ನವದೆಹಲಿ: ನೀಟ್ ಯುಜಿ 2024 (NEET-UG 2024)ರ ಕೌನ್ಸೆಲಿಂಗ್ ಅನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ. ಇದರಿಂದ ಇಂದು (ಜುಲೈ 6) ಪ್ರಾರಂಭವಾಗಬೇಕಿದ್ದ ನೀಟ್ ಯುಜಿ ಅಖಿಲ ಭಾರತ ಕೋಟಾ (AIQ) ಸೀಟು ಕೌನ್ಸೆಲಿಂಗ್ ವಿಳಂಬವಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೀಟ್-ಯುಜಿ 2024ರಲ್ಲಿ ಅಕ್ರಮಗಳು ನಡೆದಿವೆ ಎಂಬ ವಿವಾದದ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್-ಯುಜಿ ನಡೆಸುವ ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶುಕ್ರವಾರವಷ್ಟೇ ಪರೀಕ್ಷೆಯನ್ನು ರದ್ದುಗೊಳಿಸುವುದು ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
NEET UG counselling deferred until further notice: Official sources pic.twitter.com/VVMvpGwDDH
— ANI (@ANI) July 6, 2024
ನೀಟ್-ಯುಜಿ 2024ರ ಫಲಿತಾಂಶ ಪ್ರಕಟವಾದಾಗಿನಿಂದ ಒಂದಲ್ಲ ಒಂದು ವಿವಾದ ಸದ್ದು ಮಾಡುತ್ತಿದೆ. ಪರೀಕ್ಷೆ ನಡೆಸಿದ ಎನ್‌ಟಿಎ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಗ್ರೇಸ್ ಮಾರ್ಕ್ ನೀಡಿದ್ದು ವಿವಾದದ ಕಿಡಿ ಹೊತ್ತಿಸಿದೆ. ಇತ್ತೀಚೆಗೆ ನಡೆದ ಲೋಕಸಭೆಯ ಅಧಿವೇಶನದಲ್ಲಿಯೂ ಈ ಬಗ್ಗೆ ತೀವ್ರ ಚರ್ಚೆ ನಡೆದಿತ್ತು.
ಈ ಮಧ್ಯೆ ಪರೀಕ್ಷೆಯನ್ನೇ ರದ್ದು ಪಡಿಸುವಂತೆ ಹಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೆ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ ಪ್ರತ್ಯೇಕ ಅಫಿಡವಿತ್‌ಗಳನ್ನು ಸಲ್ಲಿಸಿ ಪರೀಕ್ಷೆ ರದ್ದು ಪಡಿಸದಂತೆ ಕೋರಿವೆ. ದೇಶದ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐ ವಿವಿಧ ರಾಜ್ಯಗಳಲ್ಲಿ ದಾಖಲಾದ ಪ್ರಕರಣಗಳ ತನಿಖೆ ನಡೆಸುತ್ತಿದೆ ಎಂದೂ ತಿಳಿಸಿದೆ. ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ನೀಟ್ ಯುಜಿ 2024ಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳ ವಿಚಾರಣೆಯನ್ನು ಜುಲೈ 8ರಂದು ನಡೆಸಲಿದೆ.
ನೀಟ್-ಪಿಜಿ ಪರೀಕ್ಷೆಯ ದಿನಾಂಕ ಪ್ರಕಟ
ಈ ಮಧ್ಯೆ ಶುಕ್ರವಾರ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET PG 2024) ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (National Board of Examinations) ಪ್ರಕಟಿಸಿದೆ. ಆಗಸ್ಟ್ 11ರಂದು ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಯಲಿದೆ.
ಜೂನ್ 23ರಂದು ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಯುಜಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ ಸೇರಿದಂತೆ ವಿವಿಧ ವಿವಾದ ಭುಗಿಲೆದ್ದ ಹಿನ್ನಲೆಯಲ್ಲಿ ಜೂನ್ 22ರಂದು ಪರೀಕ್ಷೆ ಮುಂದೂಡಿ ಪ್ರಕಟಣೆ ಹೊರಡಿಸಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಹಲವು ದೂರುಗಳು ದಾಖಲಾಗಿದ್ದವು. ಸಾಮಾಜಿಕ ಮಾಧ್ಯಮಗಳ ಮೂಲಕ ಆಕಾಂಕ್ಷಿಗಳಿಗೆ ಹಣಕ್ಕಾಗಿ ಪ್ರಶ್ನೆ ಪತ್ರಿಕೆಯನ್ನು ನೀಡುವ ಆಮಿಷ ಒಡ್ಡಲಾಗಿದೆ ಎಂದು ದೂರಲಾಗಿತ್ತು. ಹೀಗಾಗಿ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು.
ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು. ಪರೀಕ್ಷಾ ಪ್ರಕ್ರಿಯೆಗಳ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಮೌಲ್ಯಮಾಪನ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಸಮರ್ಥನೆ ನೀಡಿತ್ತು.
ಇದನ್ನೂ ಓದಿ: NEET UG Row : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮುಖ್ಯಸ್ಥರನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ