ಬೆಂಗಳೂರು: ಮಕ್ಕಳ ದಿನಾಚರಣೆಯಂದು ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಶಾಲಾ ಪ್ರವಾಸವನ್ನು (School Tour) ಈ ವರ್ಷ ಆಯೋಜಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಅನುಮತಿ ನೀಡಿ, ಸೋಮವಾರ ಸುತ್ತೋಲೆ ಹೊರಡಿಸಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಈ ವರ್ಷ ಈ ಹಿಂದಿನಂತೆ ಪ್ರವಾಸ ಹೋಗಬಹುದು. ಡಿಸೆಂಬರ್ ತಿಂಗಳ ಅಂತ್ಯದೊಳಗೆ ಪ್ರವಾಸವನ್ನು ಏರ್ಪಡಿಸಬೇಕು. ಯಾವುದೇ ಕಾರಣಕ್ಕೂ ಡಿಸೆಂಬರ್ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳದೇ ಶೈಕ್ಷಣಿಕ ಚಟುವಟಿಕೆಗಳತ್ತ ಗಮನ ನೀಡಬೇಕು ಎಂದು ಇಲಾಖೆಯು ಸೂಚನೆ ನೀಡಿದೆ.
ಕೊರೊನಾದ ಭಯ ಈಗ ಇಲ್ಲದೇ ಇದ್ದರೂ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಇಲಾಖೆಯು ಸೂಚಿಸಿದೆ. ಮಾನ್ಯತೆ ನವೀಕರಿಸಿಕೊಳ್ಳದ ಶಾಲೆಗಳು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಂತಿಲ್ಲ ಎಂದು ಇಲಾಖೆಯು ಹೇಳಿದೆ.
ಈ ವರ್ಷ ಶಾಲಾ ಪ್ರವಾಸ ಆಯೋಜಿಸಲು ಅನುಮತಿ ಮತ್ತು ಮಾರ್ಗದರ್ಶನ ನೀಡಬೇಕು ಎಂದು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಹಾಗೂ ವಿವಿಧ ಜಿಲ್ಲೆಯ ಉಪ ನಿರ್ದೇಶಕರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜಿನಿ ಶಿಕ್ಷಣ ಇಲಾಖೆಯ ಆಯುಕ್ತ ಡಾ.ವಿಶಾಲ್ ಆರ್. ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.
ಇಲಾಖೆ ನೀಡಿರುವ ಸೂಚನೆಗಳೇನು?
೧. ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಬೇಕು.
೨. ಇದು ಶೈಕ್ಷಣಿಕ ಪ್ರವಾಸವಾಗಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವ ಸ್ಥಳಗಳನ್ನು ಮಾತ್ರ ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳಬೇಕು.
೩. ಪ್ರವಾಸ ಕೈಗೊಳ್ಳುವ ಖಾಸಗಿ ಶಾಲೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶಾಲಾ ಮಾನ್ಯತೆಯನ್ನು ನವೀಕರಿಸಿರಬೇಕು.
೪. ಶೈಕ್ಷಣಿಕ ಪ್ರವಾಸವನ್ನು ಶಾಲಾ ದಿನಗಳಂದು ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಅಂದರೆ ಶನಿವಾರ ಪೂರ್ಣದಿನ/ ಭಾನುವಾರ ಶಾಲೆ ನಡೆಸಿ ಕೊರತೆ ಬೀಳುವ ಪಠ್ಯ ಚಟುವಟಿಕೆಗಳನ್ನು ಸರಿದೂಗಿಸಬೇಕು.
೫. ಪ್ರವಾಸದ ಸಮಯದಲ್ಲಿ ಸಂಭವಿಸುವ ಯಾವುದೇ ಅವಘಡಗಳಿಗೆ ಶಾಲೆಯ ಮುಖ್ಯಸ್ಥರು ನೇರ ಹೊಣೆಗಾರರಾಗಿರುತ್ತಾರೆ. ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ.
೬. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು.
೭. ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಖಾಸಗಿ ಹಾಗೂ ಮಿನಿ ಬಸ್‌ಗಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.
೮. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು.
೯. ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಪ್ರವಾಸಕ್ಕೆ ನಿಯೋಜಿತ ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳಬೇಕು.
ಪ್ರವಾಸ ಆಯೋಜಿಸುವಾಗ ಇಲಾಖೆಯು ವಿಧಿಸಿರುವ ಷರತ್ತುಗಳನ್ನು ಪಾಲಿಸಿ ಇಲಾಖಾ ಅನುಮತಿಯನ್ನು ತಪ್ಪದೇ ಪಡೆದಿರಬೇಕು ಹಾಗೂ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಗೆ ಕಡ್ಡಾಯವಾಗಿ ನೀಡಿ ಅನುಮೋದನೆ ಪಡೆಯಬೇಕು ಎಂದು ಸೂಚಿಸಲಾಗಿದೆ. ಇಲಾಖೆಯಿಂದ ಪ್ರವಾಸಕ್ಕೆ ಯಾವುದೇ ಸೌಲಭ್ಯವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ | Saffron politics| ವಿವೇಕ ಶಾಲೆ ಕೊಠಡಿಗಳಿಗೆ ಕೇಸರಿ ಬಣ್ಣ: ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥನೆ