ಬೆಂಗಳೂರು: ಎಸ್‌ಎಸ್‌ಎಲ್‌ಸಿಯ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು (SSLC Exam 2023) ನಡೆಸಲು ಶಾಲೆಗಳು ಸಿದ್ಧತೆ ನಡೆಸಿರುವಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಪರೀಕ್ಷೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, ಮುಖ್ಯವಾಗಿ ರಾಜ್ಯ ಮಟ್ಟದಲ್ಲಿ ಈ ಬಾರಿ ಪ್ರಶ್ನೆ ಪತ್ರಿಕೆ ಸಿದ್ಧವಾಗಲಿದೆ. ಅಲ್ಲದೆ, ಪರೀಕ್ಷಾ ಶುಲ್ಕವನ್ನು 10 ರೂ. ಇಳಿಸಲಾಗಿದೆ.
ಈ ಪರೀಕ್ಷೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದಕ್ಕೆ ಬದಲಾಗಿ ಈ ಬಾರಿ ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ರಾಜ್ಯಮಟ್ಟದಲ್ಲಿಯೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವುದಾಗಿಯೂ ಇಲಾಖೆ ತಿಳಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (kseeb) ಪೂರ್ವ ಸಿದ್ಧತಾ ಪರೀಕ್ಷೆಗೂ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ಗೆ ಕಳುಹಿಸಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದನ್ನು ಮುದ್ರಿಸಿ, ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಶಾಲೆಗಳಿಗೆ ತಲುಪಿಸಲಿದ್ದಾರೆ.
ಈ ಹಿಂದೆಯೇ ಮಂಡಳಿಯೇ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸುವ ಪ್ರಸ್ತಾಪ ಇತ್ತಾದರೂ, ಪ್ರಶ್ನೆ ಪತ್ರಿಕೆಯನ್ನು ಶಾಲೆಗಳಿಗೆ ತಲುಪಿಸುವುದು ಕಷ್ಟ ಎಂಬ ಕಾರಣಕ್ಕೆ ಮಂಡಳಿಯು ಈ ನಿರ್ಧಾರದಿಂದ ಹಿಂದೆ ಸರಿದಿತ್ತು. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಒದಗಿಸುವ ಪ್ಲಾನ್ ಅನ್ನು ಈಗ ಮಂಡಳಿ ಮಾಡಿದೆ. ರಾಜ್ಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ ಈ ಮೊದಲು ಇದೇ ರೀತಿಯಾಗಿ ರಾಜ್ಯಮಟ್ಟದಲ್ಲಿ ಪೂರ್ವಸಿದ್ಧತಾ ಪರೀಕ್ಷೆ ನಡೆಸುವ ಪ್ರಯತ್ನ ನಡೆಸಿತ್ತು. ಆದರೆ ಅದಕ್ಕೆ ಇಲಾಖೆ ಅನುಮತಿ ನೀಡಿರಲಿಲ್ಲ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದಕ್ಕೆ ಆಗುತ್ತಿದ್ದ ಮಾನವ ಸಂಪನ್ಮೂಲದ ವಿನಿಯೋಗ ಇದರಿಂದ ತಪ್ಪಲಿದೆ. ಈ ಬಾರಿ ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಒಂದೇ ರೀತಿಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇರಲಿದ್ದು, ಮುಖ್ಯ ಪರೀಕ್ಷೆಯ ಸಿದ್ಧತೆಗೆ ಅನುಕೂಲವಾಗಲಿದೆ.
ಪೂರ್ವಸಿದ್ಧತಾ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಪೂರ್ವಸಿದ್ಧತಾ ಪರೀಕ್ಷೆಗೆ 60 ರೂ. ಶುಲ್ಕ ವಿಧಿಸುವಂತೆ ಶಿಕ್ಷಣ ಇಲಾಖೆಯು ಈ ಹಿಂದೆ ಸೂಚಿಸಿತ್ತು. ಈಗ ಇದನ್ನು 50 ರೂ.ಗಳಿಗೆ ಇಳಿಸಲಾಗಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಸೂಚನೆ ಮೇರೆಗೆ ಪೂರ್ವಸಿದ್ಧತಾ ಪರೀಕ್ಷೆಯ ಶುಲ್ಕವನ್ನು ಕಡಿಮೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಎಸ್‌ಎಸ್‌ಎಲ್‌ಸಿಯ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಫೆಬ್ರವರಿ 23 ರಿಂದ ಮಾರ್ಚ್ 1ರ ವರೆಗೆ ನಡೆಸಲಾಗುತ್ತದೆ. ಈಗಾಗಲೇ ಮಂಡಳಿಯು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ : Administrative Reforms : 20 ಅಂಕ ಪಡೆದರೂ SSLC ಪಾಸ್; 3,457 ಕಿರಿಯ ಪ್ರಾಥಮಿಕ ಶಾಲೆಗಳ ವಿಲೀನ: ಆಡಳಿತ ಸುಧಾರಣಾ ವರದಿ ಶಿಫಾರಸು