Site icon Vistara News

Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Supreme Court On Article 370

Article 370: Constitution doesn’t restrict President from reorganising a state

ಬೆಂಗಳೂರು: ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ರಾಜ್ಯ ಮಟ್ಟದ ಮೌಲ್ಯಾಂಕನ (Public Exam) ನಡೆಸಲು ಅವಕಾಶ ನೀಡಿರುವ ರಾಜ್ಯ ಹೈಕೋರ್ಟ್‌ನ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಇದರಿಂದಾಗಿ ಈ ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಗೆಲುವಾದಂತಾಗಿದೆ.

ಈಗಾಗಲೇ ಪರೀಕ್ಷೆಗಳು ಆರಂಭವಾಗಿರುವುದರಿಂದ ಈ ಅರ್ಜಿಯ ವಿಚಾರಣೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕಳೆದ ಸೋಮವಾರ ಸಲ್ಲಿಸಲಾದ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ಪೀಠ ವಿಚಾರಣೆಗೆ ಸ್ವೀಕರಿಸಿತ್ತು. ಈ ಪರೀಕ್ಷೆಗಳು ಆರಂಭವಾದ ಇಂದು ಅಂದರೆ ಮಾ.27 ರಂದು ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿತು. ಇದರಿಂದಾಗಿ ಇಂದಿನಿಂದ ಆರಂಭಗೊಂಡಿರುವ ಐದನೇ ತರಗತಿಯ ಮತ್ತು 8ನೇ ತರಗತಿಯ ಪರೀಕ್ಷೆಗಳಿಗೆ ಯಾವುದೇ ಅಡ್ಡಿ ಇಲ್ಲದಂತಾಗಿದೆ. ಮಧ್ಯಾಹ್ನ 2.30ಕ್ಕೆ ಈ ಪರೀಕ್ಷೆಗಳು ಆರಂಭವಾಗಿವೆ.

ರಾಜ್ಯದ ಅನುದಾನಹಿತ ಖಾಸಗಿ ಶಾಲೆಗಳ ಸಂಘದ ವತಿಯಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ರಾಜ್ಯಮಟ್ಟದ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದರಿಂದ ಮೌಲ್ಯಮಾಪನ ವಿಧಾನವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರವು ಪೋಷಕರು ಮತ್ತು ಶಾಲೆಗಳ ಜೊತೆಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸಂಘವು ವಾದಿಸಿತ್ತು.

ಏನಿದು ಪ್ರಕರಣ?

ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಮೌಲ್ಯಾಂಕನ(ಬೋರ್ಡ್‌) ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಏಕ ಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿತು. ಆಗ ಏಕಸದಸ್ಯ ಪೀಠವು ಪರೀಕ್ಷೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿತು.

ತಕ್ಷಣವೇ ರಾಜ್ಯದ ಶಿಕ್ಷಣ ಇಲಾಖೆ ವತಿಯಿಂದ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತು. ಎರಡೂ ಕಡೆಯವರ ವಾದ ಮಾತ್ರವಲ್ಲ, ಪರೀಕ್ಷೆಗಳು ಹೇಗೆ ನಡೆಯುತ್ತವೆ ಎಂಬಿತ್ಯಾದಿ ಅಂಶಗಳನ್ನು ಕೇಳಿಸಿಕೊಂಡ ಹೈಕೋರ್ಟ್‌ ಪರೀಕ್ಷೆ ನಡೆಸಲು ಷರತ್ತುಬದ್ಧ ಅನುಮತಿಯನ್ನು ನೀಡಿತ್ತು.

ಒಂದು ಹಂತದಲ್ಲಿ ಮಾರ್ಚ್‌ 13ರಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಮಾರ್ಚ್‌ 14ರಂದು ತೀರ್ಪು ನೀಡಿ ಪರೀಕ್ಷೆಗೆ ಅನುಮತಿ ನೀಡಿತು. ಜತೆಗೆ ಮಾರ್ಚ್‌ 27ರಿಂದಲೇ ಪರೀಕ್ಷೆಯನ್ನು ಮರುನಿಗದಿ ಮಾಡಲು ಸೂಚಿಸಿತು. ಜತೆಗೆ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗಳನ್ನು ಕೇಳಬಾರದು, ಯಾರನ್ನೂ ಅನುತ್ತೀರ್ಣಗೊಳಿಸಬಾರದು ಮತ್ತು ಫಲಿತಾಂಶವನ್ನು ಶಾಲಾ ಮಟ್ಟದಲ್ಲಿ ಮಾತ್ರ ಪ್ರಕಟಿಸಬೇಕು ಎಂಬ ಷರತ್ತುಗಳನ್ನು ವಿಧಿಸಿತು. ಇದಕ್ಕೆ ರಾಜ್ಯ ಸರ್ಕಾರವೂ ಒಪ್ಪಿ ಮಾರ್ಚ್‌ 27ರಿಂದ ಆರಂಭವಾಗುವಂತೆ ಹೊಸ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ನಡುವೆ ಖಾಸಗಿ ಶಾಲೆಗಳ ಒಕ್ಕೂಟವು ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಪರೀಕ್ಷೆ ಈಗಾಗಲೇ ಆರಂಭಗೊಂಡಿರುವುದರಿಂದ ಪ್ರಕರಣವನ್ನು ವಜಾಗೊಳಿಸಲಾಗಿದೆ.

ಇದನ್ನೂ ಓದಿ : Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್, ಮಾರ್ಚ್‌ 27ರಿಂದ ಎಕ್ಸಾಂ ನಡೆಸಲು ಸೂಚನೆ

Exit mobile version