ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ವಿವಾದ ಹುಟ್ಟಿಕೊಂಡಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗಿದ್ದ ʼಸಂವಿಧಾನ ಶಿಲ್ಪಿʼ ಎಂಬ ಬಿರುದನ್ನು ಕೈಬಿಟ್ಟಿರುವ ವಿಚಾರ ವಿವಾದ ಸ್ಪಷ್ಟವಾಗಿದೆ.ಈವರೆಗೆ ಬಸವಣ್ಣನವರ ಕುರಿತ ವಿಷಯಕ್ಕೆ ವಿವಾದವಾಗಿತ್ತು. ಈಗ ಅಂಬೇಡ್ಕರ್ ವಿಚಾರವಾಗಿ ವಿವಾದ ಶುರುವಾಗಿದೆ.
ಇತ್ತೀಚೆಗೆ ಸಿಎಂ ಬೊಮ್ಮಾಯಿ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ವಿವಾದಗಳಿಗೆ ಸ್ಪಷ್ಟನೆ ನೀಡಿ ಮಂಗಲ ಹಾಡಿದ್ದರು. ಆದರೆ ಪರಿಷ್ಕರಣೆ ಸಮಿತಿಯಿಂದ ಆದ ಪ್ರಮಾದ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ನೂತನ ಪರಿಷ್ಕರಣೆ ಸಮಿತಿಯು 9ನೇ ತರಗತಿಯ ಪಠ್ಯವನ್ನು ಪರಿಷ್ಕಾರ ಮಾಡಿದೆ. ಸಂವಿಧಾನದ ಕರಡು ರಚನಾ ಸಮಿತಿಯ ಕುರಿತಾದ ಪಾಠದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ನೀಡಲಾಗಿದೆ. ಪಠ್ಯದಲ್ಲಿ ಅಂಬೇಡ್ಕರ್ ಅವರನ್ನು ʼಸಂವಿಧಾನ ಶಿಲ್ಪಿʼ ಎಂದು ಕರೆಯಲಾದ ಅಂಶವನ್ನು ರೋಹಿತ್ ಚಕ್ರತೀರ್ಥ ಸಮಿತಿ ಕೈಬಿಟ್ಟಿದೆ ಎಂದು ವಿವಾದ ಸೃಷ್ಟಿಯಾಗಿದೆ.
ಇದನ್ನೂ ಓದಿ: ಅಂಬೇಡ್ಕರ್ ಪಠ್ಯ ಕೈಬಿಟ್ಟ ವಿವಿ: ರಾಜ್ಯದಲ್ಲಿ ಮತ್ತೊಂದು ಪಠ್ಯಪುಸ್ತಕ ಎಡವಟ್ಟು
ಕಳೆದ ಬಾರಿ ಬರಗೂರು ರಾಮಚಂದ್ರಪ್ಪ ಸಮಿತಿಯ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಪದ ಇತ್ತು. ಆದರೆ, ರೋಹಿತ್ ಚಕ್ರತೀರ್ಥ ಸಮಿತಿ ʼಸಂವಿಧಾನ ಶಿಲ್ಪಿʼ ಎಂಬ ಪದವನ್ನು ಕೈಬಿಟ್ಟಿದ್ದು ದೊಡ್ಡ ತಪ್ಪು ಎಂದು ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಸಂವಿಧಾನ ಕರಡು ರಚನಾ ಸಮಿತಿ ತನ್ನ ಕಾರ್ಯವನ್ನು ಮುಗಿಸಲು 2 ವರ್ಷ 11 ತಿಂಗಳು 18 ದಿನಗಳನ್ನು ತೆಗೆದುಕೊಂಡಿತ್ತು ಎಂಬ ವಿವರವನ್ನೂ ಈ ಹಿಂದಿನ ಪಠ್ಯದಲ್ಲಿತ್ತು. ಇದನ್ನೂ ಕೂಡ ಬದಲಾಯಿಸಿ ರೋಹಿತ್ ನೇತೃತ್ವದ ಸಮಿತಿ 145 ದಿನ ಸಭೆ ಸೇರಿತ್ತು ಎಂಬ ಅಂಶವನ್ನ ಮಾತ್ರ ಉಲ್ಲೇಖಿಸಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಹೀಗೆ ಮಾಡಿರುವುದು ಅಂಬೇಡ್ಕರ್ ಅವಹೇಳನ ಎಂದು ಅನೇಕರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದು ಅಂಬೇಡ್ಕರ್‌ಗೆ ಅವಹೇಳನ ಎಂದು ಆಕ್ರೋಶ ವ್ಯಕ್ತವಾಗ್ತಿದೆ.
ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯದಲ್ಲೇನಿತ್ತು.?
ಕರಡು ರಚನಾ ಸಮಿತಿ:
ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು, 5 ಉಪಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದುದು ಕರಡು ಸಮಿತಿ, ಡಾ. ಬಿ.ಆರ್. ಅಂಬೇಡ್ಕರ್‌ರವರು ಇದರ ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ. ಈ ಕರಡು ಸಮಿತಿಯಲ್ಲಿ ಎನ್. ಗೋಪಾಲ ಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್. ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್ ಸಾದುಲ್ಲಾ, ಸಿ. ಮಾಧವರಾವ್ ಅವರು ಸದಸ್ಯರಾಗಿದ್ದರು.
ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯದಲ್ಲೇನಿದೆ..?
ಕರಡು ರಚನಾ ಸಮಿತಿ:
ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಅನೇಕ ಸಮಿತಿಗಳನ್ನು ರಚಿಸಿತ್ತು. ಅವುಗಳಲ್ಲಿ ಮುಖ್ಯವಾದುದು ಕರಡು ಸಮಿತಿ, ಡಾ. ಬಿ.ಆರ್.ಅಂಬೇಡ್ಕರ್ ಅದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ. ಮುನ್ಷಿ, ಟಿ.ಟಿ. ಕೃಷ್ಣಮಾಚಾರಿ ಮುಂತಾದ ಮುತ್ಸದ್ದಿಗಳು ಸದಸ್ಯರುಗಳಾಗಿದ್ದರು.
ಇದನ್ನೂ ಓದಿ: ಪಠ್ಯ ವಿವಾದ-2: ಸದ್ಯದಲ್ಲೆ ಪಿಯು ಪಠ್ಯ ಪರಿಷ್ಕರಣೆ