ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG Result 2024) ಅಕ್ರಮ ನಡೆದಿದೆ ಎಂದು ನೀಟ್ ಆಕಾಂಕ್ಷಿಗಳು ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ (exam) ಗ್ರೇಸ್ ಅಂಕಗಳನ್ನು (grace marks) ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆ (retest) ನಡೆಸಲು ಕೇಂದ್ರ ಸರ್ಕಾರ (central govt) ಗುರುವಾರ ಪ್ರಸ್ತಾವನೆ ಸಲ್ಲಿಸಿದೆ. ನೀಟ್ ಫಲಿತಾಂಶ ಘೋಷಣೆಯಾದ ಬಳಿಕ ಆಕಾಂಕ್ಷಿಗಳು ಮತ್ತು ಪೋಷಕರು ಕೆಲವು ಕೇಂದ್ರಗಳಲ್ಲಿ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ತನಿಖೆ ಮತ್ತು ಮರು ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.
ನೀಟ್- ಯುಜಿ ಅನ್ನು ಮೊದಲು ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (AIPMT) ಎಂದು ಕರೆಯಲಾಗುತ್ತಿತ್ತು. ಇದು ದೇಶದಾದ್ಯಂತ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಡೆಯುವ ಏಕೈಕ ಪ್ರವೇಶ ಪರೀಕ್ಷೆಯಾಗಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಹದಿಮೂರು ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸುವ ಉಸ್ತುವಾರಿ ವಹಿಸಿಕೊಂಡಿದೆ. ಈ ಹಿಂದೆ ಸೆಂಟ್ರಲ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ (CBSE) ಇದನ್ನು ನಡೆಸುತ್ತಿತ್ತು.
ನೀಟ್ ಯುಜಿ ಫಲಿತಾಂಶಗಳ ಸುತ್ತ ವಿವಾದ
2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಸಾಧಿಸಲು ಪ್ರಶ್ನೆ ಪತ್ರಿಕೆ ಸೋರಿಕೆಯೇ ಕಾರಣ ಎಂಬ ಆರೋಪಗಳೂ ಕೇಳಿ ಬಂದಿದೆ.
ನೀಟ್ ಯುಜಿ ಪರೀಕ್ಷೆ ಬರೆದ 67 ವಿದ್ಯಾರ್ಥಿಗಳು ಒಟ್ಟು 720 ಅಂಕಗಳನ್ನು ಗಳಿಸಿದ್ದಾರೆ ಎಂಬುದು ಫಲಿತಾಂಶ ತೋರಿಸಿವೆ. ಇದು ಹಿಂದಿನ ವರ್ಷಗಳ ಫಲಿತಾಂಶಗಳಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಗಳಿಸಿದ್ದರೆ, 2022ರಲ್ಲಿ ಮೂವರು, 2021ರಲ್ಲಿ ಇಬ್ಬರು, 2020ರಲ್ಲಿ ಒಬ್ಬರು ಮಾತ್ರ ಪೂರ್ಣ ಅಂಕ ಗಳಿಸಿದ್ದರು. ಈ ಬಾರಿ ಹರ್ಯಾಣದ ಒಂದೇ ಕೇಂದ್ರದಲ್ಲಿ ಆರು ಮಂದಿ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇದು ಸಂಶಯಕ್ಕೆ ಆಸ್ಪದ ಮಾಡಿ ಕೊಟ್ಟಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ನೀಟ್ ಯುಜಿ 2024ರಲ್ಲಿ ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮರು ಪರೀಕ್ಷೆಯು ಜೂನ್ 23ರಂದು ನಡೆಯಲಿದೆ. ಆದರೆ ಪ್ರವೇಶ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಿಲ್ಲಿಸದಿರಲು ಸುಪ್ರೀಂ ಕೋರ್ಟ್ ಆದೇಶಿಸಿದೆ. 1,563 ಅಭ್ಯರ್ಥಿಗಳಲ್ಲಿ ಯಾರಾದರೂ ಮರುಪರೀಕ್ಷೆಯಿಂದ ಹೊರಗುಳಿದಿದ್ದರೆ ಗ್ರೇಸ್ ಅಂಕಗಳಿಲ್ಲದ ಅವರ ಹಿಂದಿನ ಅಂಕಗಳನ್ನು ಫಲಿತಾಂಶಗಳಿಗಾಗಿ ಬಳಸಲಾಗುತ್ತದೆ.
ಜುಲೈ 6ರಂದು ಕೌನ್ಸೆಲಿಂಗ್ ಪ್ರಾರಂಭ
ಮರು ಪರೀಕ್ಷೆಯ ಫಲಿತಾಂಶವನ್ನು ಜೂನ್ 30ರಂದು ಪ್ರಕಟಿಸಲಾಗುವುದು ಮತ್ತು ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 6 ರಂದು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಸುಪ್ರೀಂ ಕೋರ್ಟ್‌ಗೆ ಮೊರೆ
ನೀಟ್ ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸುವಂತೆ ಮತ್ತು ಗ್ರೇಸ್ ಮಾರ್ಕ್ ಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಮರುಪರೀಕ್ಷೆಯನ್ನು ನಡೆಸುವಂತೆ ಕೋರಿ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿತ್ತು. ನ್ಯಾಯಾಧೀಶರಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿಗಳನ್ನು ಆಲಿಸಿತು.
ಫಿಸಿಕ್ಸ್ ವಾಲಾ ಸಿಇಒ ಅಲಖ್ ಪಾಂಡೆ, ಅರ್ಜಿದಾರರಲ್ಲಿ ಒಬ್ಬರು ಗ್ರೇಸ್ ಅಂಕಗಳನ್ನು ನೀಡುವ ಎನ್‌ಟಿಎ ನಿರ್ಧಾರವು ನಿರಂಕುಶ ಎಂದು ವಾದಿಸಿದರು. ಅವರು ಸುಮಾರು 20,000 ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಸಂಗ್ರಹಿಸಿದ್ದಾರೆ. ಸುಮಾರು 70-80 ಅಂಕಗಳನ್ನು ಕನಿಷ್ಠ 1,500 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳಾಗಿ ನೀಡಿರುವುದು ಆಕ್ಷೇಪಕಾರಿ ಎಂದು ಅವರು ಹೇಳಿದ್ದಾರೆ.
ಎರಡನೇ ಅರ್ಜಿಯನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಸದಸ್ಯರಾದ ಅಬ್ದುಲ್ಲಾ ಮೊಹಮ್ಮದ್ ಫೈಜ್ ಮತ್ತು ಡಾ. ಶೇಕ್ ರೋಷನ್ ಮೊಹಿದ್ದೀನ್ ಅವರು ಎನ್‌ಇಇಟಿ ಮರುಪರೀಕ್ಷೆಗೆ ವಿನಂತಿಸಿದ್ದರು. ಹಲವಾರು ವಿದ್ಯಾರ್ಥಿಗಳು ಗ್ರೇಸ್ ಅಂಕಗಳನ್ನು ಪಡೆದಿರುವುದು ಇಡೀ ನೀಟ್ ಪರೀಕ್ಷಾ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ ಎಂದು ಅವರು ವಾದಿಸಿದ್ದರು.
ಮೂರನೇ ಅರ್ಜಿಯನ್ನು ನೀಟ್ ಅಭ್ಯರ್ಥಿ ಜಾರಿಪಿಟಿ ಕಾರ್ತೀಕ್ ಅವರು ಸಲ್ಲಿಸಿದ್ದು, ಪರೀಕ್ಷೆಯ ಸಮಯದಲ್ಲಿ ಕಳೆದುಹೋದ ಸಮಯಕ್ಕೆ ಪರಿಹಾರವಾಗಿ ಗ್ರೇಸ್ ಅಂಕಗಳನ್ನು ನೀಡುವುದನ್ನು ಪ್ರಶ್ನಿಸಿದ್ದರು.