ಬೆಂಗಳೂರು: ರಾಜ್ಯಾದ್ಯಂತ ಸಿಇಟಿ-2024 ಪರೀಕ್ಷೆ (CET 2024 exam) ಆರಂಭವಾಗಿದೆ. ಈ ವರ್ಷ ದಾಖಲೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶುಕ್ರವಾರ (ಏಪ್ರಿಲ್ 19) ಸಿಇಟಿ ಎರಡನೇ ದಿನದ ಪರೀಕ್ಷೆ ನಡೆಯಲಿದ್ದು, ಕೆಇಎ ಬೋರ್ಡ್ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ. ಆದರೂ ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗುರುವಾರ (ಏಪ್ರಿಲ್ 18) ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆದಿದೆ. ಗಣಿತ ಪ್ರಶ್ನೆ ಪತ್ರಿಕೆಯಲ್ಲಿ 18 ಪ್ರಶ್ನೆಗಳನ್ನು ಔಟ್ ಆಫ್ ಸಿಲಬಸ್ ಕೇಳಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಡಿಲಿಟ್ ಮಾಡಲಾದ ಸಿಲಬಸ್‌ನಲ್ಲಿದ್ದ ಅಂಶಗಳನ್ನು ಕೇಳಲಾಗಿದೆ. ಗಣಿತ ಪತ್ರಿಕೆಯ 60 ಪ್ರಶ್ನೆಗಳಲ್ಲಿ 18 ಔಟ್ ಆಫ್ ಸಿಲಬಸ್ ಇದ್ದು, ಇನ್ನು 12 ಅತಿ ಕಠಿಣ ಪ್ರಶ್ನೆಗಳಾಗಿವೆ. ಇನ್ನು ಜೀವಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲೂ 12 ಪ್ರಶ್ನೆಗಳು ಔಟ್ ಆಫ್ ಸಿಲಬಸ್ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ಪರೀಕ್ಷೆ ಮತ್ತೆ ನಡೆಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಒತ್ತಾಯ ಮಾಡಲಾಗಿದೆ.
ಇನ್ನು ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆಯನ್ನು ಬರೆದಿದ್ದಾರೆ. ಈ ಹಿಂದೆ ಯಾವತ್ತೂ ಇಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿರಲಿಲ್ಲ. ರಾಜ್ಯದಲ್ಲಿ 737 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ 167 ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆಯನ್ನು ನಡೆಸಲಾಗಿದೆ. ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50 ರವರೆಗೆ ಗಣಿತ ಪರೀಕ್ಷೆಯನ್ನು ನಡೆಸಲಾಗಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಭೇಟಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಮಲ್ಲೇಶ್ವರಂ ಪಿಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶುಕ್ರವಾರ ನಡೆಯುವ ಪರೀಕ್ಷೆಗೂ ಬಿಗಿ ಭದ್ರತೆ ಇರಲಿದೆ ಎಂದು ಹೇಳಿದ್ದಾರೆ.
ಸಿಇಟಿಗೆ ಹೆಚ್ಚು ಅಂಕಗಳ ಪಟ್ಟಿ ಪರಿಗಣನೆ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುಡ್‌ನ್ಯೂಸ್ ನೀಡಿದೆ. ದ್ವಿತೀಯ ಪಿಯುಸಿಯ ಮೂರು ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಯಾವುದರಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೋ ಅದನ್ನೇ ಸಿಇಟಿ (CET 2024)ಗೆ ಪರಿಗಣಿಸಲು ಕೆಇಎ ಸಮ್ಮತಿ ಸೂಚಿಸಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ನಿರಾಳವಾಗಿದ್ದಾರೆ. ಎಂಜಿನಿಯರ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕೆಇಎ ಪ್ರತಿವರ್ಷ ಸಿಇಟಿ ನಡೆಸುತ್ತದೆ.
ಸಿಇಟಿ ಜತೆಗೆ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕವನ್ನೂ ರ್ಯಾಂಕಿಂಗ್ಗೆ ಪರಿಗಣಿಸಲಾಗುತ್ತದೆ. ಇದುವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾದರೆ ಪೂರಕ ಪರೀಕ್ಷೆ ಬರೆದು ತೇರ್ಗಡೆಯಾಗಬೇಕಿತ್ತು. ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕ್ರೂಡೀಕರಿಸಿ ಅಂಕಪಟ್ಟಿ ನೀಡಲಾಗುತ್ತಿತ್ತು.
ನಿಯಮದಲ್ಲಿ ಬದಲಾವಣೆ
ಈ ಬಾರಿ ಈ ನಿಯಮದಲ್ಲಿ ಕೊಂಚ ಬದಲಾವಣೆ ತರಲಾಗಿದೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದೆ. ಒಂದು ವೇಳೆ ಕಡಿಮೆ ಅಂಕ ಬಂದಿದ್ದರೆ ಅದನ್ನು ಉತ್ತಮಪಡಿಸಿಕೊಳ್ಳಲು ವಿದ್ಯಾರ್ಥಿಗಳು ಇನ್ನು ಉಳಿದ ಎರಡು ಪರೀಕ್ಷೆಗಳನ್ನೂ ಬರೆಯಬಹುದು. ಹೆಚ್ಚು ಅಂಕ ಬಂದಿರುವುದನ್ನೇ ಪರಿಗಣಿಸಿ ಅಂತಿಮ ಅಂಕಪಟ್ಟಿ ನೀಡಲಾಗುತ್ತದೆ.
ಇದೀಗ ಆ ಹೆಚ್ಚುವರಿ ಅಂಕವನ್ನೇ ಸಿಇಟಿ ರ‍್ಯಾಂಕಿಂಗ್‌ಗೂ ಪರಿಣಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾತನಾಡಿ, ʼʼಹೆಚ್ಚು ಅಂಕ ಬಂದಿರುವ ಅಂತಿಮ ಅಂಕ ಪಟ್ಟಿಯನ್ನು ಸಿಇಟಿ ಅಂಕಗಳ ಜತೆ ರ‍್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಲು ಪರೀಕ್ಷಾ ಪ್ರಾಧಿಕಾರ ಪರಿಗಣಿಸಲಿದೆʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Murder Case: ಬೆಂಗಳೂರಲ್ಲಿ ಜೋಡಿ ಕೊಲೆ: ಅನೈತಿಕ ಸಂಬಂಧ ಸಾಕು ಎಂದವಳ ಕೊಂದ; ತಲೆ ಒಡೆದು ಸಾಯಿಸಿದ ಹುಡುಗಿ ಅಮ್ಮ!
ಪಿಯುಸಿ ಪರೀಕ್ಷೆ 2
ದ್ವಿತೀಯ ಪಿಯುಸಿ ಪರೀಕ್ಷೆ 2 ಬರೆಯಲು ಇಚ್ಛಿಸುವವರು ಏಪ್ರಿಲ್ 10ರಿಂದ 16 ರವರೆಗೆ ಅರ್ಜಿ ಸಲ್ಲಿಸಬಹುದು. ಕಾಲೇಜಿನಲ್ಲಿ ಪ್ರಾಂಶುಪಾಲರ ಸಹಾಯದೊಂದಿಗೆ ಅಥವಾ ವೆಬ್‌ಸೈಟ್‌ನಲ್ಲಿ ನೇರವಾಗಿ ಪರೀಕ್ಷೆ 2ಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದು ದಂಡ ರಹಿತ ಅವಕಾಶವಾಗಿದೆ. ಇನ್ನು ಇದರ ನಂತರ ದಂಡ ಸಹಿತವಾಗಿ ಏಪ್ರಿಲ್ 17 ಮತ್ತು 18ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ದ್ವಿತೀಯ ಪಿಯು ಪರೀಕ್ಷೆ 2 ಬರೆಯಲು ಇಚ್ಛಿಸುವವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರೆ ಅದರ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ. ಕೂಡಲೇ ಅರ್ಜಿ ಸಲ್ಲಿಸಲು ಅವಕಾಶ ಇದೆ. ಪರೀಕ್ಷೆ 2 ಅನ್ನು ಬರೆಯುವವರಿಗೆ ಒಂದು ವಿಷಯಕ್ಕೆ 140 ರೂಪಾಯಿ ಶುಲ್ಕವನ್ನು ನಿಗದಿ ಮಾಡಿದ್ದರೆ, ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಕ್ಕೆ 400 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ.
ನಾಳೆ ಯಾವ ಪರೀಕ್ಷೆ?
ಸಿಇಟಿ 2024ರ ಪರೀಕ್ಷೆಗಳು ಏಪ್ರಿಲ್ 18ರಿಂದ ಆರಂಭವಾಗಿದ್ದು, ಏಪ್ರಿಲ್ 19ರವರೆಗೆ ನಡೆಯಲಿದೆ. ಏಪ್ರಿಲ್ 19ರ ಬೆಳಿಗ್ಗೆ 10.30ರಿಂದ ಭೌತಶಾಸ್ತ್ರ , ಮಧ್ಯಾಹ್ನ ರಸಾಯನ ಶಾಸ್ತ್ರ, ಏಪ್ರಿಲ್ 20 – ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಭಾಷಾ ಪರೀಕ್ಷೆಯನ್ನು ಆಯೋಜಿಸಲಾಗಿದೆ.