Site icon Vistara News

Public Exam 2023 : 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ; ನಿಮ್ಮ ನಿಮ್ಮ ಶಾಲೆಗಳಲ್ಲಿಯೇ ನಡೆಯಲಿದೆ ಎಕ್ಸಾಮ್‌

sslc preparatory exam 2023

Karnataka Board Exams 2023

ಬೆಂಗಳೂರು: 5 ಮತ್ತು 8ನೇ ತರಗತಿಗಳಿಗೆ ಮಾರ್ಚ್‌ 13 ರಿಂದ ನಡೆಯಲಿರುವ ಮೌಲ್ಯಂಕನ ಪರೀಕ್ಷೆ (Public Exam 2023) ಬರೆಯಬೇಕಾಗಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಈ ಪರೀಕ್ಷೆಯನ್ನು ಬರೆಯಲು ನೀವು ಬೇರೆ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕಾಗಿಲ್ಲ. ನೀವು ಓದುತ್ತಿರುವ ಶಾಲೆಯಲ್ಲಿಯೇ ಈ ಪರೀಕ್ಷೆಯನ್ನು ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗ ಸೂಚಿಸಿದೆ.

ಈ ಪಬ್ಲಿಕ್‌ ಪರೀಕ್ಷೆಯನ್ನು ಕೆಲವೇ ಕೆಲವು ಶಾಲೆಗಳಲ್ಲಿ ನಡೆಸಲು ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯು ತೀರ್ಮಾನಿಸಿತ್ತು. ಇದಕ್ಕಾಗಿ ಕೆಲವು ಶಾಲೆಗಳನ್ನು ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿತ್ತು. ಈ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹೋಗಿ ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ ಎಂದು ಪೋಷಕರು ದೂರಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಓದುತ್ತಿರುವ ಶಾಲೆಗಳಲ್ಲಿಯೇ ಪರೀಕ್ಷೆ ನಡೆಸುವಂತೆ ಗುರುವಾರ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.

ʻʻ5 ಮತ್ತು 8 ನೇ ತರಗತಿಯ ಮೌಲ್ಯಾಂಕನಕ್ಕೆ ಶಾಲಾವಾರು ವಿದ್ಯಾರ್ಥಿಗಳ ಸಂಖ್ಯೆಯನ್ನಾಧರಿಸಿ ಪರೀಕ್ಷಾ ಕೇಂದ್ರಗಳನ್ನು ರಚಿಸುವಂತೆ ಹಿಂದೆ ಸೂಚಿಸಲಾಗಿತ್ತು. ಆದರೆ ಈ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಾರಂಭಿಸಲಾಗಿರುವ ಸಹಾಯವಾಣಿಗೆ, ವಿದ್ಯಾರ್ಥಿಗಳಿಗೆ ನಿಗದಿಪಡಿಸಲಾಗಿರುವ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಅನಾನುಕೂಲವಾಗುತ್ತಿರುವ ಬಗ್ಗೆ ಹಲವು ಪೋಷಕರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳಾಗಿ ಪರಿಗಣಿಸಿ ಈಗಾಗಲೇ ನಿಗದಿಪಡಿಸಿರುವ ದಿನಾಂಕಗಳಂದೇ ಮೌಲ್ಯಾಂಕನ ಪರೀಕ್ಷೆ ನಡೆಸುವುದುʼʼ ಎಂದು ಶಿಕ್ಷಣ ಇಲಾಖೆಯು ಆದೇಶದಲ್ಲಿ ಹೇಳಿದೆ.

8ನೇ ತರಗತಿಗೆ ಮಾರ್ಚ್‌ 13 ರಿಂದ 18ರ ವರೆಗೆ ಈ ಪಬ್ಲಿಕ್‌ ಪರೀಕ್ಷೆ ನಡೆಯಲಿದೆ, 5ನೇ ತರಗತಿಗೆ ಮಾರ್ಚ್‌ 15 ರಿಂದ 18ರ ವರೆಗೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2.30 ರಿಂದ ಆರಂಭಗೊಂಡು 4.30ಕ್ಕೆ ಮುಕ್ತಾಯವಾಗಲಿವೆ. ಮೌಖಿಕ ಪರೀಕ್ಷೆಯನ್ನು ಈಗಾಗಲೇ ಶಾಲೆಗಳಲ್ಲಿ ಆರಂಭಿಸಲಾಗಿದೆ. ಪರೀಕ್ಷೆಯ ಪ್ರವೇಶ ಪತ್ರವನ್ನು ಈಗಾಗಲೇ ಶಾಲೆಗಳು ವಿದ್ಯಾರ್ಥಿಗಳಿಗೆ ಒದಗಿಸಿವೆ.

ಪರೀಕ್ಷೆಯ ದಿನದಂದು ಮಧ್ಯಾಹ್ನ 2ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಹಾಜರಿರಬೇಕು. 2.30 ರ ನಂತರ ಪರೀಕ್ಷಾ ಕೇಂದ್ರಕ್ಕೆ ಹಾಜರಾದರೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಪರೀಕ್ಷೆ ಬರೆಯಲು ಅಗತ್ಯವಿರುವ ಲೇಖನ ಸಾಮಗ್ರಿಗಳಾದ ಪೆನ್ನು, ಪೆನ್ಸಿಲ್‌, ಜಿಯೋಮೆಟ್ರಿ ಬಾಕ್ಸ್‌, ರಬ್ಬರ್‌, ಶಾರ್ಪ್‌ನರ್‌ ಇತ್ಯಾದಿಗಳನ್ನು ತರಬೇಕು. ಪರೀಕ್ಷೆಯ ಅವಧಿಯು ಮುಗಿಯವವರೆಗೂ ಪರೀಕ್ಷಾ ಕೊಠಡಿಯಿಂದ ಹೊರ ಹೋಗಲು ಅವಕಾಶವಿರುವುದಿಲ್ಲ ಎಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಂಡಳಿಯು ಸೂಚಿಸಿದೆ.

ಪರೀಕ್ಷಾ ಕೊಠಡಿಯೊಳಗೆ ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪುಸ್ತಕ, ಕೈಬರಹದ ಚೀಟಿ, ವಿದ್ಯುನ್ಮಾನ ಉಪಕರಣಗಳು ಅಥವಾ ಮೊಬೈಲ್‌ ಫೋನ್‌, ಡಿಜಿಟಲ್‌ ಮತ್ತು ಸ್ಮಾರ್ಟ್‌ ಕೈಗಡಿಯಾರಗಳ ಬಳಕೆಯನ್ನು ನಿಷೇಧಿಸಲಾಗಿರುತ್ತದೆ ಎಂದು ಇಲಾಖೆಯು ತಿಳಿಸಿದೆ.

ಹೇಗಿರಲಿದೆ ಪರೀಕ್ಷೆ?

ಲಿಖಿತ ಪರೀಕ್ಷೆಯ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯು 40 ಅಂಕಗಳಿಗೆ ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, 20 ಅಂಕಗಳಿಗೆ ಎಂ.ಸಿ.ಕ್ಯೂ ಪಶ್ನೆಗಳನ್ನು ( ಒಂದು ಪ್ರಶ್ನೆಗೆ ನಾಲ್ಕು ಉತ್ತರ ನೀಡಲಾಗಿರುತ್ತದೆ. ಇದರಲ್ಲಿ ಸರಿಯಾದ ಉತ್ತರವನ್ನು ವಿದ್ಯಾರ್ಥಿಯು ಗುರುತಿಸಬೇಕಿರುತ್ತದೆ ) ಹಾಗೂ ಉಳಿದ 20 ಅಂಕಗಳಿಗೆ ವಾಕ್ಯ ರೂಪದಲ್ಲಿನ ಬರವಣಿಗೆಯನ್ನಾಧರಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉತ್ತರ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಇದನ್ನು ಸ್ಪಷ್ಟವಾಗಿ ತೋರಿಸಲಾಗಿದೆ.

ಮಾದರಿ ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ (Click Here ) ಮಾಡಿ

ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ಮಾದರಿಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳು ತಾವು ಓದುವ ಮಾಧ್ಯಮದ ಪತ್ರಿಕೆಯನ್ನು ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಬಹುದಾಗಿದೆ.

ಇದನ್ನೂ ಓದಿ: Karnataka Board Exams 2023 : 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ; ಮಾ.13 ರಿಂದ ಎಕ್ಸಾಮ್‌ ಶುರು

Exit mobile version