Site icon Vistara News

SSLC Exam 3: ಎಸ್‌ಎಸ್‌ಎಲ್‌ಸಿ ಪರೀಕ್ಷೆ-3ರ ಪ್ರವೇಶ ಪತ್ರ ಬಿಡುಗಡೆ

SSLC Exam 3

SSLC Exam 3

ಬೆಂಗಳೂರು: ಮುಂದಿನ ತಿಂಗಳು (ಆಗಸ್ಟ್‌ 2ರಿಂದ 9) ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3ಕ್ಕೆ (SSLC Exam 3) ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರ (Admit card)ಗಳನ್ನು ಬಿಡುಗಡೆ ಮಾಡಲಾಗಿದ್ದು, ಕೂಡಲೇ ಪಡೆದುಕೊಳ್ಳುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗದವರು, ಪ್ರಸಕ್ತ ಸಾಲಿನ ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸಿದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEEB) ಮೂರನೇ ಅವಕಾಶ ನೀಡಿದ್ದು, ಅದರಂತೆ ಆಗಸ್ಟ್‌ 2ರಿಂದ 9ರವರೆಗೆ ಪರೀಕ್ಷೆ ನಡೆಯಲಿದೆ. ಇದೀಗ ಅಭ್ಯರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಕಟಣೆಯಲ್ಲಿ ಏನಿದೆ?

ಶಾಲಾ ಮುಖ್ಯೋಪಾಧ್ಯಾಯರು ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬೇಕು. ಒಂದು ವೇಳೆ ಏನಾದರೂ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಪರಿಶೀಲನಾ ಶಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಮ್ಮ ಶಾಲೆಯ ಮುಖಾಂತರ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಡೌನ್‌ಲೋಡ್ ಮಾಡಿಕೊಂಡ ಪ್ರವೇಶ ಪತ್ರಗಳ ಸಂಖ್ಯೆ ಸರಿ ಹೊಂದುತ್ತಿವೆಯೇ ಎಂದು ತಪ್ಪದೇ ಪರಿಶೀಲಿಸಬೇಕು. ಒಂದು ವೇಳೆ ಯಾವುದಾದರು ವಿದ್ಯಾರ್ಥಿಯ ಪ್ರವೇಶ ಪತ್ರ ಬಂದಿಲ್ಲದಿದ್ದರೆ ಆ ವಿವರವನ್ನು ದಾಖಲೆಗಳೊಂದಿಗೆ ಮಂಡಳಿಗೆ ಕೂಡಲೇ ಕಳುಹಿಸಬೇಕು ಎಂದು ಸೂಚಿಸಲಾಗಿದೆ.

ಇವನ್ನು ಗಮನಿಸಿ

2022-23ನೇ ಸಾಲಿನಲ್ಲಿಯೂ ಅನುತ್ತೀರ್ಣರಾದ, 2023-24ನೇ ಸಾಲಿನ ಮೊದಲ ಹಾಗೂ ದ್ವಿತೀಯ ಪರೀಕ್ಷೆಗೆ ಗೈರಾದವರು, ತೇರ್ಗಡೆ ಹೊಂದಲು ಸಾಧ್ಯವಾಗದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇನ್ನು, ಕಳೆದ ಪರೀಕ್ಷೆಗಳಲ್ಲಿ ಪಡೆದ ಅಂಕಗಳಿಂದ ಸಮಾಧಾನಗೊಳ್ಳದವರು, ಇನ್ನೂ ಹೆಚ್ಚಿನ ಅಂಕ ಪಡೆಯಬೇಕು ಎನ್ನುವವರು ಕೂಡ ಮೂರನೇ ಪರೀಕ್ಷೆ ಬರೆಯಲಿದ್ದಾರೆ.

ಇದನ್ನೂ ಓದಿ: NEET UG 2024: ನೀಟ್‌ ಮರು ಪರೀಕ್ಷೆ ನಡೆಸುವುದಿಲ್ಲ; ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು

Exit mobile version