ಬೆಂಗಳೂರು: SSLC Result ಗುರುವಾರ ಪ್ರಕಟವಾಗಿದ್ದು. ಅನೇಕರು ವಿಶೇಷ ಸಾಧನೆ ಮಾಡಿದ್ದಾರೆ. ಸಾಧನೆಗೆ ಬಡತನ ಅಡ್ಡಿಯಲ್ಲ ಎನ್ನುವುದಕ್ಕೆ ಈ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ.
ಮಂಡ್ಯ : ಅಪೂರ್ವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ವಿಶೇಷ ಸಾಧನೆ ಮಾಡುವ ಮೂಲಕ ಹೆತ್ತವರಿಗೆ ಹಿರಿಮೆ ತಂದಿದ್ದಾರೆ. ಅಪೂರ್ವ ತಂದೆ ಸಹದೇವ ಅವರು ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಇಷ್ಟಾದರೂ ಮಗಳ ವ್ಯಾಸಂಗದ ವಿಚಾರದಲ್ಲಿ ಅತೀವ ಕಾಳಜಿ ವಹಿಸಿದವರು.
ತಮ್ಮೂರಿನ ಸನಿಹವೇ ಇರುವ ಮೊಗರಹಳ್ಳಿ ಮಹಾಲಕ್ಷ್ಮಿ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ದಾಖಲಿಸಿದ್ದರು. ಪೂರ್ವ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮದಲ್ಲೇ ಕಲಿತ ಅಪೂರ್ವ ಇದೀಗ ಹೆಸರಿಗೆ ತಕ್ಕಂತೆಯೇ ಅಪೂರ್ವವಾದ ಸಾಧನೆ ಮಾಡಿದ್ದಾರೆ.
ಉಡುಪಿ: ಉಡುಪಿಯ ಮೀನುಗಾರಿಕೆ ಮಾಡುತ್ತಿರುವ ಬಡಕುಟುಂಬದ ವಿದ್ಯಾರ್ಥಿ ಪುನೀತ್ ನಾಯ್ಕ್ 625ಕ್ಕೆ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಮಲ್ಪೆಯ ಸರಕಾರಿ ಜೂನಿಯರ್ ಕಾಲೇಜಿನ ಪುನೀತ್ ಬೆಳಗ್ಗೆ 4 ಗಂಟೆಗೆ ಎದ್ದು ಮೀನುಗಾರಿಕೆ ಕೆಲಸಕ್ಕೆ ಹೋಗುತ್ತಿದ್ದರು. ನಂತರ 9 ಗಂಟೆಯಿಂದ ಶಾಲೆಗೆ ಹೋಗುತ್ತಿದ್ದರು. ಶಾಲೆಯಲ್ಲಿ ಶಿಕ್ಷಕರು ಕಲಿಸಿದ್ದ ಪಾಠವನ್ನು ಮನೆಯಲ್ಲಿ ಹೆಚ್ಚಿನ ಅಭ್ಯಾಸ ನಡೆಸುತ್ತಿದ್ದರು.
ಶಾಲೆಯಲ್ಲಿ ಶಿಕ್ಷಕರು ಹಾಗೂ ಮನೆಯವರು ನೀಡಿದ ಪ್ರೋತ್ಸಾಹಿದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಪುನೀತ್ ಹೇಳಿದ್ದಾರೆ.
ಇದೇ ವೇಳೆ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು, ಸಾಧನೆ ಮಾಡಿದ ವಿಜಯಪುರ ಮತ್ತು ಚಿಕ್ಕನಾಯಕನಹಳ್ಳಿ ವಿದ್ಯಾರ್ಥಿನಿಯರಿಗೆ ದೂರವಾಣಿ ಕರೆ ಮಾಡಿ ಶುಭಾಶಯನ್ನು ಕೋರಿದ್ದಾರೆ.
ಇದನ್ನೂ ಓದಿ: SSLC Results: ಔಟ್ ಆಫ್ ಔಟ್ ಸಾಧಕರು, 625 ಅಂಕ ಪಡೆದ ಎಲ್ಲರ ಪಟ್ಟಿ ಇಲ್ಲಿದೆ ನೋಡಿ