Site icon Vistara News

Public Exam: 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌; ರಾಜ್ಯ ಸರ್ಕಾರದ ಮಹತ್ವ ನಿರ್ಧಾರ

Public Exam Good news for students of classes 5 and 8 and 9 Important decision of Karnataka government

ಬೆಂಗಳೂರು: ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ಭಾರಿ ವಿವಾದಕ್ಕೆ ಕಾರಣವಾಗಿರುವ 5,8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆ (Public Exam) ನಡೆದಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ಇದರ ಭವಿಷ್ಯ ಇನ್ನೂ ನಿರ್ಧಾರ ಇನ್ನೂ ಆಗಿಲ್ಲ. ಇದು ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಾರಣ, ಈ ಮೂರೂ ತರಗತಿವಾರು ಮೌಲ್ಯಾಂಕನದ ವಿಶ್ಲೇಷಣೆ ಮಾಡಿ, ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ದಾಖಲಿಸುವ ಗೊಂದಲದಲ್ಲಿ ಶಿಕ್ಷಣ ಇಲಾಖೆ ಇದೆ. ಈಗ ಈ ಸಂಬಂಧ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಈಗಾಗಲೇ ಶಾಲೆಗಳಲ್ಲಿ ಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ನಡೆಸಲಾಗಿರುವ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಅಗ್ರಿಗೇಟ್‌ ಮಾಡಿ ಮುಂದಿನ ತರಗತಿಗಳಿಗೆ ದಾಖಲಿಸಲು ಮುಂದಾಗಲಾಗಿದೆ.

ಸರ್ವೋಚ್ಚ ನ್ಯಾಯಾಲಯವು 2024ರ ಏಪ್ರಿಲ್‌ 08ರಂದು ಪಬ್ಲಿಕ್‌ ಪರೀಕ್ಷೆಗೆ ತಡೆಯಾಜ್ಞೆ ನೀಡಿತ್ತು. ಈಗ ಈ ಸಂಬಂಧ ತೀರ್ಪು ಪ್ರಕಟವಾಗುವ ಮೂಲಕ ಪಬ್ಲಿಕ್‌ ಪರೀಕ್ಷೆಯ ಬಗ್ಗೆ ನಿರ್ಧಾರವಾಗಬೇಕಿದೆ. ಅಂದರೆ, 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ SA-2 ಮೌಲ್ಯಾಂಕನ ಕಾರ್ಯ ಮುಗಿದಿದ್ದು, ರಾಜ್ಯದ ಎಲ್ಲ ಶಾಲೆಗಳಲ್ಲಿ ದಿನಾಂಕ: 08-04-2024ರಂದು ಫಲಿತಾಂಶವನ್ನು ಪ್ರಕಟಿಸಲು ತಿಳಿಸಲಾಗಿತ್ತು. ಬಳಿಕ ಫಲಿತಾಂಶವನ್ನು ಪ್ರಕಟಿಸಲು ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದ್ದು, ಅಂತಿಮ ತೀರ್ಪು ಬಾಕಿ ಇದೆ. ಹೀಗಾಗಿ ಮುಂದಿನ ಪ್ರವೇಶಾತಿಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಈಗಿರುವ ಸಮಸ್ಯೆ ಏನು?

ಪ್ರಸ್ತುತ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದೆ. ಆದರೆ, ಸುಪ್ರೀಂ ಕೋರ್ಟ್‌ನಿಂದ ಪರೀಕ್ಷೆಯ ಬಗ್ಗೆ ಇನ್ನೂ ತೀರ್ಪು ಬಂದಿಲ್ಲ. ಹೀಗಾಗಿ ಈಗಾಗಲೇ ನಡೆಸಿದ ಪರೀಕ್ಷೆಯ ಮೌಲ್ಯಮಾಪನ ಸೇರಿದಂತೆ ಫಲಿತಾಂಶವನ್ನು ಪ್ರಕಟ ಮಾಡಲು ಶಾಲೆಗಳಿಗೆ ಅವಕಾಶ ಇಲ್ಲ. ಆದರೆ, ಮೇ 29ರಿಂದ 2024- 25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಇನ್ನು ಫಲಿತಾಂಶವೇ ಬರದೇ ಮುಂದಿನ ತರಗತಿಗಳಿಗೆ ಕಳುಹಿಸಲು ಆಗದ ಇಕ್ಕಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿಗಳು ಇವೆ.

ವರ್ಗಾವಣೆಯಾದವರಿಗೂ ಭಾರಿ ಸಮಸ್ಯೆ!

2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದೇ ಇರುವುದರಿಂದ ಅವರನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ/ತರಗತಿಗೆ ಶಾಲಾ ಪ್ರವೇಶ/ದಾಖಲಾತಿ ಮಾಡಲು, ಪ್ರವೇಶ ಶುಲ್ಕ ಪಾವತಿಸಲು ಹಾಗೂ ಬೇರೆ ಸ್ಥಳಗಳಿಗೆ ವರ್ಗಾವಣೆ ಹೊಂದಿರುವ ಪ್ರಯುಕ್ತ ಮಕ್ಕಳ ವರ್ಗಾವಣೆ ಪ್ರಮಾಣಪತ್ರ, ಪ್ರಗತಿ ಪತ್ರ ಮತ್ತು ವ್ಯಾಸಂಗ ಪ್ರಮಾಣಪತ್ರಗಳನ್ನು ವಿತರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಗತ್ಯ ಕ್ರಮ ವಹಿಸುವಂತೆ ಶಾಲೆಗಳು, ವಿದ್ಯಾರ್ಥಿಗಳು ಕೋರಿದ್ದಾರೆ. ಅದರಂತೆ ಮಕ್ಕಳ ಶೈಕ್ಷಣಿಕ ಭವಿಷ್ಯ ಸುಗಮಗೊಳಿಸುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್;‌ ಜೂನ್‌ 13ಕ್ಕೆ ಮತದಾನ

ಮೌಲ್ಯಾಂಕನದ ಆಧಾರದ ಮೇಲೆ ಪಾಸ್‌

ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ: 8142/2024, 8136/2024 ಮತ್ತು 8127/2024ರ ಮಧ್ಯಂತರ ತೀರ್ಪಿನಂತೆ, 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ SA-2 ಮೌಲ್ಯಾಂಕನವನ್ನು ತಡೆಹಿಡಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಶಾಲೆಗಳಲ್ಲಿ ನಡೆದಿರುವ FA- 1, FA-2, FA-3, FA-4 ಮತ್ತು SA-1 ಗಳ ಮೌಲ್ಯಾಂಕನದ ಆಧಾರದ ಮೇಲೆ ಮಕ್ಕಳನ್ನು ಮುಂದಿನ ಶೈಕ್ಷಣಿಕ ತರಗತಿಗೆ ಮುಂದುವರಿಸಲು ಅವಕಾಶ ಕಲ್ಪಿಸುವ ನಿರ್ಧಾರವನ್ನು ಕೈಗೊಂಡಿದ್ದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಪಬ್ಲಿಕ್‌ ಪರೀಕ್ಷೆ ಮತ್ತು ಅದರ ಸುತ್ತಲಿನ ವಿವಾದ?

ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ ನಾಗೇಶ್ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಮಾದರಿಯ ಮೌಲ್ಯಾಂಕನ ಪರೀಕ್ಷೆ ಜಾರಿಗೆ ತಂದಿದ್ದರು. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ 9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಬೋರ್ಡ್‌ ಎಕ್ಸಾಮ್‌ ನಡೆಸುವ ಚಿಂತನೆ ಮಾಡಲಾಗಿತ್ತು. 9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್‌ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಗಂಭೀರತೆ ಕಾಣಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಾದವಾಗಿತ್ತು.

ಆದರೆ, 2023ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು. ವಾದ ಆಲಿಸಿದ ಹೈಕೋರ್ಟ್ ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿತ್ತು. ತಕ್ಷಣವೇ ರಾಜ್ಯದ ಶಿಕ್ಷಣ ಇಲಾಖೆ ವತಿಯಿಂದ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತು. ಎರಡೂ ಕಡೆಯವರ ವಾದ ಮಾತ್ರವಲ್ಲ, ಪರೀಕ್ಷೆಗಳು ಹೇಗೆ ನಡೆಯುತ್ತವೆ ಎಂಬಿತ್ಯಾದಿ ಅಂಶಗಳನ್ನು ಕೇಳಿಸಿಕೊಂಡ ಹೈಕೋರ್ಟ್‌ ಪರೀಕ್ಷೆ ನಡೆಸಲು ಷರತ್ತುಬದ್ಧ ಅನುಮತಿಯನ್ನು ನೀಡಿತ್ತು.

ಇದನ್ನೂ ಓದಿ: Prajwal Revanna Case: ದೇವರಾಜೇಗೌಡರಿಗೆ ಮೆಂಟಲ್‌ ಟ್ರೀಟ್ಮೆಂಟ್‌ ಕೊಡಿಸಬೇಕಿದೆ: ಕಾಂಗ್ರೆಸ್‌ ವ್ಯಂಗ್ಯ

ಒಂದು ಹಂತದಲ್ಲಿ ಮಾರ್ಚ್‌ 13ರಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಮಾರ್ಚ್‌ 14ರಂದು ತೀರ್ಪು ನೀಡಿ ಪರೀಕ್ಷೆಗೆ ಅನುಮತಿ ನೀಡಿತು. ಜತೆಗೆ ಮಾರ್ಚ್‌ 27ರಿಂದಲೇ ಪರೀಕ್ಷೆಯನ್ನು ಮರುನಿಗದಿ ಮಾಡಲು ಸೂಚಿಸಿತು. ಜತೆಗೆ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗಳನ್ನು ಕೇಳಬಾರದು, ಯಾರನ್ನೂ ಅನುತ್ತೀರ್ಣಗೊಳಿಸಬಾರದು ಮತ್ತು ಫಲಿತಾಂಶವನ್ನು ಶಾಲಾ ಮಟ್ಟದಲ್ಲಿ ಮಾತ್ರ ಪ್ರಕಟಿಸಬೇಕು ಎಂಬ ಷರತ್ತುಗಳನ್ನು ವಿಧಿಸಿತು. ಇದಕ್ಕೆ ರಾಜ್ಯ ಸರ್ಕಾರವೂ ಒಪ್ಪಿ ಮಾರ್ಚ್‌ 27ರಿಂದ ಪರೀಕ್ಷೆಯನ್ನು ಆರಂಭಿಸಿತ್ತು.

ಈ ನಡುವೆ ಖಾಸಗಿ ಶಾಲೆಗಳ ಒಕ್ಕೂಟವು ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆದು, ಪರೀಕ್ಷೆ ಈಗಾಗಲೇ ಆರಂಭಗೊಂಡಿರುವುದರಿಂದ ಈಗ ತಡೆಯಾಜ್ಞೆ ನೀಡಲಾಗದು ಎಂದು ಹೇಳಿತ್ತು. ಬಳಿಕ ಮೇಲ್ಮನವಿಯ ವಿಚಾರಣೆ ನಡೆದಿದ್ದು. ಅಂತಿಮವಾಗಿ ಪಬ್ಲಿಕ್‌ ಪರೀಕ್ಷೆಯ ವಿರುದ್ಧ ತಡೆಯಾಜ್ಞೆಯನ್ನು ನೀಡಲಾಗಿತ್ತು.

Exit mobile version