ಬೆಂಗಳೂರು: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆಯು (SSLC Exam 2023) ಇಂದಿನಿಂದ (ಮಾರ್ಚ್ 31) ಆರಂಭಗೊಂಡಿದೆ, ಈ ನಡುವೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಂತೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಕೃಪಾಂಕ (ಗ್ರೇಸ್ ಮಾರ್ಕ್ಸ್) ದೊರೆಯಲಿದೆ. ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಶನಿವಾರ ಆದೇಶ ಹೊರಡಿಸುವ ಸಾಧ್ಯತೆಗಳಿವೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 5 ರಷ್ಟು ಕೃಪಾಂಕ ನೀಡಲಾಗುತ್ತದೆ ಎಂದು ಈ ಹಿಂದೆಯೇ ಪ್ರಕಟಿಸಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ತೇರ್ಗಡೆ ಹೊಂದಿದ ಕಾರಣ ಈ ವರ್ಷವೂ ಗರಿಷ್ಠ ಶೇಕಡ 10 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ಮಂಡಳಿಯು ತೀರ್ಮಾನಿಸಿತ್ತು. ಈ ಸಂಬಂಧ ಶಿಕ್ಷಣ ಇಲಾಖೆಯು ಈಗಾಗಲೇ ಅನುಮತಿ ನೀಡಿದ್ದು, ಆದೇಶ ಹೊರಬೀಳಬೇಕಾಗಿದೆ.
ಯಾವುದಾದರೂ ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತಿದೆ. ತೇರ್ಗಡೆಗೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಲು ಅಗತ್ಯವಾದ ಅಂಕಗಳನ್ನು ಪಡೆದು, ಮೂರು ವಿಷಯದಲ್ಲಿ 25 ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.
ಈ ಬಾರಿ ಪರೀಕ್ಷೆಗೆ 5,833 ಸರ್ಕಾರಿ ಶಾಲೆಗಳು, 3,605 ಅನುದಾನಿತ ಶಾಲೆಗಳು, 6060 ಅನುದಾನರಹಿತ ಶಾಲೆಗಳು ನೋಂದಾಯಿಸಿಕೊಂಡಿವೆ. ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಇದರಲ್ಲಿ ಹೊಸಬರು 7,94,611 ವಿದ್ಯಾರ್ಥಿ, ಪುನರಾವರ್ತಿತ ವಿದ್ಯಾರ್ಥಿಗಳು 20,750 ಹಾಗೂ 18,272 ಖಾಸಗಿ ಅಭ್ಯರ್ಥಿಗಳು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನವರು 301 ಮಂದಿ ಇದ್ದರೆ, 2010ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತ 15 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳ 3,60,862 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 2,20,831, ಅನುದಾನರಹಿತ ಶಾಲೆಗಳ 2,61,118 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 3,305 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಜೆರಾಕ್ಸ್ ಸೆಂಟರ್ ಮತ್ತು ಸೈಬರ್ ಸೆಂಟರ್‌ಗಳನ್ನು ತೆರೆಯದಂತೆ ನೋಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ : SSLC Examination : ತಮಿಳುನಾಡು ಮೂಲದ ವಿದ್ಯಾರ್ಥಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಿದ ಹೈಕೋರ್ಟ್