Site icon Vistara News

NEET UG 2024: ನೀಟ್ ಯುಜಿ ವಿವಾದದ ಬಗ್ಗೆ ಸಿಬಿಐ ತನಿಖೆಗೆ ಮನವಿ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್

Kolkata Doctor murder case

Kolkata Doctor murder case

ನವದೆಹಲಿ: ಈ ಬಾರಿಯ ಪದವಿಪೂರ್ವ ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಯ (NEET UG 2024) ಕುರಿತಾದ ವಿವಾದ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್‌ (Supreme Court) ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಯ ಬಗ್ಗೆ ಕೇಳಿ ಬಂದ ಇತರ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾದ ವಿವಿಧ ಮನವಿಗಳ ಬಗ್ಗೆ ಪ್ರಸ್ತಾವಿಸಿ, ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಬಾಕಿ ಇರುವ ಅರ್ಜಿಗಳೊಂದಿಗೆ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿದೆ.

ಜತೆಗೆ ನೀಟ್-ಯುಜಿ ವಿವಾದದ ಬಗ್ಗೆ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ದೂರುದಾರರಿಗೂ ನೋಟಿಸ್ ನೀಡಿ ಜುಲೈ 8ರಂದು ವಿಚಾರಣೆಗೆ ಬರುವಂತೆ ನಿರ್ದೇಶನ ನೀಡಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಆರೋಪದ ಮೇಲೆ ನೀಟ್-ಯುಜಿ 2024 ಅನ್ನು ರದ್ದುಗೊಳಿಸುವಂತೆ ಕೋರಿ ಹಲವು ಅರ್ಜಿಗಳು ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ ಎಂಬ ಎನ್‌ಟಿಎ ವಕೀಲರ ಹೇಳಿಕೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಗಮನಿಸಿದ್ದು, ಇದರ ವಿಚಾರಣೆಯನ್ನು ಜುಲೈ 8ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಕೋರ್ಟ್‌ ತಿಳಿಸಿದೆ.

ನೀಟ್​ ಯುಜಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್​ (ಕೃಪಾಂಕ) ಪಡೆದಿರುವ 1,563 ಅಭ್ಯರ್ಥಿಗಳಿಗೆ ಜೂನ್​ 23ರಂದು ಮರು ಪರೀಕ್ಷೆ ನಡೆಸುವುದಾಗಿ ಕೇಂದ್ರ ಸರ್ಕಾರ ಮತ್ತು ಎನ್​ಟಿಎ ಗುರುವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ನೀಟ್-ಯುಜಿ ಪರೀಕ್ಷೆಗೆ ಹಾಜರಾಗುವಾಗ ಅನುಭವಿಸಿದ ಸಮಯದ ನಷ್ಟವನ್ನು ಸರಿದೂಗಿಸಲು ‘ಗ್ರೇಸ್ ಅಂಕ’ ಪಡೆದ 1,563 ಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ಹೇಳಿದ್ದು, ಈ ವಿವರಗಳನ್ನು ಅರ್ಜಿ ಸಲ್ಲಿಕೆಯಾಗಿರುವ ಹೈಕೋರ್ಟ್‌ಗೆ ತಿಳಿಸುವುದಾಗಿ ಎನ್‌ಟಿಎ ಪರ ವಕೀಲರು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

ಮರು ಪರೀಕ್ಷೆಗಳನ್ನು ಜೂನ್ 23ರಂದು ನಡೆಸಲಾಗುವುದು ಮತ್ತು ಜೂನ್ 30ರೊಳಗೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಎನ್​​ಟಿಎ ಗುರುವಾರ ತಿಳಿಸಿದೆ. ಅಲ್ಲದೆ ಮರುಪರೀಕ್ಷೆ ಬರೆಯಲು ಬಯಸದವರಿಗೆ ಗ್ರೇಸ್‌ ಮಾರ್ಕ್‌ ರಹಿತ ಅಂಕ ಹೊಂದುವ ಅವಕಾಶ ನೀಡಲಾಗಿದೆ ಎಂದೂ ಹೇಳಿದೆ.

2024ರ ಮೇ 5ರಂದು 14 ಅಂತಾರಾಷ್ಟ್ರೀಯ ಕೇಂದ್ರ ಸೇರಿದಂತೆ 571 ನಗರಗಳ 4,750 ಕಡೆಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರೀ ಸುದ್ದಿಯಾಗಿ ವಿವಾದ ಭುಗಿಲೆದ್ದಿತ್ತು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಸಾಧಿಸಲು ಪ್ರಶ್ನೆ ಪತ್ರಿಕೆ ಸೋರಿಕೆಯೇ ಕಾರಣ ಎಂಬ ಆರೋಪಗಳೂ ಕೇಳಿ ಬಂದವು. ಈ ಹಿನ್ನೆಲೆಯಲ್ಲಿ ಹಲವರು ಕೋರ್ಟ್‌ ಮೆಟ್ಟಿಲೇರಿದ್ದರು. ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 6ರಂದು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಪ್ರಕಟಿಸಿದೆ.

ಇದನ್ನೂ ಓದಿ: NEET UG Result 2024: ಏನಿದು ನೀಟ್‌ ವಿವಾದ? ಗ್ರೇಸ್‌ ಅಂಕ ಕೊಟ್ಟಿದ್ಯಾಕೆ? ಮರು ಪರೀಕ್ಷೆ ಮಾಡೋದ್ಯಾಕೆ?

Exit mobile version