲ್ಲʼʼ ಎಂದು ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : Neet Result 2023 : ಕರ್ನಾಟಕದ ಧ್ರುವ್ ಅದ್ವಾನಿಗೆ ನೀಟ್ ಪರೀಕ್ಷೆಯಲ್ಲಿ 5ನೇ ರ‍್ಯಾಂಕ್