ನವ ದೆಹಲಿ: ಐಐಟಿ ಬಾಂಬೆ (Indian Institute of Technology (IIT) Bombay) ಪ್ರಪಂಚದ ಅತ್ಯುತ್ತಮ 150 ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವಿಶ್ವ ಯೂನಿರ್ವಸಿಟಿ ರ‍್ಯಾಂಕಿಂಗ್ – 2024 (QS World University Rankings 2024) ಪಟ್ಟಿ ಪ್ರಕಟವಾಗಿದ್ದು, ಐಐಟಿ ಬಾಂಬೆ 149 ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 172 ನೇ ಸ್ಥಾನದಲ್ಲಿತ್ತು. ಕಳೆದ ಎಂಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಉನ್ನತ ಶಿಕ್ಷಣ ಸಂಸ್ಥೆಯೊಂದು ಟಾಪ್ 150 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) (ಭಾರತೀಯ ವಿಜ್ಞಾನ ಸಂಸ್ಥೆ ವಿವಿ) ಈ ಪಟ್ಟಿಯಲ್ಲಿ ಈ ಬಾರಿ 225 ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 155 ನೇ ಸ್ಥಾನದಲ್ಲಿತ್ತು. ಏಕಾಏಕಿ ಐಐಎಸ್ಸಿಯ ರ‍್ಯಾಂಕಿಂಗ್‌ನಲ್ಲಿ 70 ಸ್ಥಾನ ಕುಸಿತವಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. 2016 ರಲ್ಲಿ ಐಐಎಸ್ಸಿಯು 147 ಸ್ಥಾನ ಪಡೆದುಕೊಂಡು, ವಿಶ್ವದ ಗಮನ ಸೆಳೆದಿತ್ತು. ಈ ಬಾರಿ ಐಐಟಿ ದೆಹಲಿ 197ನೇ ರ‍್ಯಾಂಕ್ ಪಡೆದಿದ್ದರೆ, ಐಐಟಿ ಖರಗ್‌ಪುರ್ 271ನೇ, ಐಐಟಿ ಕಾನ್‌ಪುರ್ 278ನೇ, ಐಐಟಿ ಮದ್ರಾಸ್ 285ನೇ ಸ್ಥಾನಪಡೆದುಕೊಂಡಿವೆ.
ಈ ಬಾರಿ ವಿಶ್ವದ ಅತ್ಯುತ್ತಮ 200 ವಿವಿಗಳ ಪಟ್ಟಿಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಸ್ಥಾನ ಪಡೆದ ಭಾರತದ ವಿವಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಭಾರತದ 13 ವಿವಿಗಳು ಈ ಬಾರಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುಸಿತಕಂಡಿವೆ. ಸಮಾಧಾನಕರ ವಿಷಯವೆಂದರೆ ಕಳೆದ ವರ್ಷ ಭಾರತದ 41 ವಿವಿಗಳು ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಈ ಬಾರಿ ಈ ಸಂಖ್ಯೆ 45ಕ್ಕೆ ಏರಿದೆ. ಇದರಿಂದಾಗಿ ವಿಶ್ವ ಯೂನಿರ್ವಸಿಟಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅತಿ ಹೆಚ್ಚು ವಿವಿಗಳನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ಏಳನೇ ಸ್ಥಾನ ಪಡೆದುಕೊಂಡಿದೆ. ಏಷ್ಯಾದಲ್ಲಿನ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಮೂರನೇ ಸ್ಥಾನದಲ್ಲಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ.
ಅಮೆರಿಕ ವಿವಿಗಳದ್ದೇ ಪ್ರಾಬಲ್ಯ
ಅಮೆರಿಕದ ಮೆಸಾಚುಸೆಟ್ಸ್ ತಾಂತ್ರಿಕ ವಿದ್ಯಾಲಯ ((MIT) ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸತತ 12ನೇ ಬಾರಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಬ್ರಿಟನ್‌ನ ಕೇಂಬ್ರಿಡ್ಜ್ ವಿವಿ ಎರಡನೇ ಮತ್ತು ಆಕ್ಸ್‌ಫರ್ಡ್ ವಿವಿ ಮೂರನೇ ಸ್ಥಾನ ಪಡೆದುಕೊಂಡಿವೆ. ಟಾಪ್ 20 ವಿವಿಗಳಪಟ್ಟಿಯಲ್ಲಿ ಅಮೆರಿಕದ ಹತ್ತು ವಿವಿಗಳಿವೆ. ಆಸ್ಟ್ರೇಲಿಯಾದ ಮೂರು ವಿವಿಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಸಿಂಗಾಪುರದ ನ್ಯಾಷನಲ್ ಯೂನಿರ್ವಸಿಟಿ (NUS) ಈ ಬಾರಿ 8ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಇದು 11 ನೇ ಸ್ಥಾನದಲ್ಲಿತ್ತು. ಇದರಿಂದಾಗಿ ಟಾಪ್-10 ಯೂನಿರ್ವಸಿಟಿಗಳ ಪಟ್ಟಿಯಲ್ಲಿ ಏಷ್ಯಾದ ಯೂನಿರ್ವಸಿಟಿಯೊಂದು ಸ್ಥಾನ ಪಡೆದಂತಾಗಿದೆ. ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಜಪಾನ್‌ನ 52, ಚೀನಾದ 71 ವಿವಿಗಳು ಸ್ಥಾನಪಡೆದುಕೊಂಡಿವೆ.
ಇದನ್ನೂ ಓದಿ : Asia University Rankings 2023 : ಏಷ್ಯಾದ ಅತ್ಯುತ್ತಮ ವಿವಿ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ, ಮೈಸೂರಿನ ಜೆಎಸ್‌ಎಸ್
ವಿಶ್ವದ ಅತ್ಯುತ್ತಮ ಹತ್ತು ವಿವಿಗಳಿವು
ಕ್ರಮ ಸಂಖ್ಯೆ | ವಿವಿ ಹೆಸರು | ದೇಶ |
1 | Massachusetts Institute of Technology (MIT) | United States |
2 | University of Cambridge | United Kingdom |
3 | University of Oxford | United Kingdom |
4 | Harvard University | United States |
5 | Stanford University | United States |
6 | Imperial College London | United Kingdom |
7 | ETH Zurich | Switzerland |
8 | National University of Singapore (NUS) | Singapore |
9 | UCL | United Kingdom |
10 | University of California, Berkeley (UCB) | United States |