Site icon Vistara News

NEET UG 2022 | ನೀಟ್‌ನಲ್ಲಿ ತನಿಷ್ಕಾರಷ್ಟೇ ಅಂಕ ಪಡೆದಿದ್ದ ರಾಜ್ಯದ ಹೃಷಿಕೇಶ್‌, ರುಚಾಗೆ ಮೊದಲ ರ‍್ಯಾಂಕ್‌ ತಪ್ಪಿದ್ದೇಕೆ?

NEET UG 2022

ಬೆಂಗಳೂರು: ಈ ಬಾರಿಯ ನೀಟ್‌ ಪರೀಕ್ಷೆಯ (NEET UG 2022) ಫಲಿತಾಂಶ ಪ್ರಕಟಗೊಂಡಿದೆ. ರಾಜಸ್ಥಾನದ ತನಿಷ್ಕಾ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್‌ ಪಡೆದವರೆಂದು ಘೋಷಿಸಲಾಗಿದೆ. ಆದರೆ ಮೂರನೇ ಸ್ಥಾನ ಪಡೆದಿರುವ ರಾಜ್ಯದ ಹೃಷಿಕೇಶ್‌ ನಾಗಭೂಷಣ ಗಂಗೂಲೆ ಮತ್ತು ನಾಲ್ಕನೇ ಸ್ಥಾನ ಪಡೆದಿರುವ ರುಚಾ ಪವಾಶೆ ಕೂಡ ತನಿಷ್ಕಾ ಪಡೆದಿರುವಷ್ಟೇ ಅಂಕಗಳನ್ನು ಪಡೆದಿದ್ದಾರೆ. ಆದರೂ ಅವರೀಗ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ!

ಹೌದು, ರಾಜ್ಯದ ಹೃಷಿಕೇಶ್‌ ನಾಗಭೂಷಣ ಗಂಗೂಲೆ, ರುಚಾ ಪವಾಶೆ, ಈಗ ೨ನೇ ಸ್ಥಾನದಲ್ಲಿರುವ ದೆಹಲಿಯ ವತ್ಸ ಆಶೀಶ್‌ ಬಾತ್ರಾ, ಕೂಡ ತನಿಷ್ಕಾ ಪಡೆದಿರುವಷ್ಟೇ ಅಂದರೆ ಶೇ. 99.9997733 ಅಂಕ ಪಡೆದಿದ್ದಾರೆ. ಆದರೂ ಈ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜಾರಿಗೆ ತಂದ ಹೊಸ ನೀತಿಯಿಂದಾಗಿ ಅವರಿಗೆ ಮೊದಲ ಸ್ಥಾನ ಕೈ ತಪ್ಪಿ ಹೋಗಿದೆ.

ಹಿಂದೆಲ್ಲಾ ಆದರೆ ಈ ರೀತಿ ಒಂದೇ ಅಂಕ ಪಡೆದವರನ್ನು ಒಟ್ಟಾಗಿ ಮೊದಲ ರ‍್ಯಾಂಕ್‌ ಪಡೆದವರು ಎಂದು ಘೋಷಿಸಲಾಗುತ್ತಿತ್ತು. ಆದರೆ ಎನ್‌ಟಿಎ ಜಾರಿಗೆ ತಂದಿರುವ ಹೊಸ “ಟೈ-ಬ್ರೇಕರ್‌ ನೀತಿʼʼಯಿಂದಾಗಿ ಈಗ ಒಬ್ಬರನ್ನೇ ಮೊದಲ ರ‍್ಯಾಂಕ್‌ ಪಡೆದವರೆಂದು ಘೋಷಿಸಲಾಗಿದೆ.

ಹೃಷಿಕೇಶ್‌ ನಾಗಭೂಷಣ ಗಂಗೂಲೆ

“ದೇಶದ ಮೆಡಿಕಲ್‌ ಕಾಲೇಜುಗಳಲ್ಲಿ ನಿರ್ಧಿಷ್ಟ ಸಂಖ್ಯೆಯಷ್ಟು ಮಾತ್ರ ಸೀಟು ಲಭ್ಯವಿರುವುದರಿಂದ ಹೊಸ “ಟೈ-ಬ್ರೇಕರ್‌ ನೀತಿʼʼ ಜಾರಿಗೆ ತರಲಾಗಿದೆ. ಹೀಗಾಗಿ ರ‍್ಯಾಂಕಿಂಗ್‌ ಪದ್ಧತಿಯಲ್ಲಿ ಬದಲಾವಣೆಗಳಾಗಿದ್ದು, ೧, ೨, ೩, ೪,… ಹೀಗೆ ರ‍್ಯಾಂಕ್‌ ನೀಡಲಾಗುತ್ತದೆ ಎಂದು ಎನ್‌ಟಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏನಿದು ಹೊಸ ಟೈ-ಬ್ರೇಕರ್‌ ನೀತಿ?

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಇದುವರೆಗೂ ಮೂರು ಮಾನದಂಡಗಳನ್ನು ಬಳಸಿ, ರ‍್ಯಾಂಕ್‌ ನೀಡುತ್ತಾ ಬಂದಿತ್ತು. ವಿದ್ಯಾರ್ಥಿಯು ಜೀವಶಾಸ್ತ್ರದಲ್ಲಿ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ), ನಂತರ ರಸಾಯನ ಶಾಸ್ತ್ರದಲ್ಲಿ ಎಷ್ಟು ಅಂಕ ಪಡೆದಿದ್ದಾರೆ ಎಂಬುದನ್ನು ಪರಿಗಣಿಸಿ ಹಾಗೂ ಎಲ್ಲ ವಿಷಯಗಳಲ್ಲಿಯೂ ತಪ್ಪು ಮತ್ತು ಸರಿ ಉತ್ತರವನ್ನು ಪಡೆಯಲು ವಿದ್ಯಾರ್ಥಿಯು ಎಷ್ಟು ಕಡಿಮೆ ಬಾರಿ ಪ್ರಯತ್ನ ನಡೆಸಿದ್ದಾರೆ ಎಂಬುದನ್ನು ಪರಿಗಣಿಸಿ ರ‍್ಯಾಂಕಿಂಗ್‌ ನಿರ್ಧರಿಸಲಾಗುತ್ತಿತ್ತು.

ಆದರೆ ಈ ಬಾರಿಯಿಂದ ಎನ್‌ಟಿಎ ಒಟ್ಟು ಒಂಬತ್ತು ಹೊಸ ಮಾನದಂಡಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಅಂಕವು ಸಮನಾದಾಗ ಯಾವ ವಿದ್ಯಾರ್ಥಿಯು ವಯಸ್ಸಿನಲ್ಲಿ ದೊಡ್ಡವರಾಗಿರುತ್ತಾರೋ ಅವರಿಗೆ ರ‍್ಯಾಂಕ್‌ ನೀಡಬೇಕೆಂಬುದೂ ಸೇರಿದೆ. ಈ ಮಾನದಂಡಗಳು ಇಂತಿವೆ;

1. ಜೀವಶಾಸ್ತ್ರದಲ್ಲಿ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ಹೆಚ್ಚಿನ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು, ನಂತರ

2. ರಸಾಯನಶಾಸ್ತ್ರದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ, ನಂತರ

3. ನಂತರದ ಪರೀಕ್ಷೆಯಲ್ಲಿ ಭೌತಶಾಸ್ತ್ರದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿ

4. ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಸರಿಯಾದ ಉತ್ತರಗಳಿಗಿಂತ ಕಡಿಮೆ ತಪ್ಪು ಉತ್ತರಗಳನ್ನು ಹೊಂದಿರುವ ವಿದ್ಯಾರ್ಥಿ, ನಂತರ

5. ಜೀವಶಾಸ್ತ್ರದಲ್ಲಿ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ಸರಿಯಾದ ಉತ್ತರಗಳಿಗಿಂತ ಕಡಿಮೆ ಪ್ರಮಾಣದ ತಪ್ಪಾದ ಉತ್ತರಗಳನ್ನು ನೀಡಿರುವ ವಿದ್ಯಾರ್ಥಿ, ನಂತರ

6. ರಸಾಯನಶಾಸ್ತ್ರದಲ್ಲಿ ಸರಿಯಾದ ಉತ್ತರಗಳಿಗೆ ತಪ್ಪು ಉತ್ತರಗಳ ಕಡಿಮೆ ಅನುಪಾತವನ್ನು ಹೊಂದಿರುವ ವಿದ್ಯಾರ್ಥಿ, ನಂತರ

7. ಭೌತಶಾಸ್ತ್ರದಲ್ಲಿ ಕಡಿಮೆ ಶೇಕಡವಾರು ತಪ್ಪು ಉತ್ತರಗಳನ್ನು ಮತ್ತು ಸರಿಯಾದ ಉತ್ತರಗಳನ್ನು ಪ್ರಯತ್ನಿಸಿದ ವಿದ್ಯಾರ್ಥಿ, ನಂತರ

8. ವಯಸ್ಸಿನಲ್ಲಿ ಹಿರಿಯ ವಿದ್ಯಾರ್ಥಿ, ನಂತರ

9. ಆರೋಹಣ ಕ್ರಮದಲ್ಲಿ NEET ಅರ್ಜಿ ಸಂಖ್ಯೆ

ಈ ಹೊಸ ಮಾನದಂಡದ ಪ್ರಕಾರ ಈ ಬಾರಿ ತಾನಿಷ್ಕಾರನ್ನು ಮೊದಲ ರ‍್ಯಾಂಕ್‌ ಎಂದು ಪ್ರಕಟಿಸಲಾಗಿದೆ. 2017ರಲ್ಲಿ ನೀಟ್‌ ಜಾರಿಗೆ ಬಂದ ಮೇಲೆ ಒಬಿಸಿಯ ವಿದ್ಯಾರ್ಥಿನಿಯೋರ್ವಳು ಮೊದಲ ಬಾರಿಗೆ ರ‍್ಯಾಂಕ್‌ ಪಡೆದಂತಾಗಿದೆ.

ಇದನ್ನು ಓದಿ | NEET UG 2022 | ದೇಶಕ್ಕೇ ಮೊದಲ ರ‍್ಯಾಂಕ್‌ ಪಡೆದ ತನಿಷ್ಕಾ ಎಷ್ಟು ಹೊತ್ತು ಓದುತ್ತಿದ್ದರು ಗೊತ್ತೇ?

Exit mobile version