ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Exam Result 2024) ಫಲಿತಾಂಶ ಇಂದು ಪ್ರಕಟವಾಗಲಿದೆ. ಮೇ 9ರ ಬೆಳಗ್ಗೆ 10.30ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಮಾರ್ಚ್/ಏಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಅನ್ನು ದಿನಾಂಕ: 25.03.2024 ರಿಂದ 06.04.2024 ರವರೆಗೆ ನಡೆಸಲಾಯಿತು. ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ. ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ: 09.05.2024 ರಂದು ಬೆಳಗ್ಗೆ 10.30ಕ್ಕೆ ಮಲ್ಲೇಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ ಎಂದು ಹೇಳಿದೆ.
ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್‌ಸೈಟ್‌ನಲ್ಲಿ ಮೇ 9ರ ಬೆಳಗ್ಗೆ 10.30ರ ನಂತರ ವೀಕ್ಷಿಸಬಹುದಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಫಲಿತಾಂಶ ಬಿಡುಗಡೆ ತಡವಾಗಿದೆ.
ಮಾ.25ರಿಂದ ಏ.6ರ ವರೆಗೆ ನಡೆದಿದ್ದ ಪರೀಕ್ಷೆ
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.25ರಿಂದ ಏ.6ರ ವರೆಗೆ ನಡೆದಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು ಮತ್ತು 4.28 ಲಕ್ಷ ಬಾಲಕಿಯರು ಇದ್ದಾರೆ. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಇದ್ದಾರೆ.
ಫಲಿತಾಂಶ ಎಲ್ಲಿ ನೋಡಬಹುದು?
ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಕರ್ನಾಟಕ ಶಾಲೆ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ವೆಬ್‌ಸೈಟ್‌ನಲ್ಲಿ ನೋಡಬಹುದು. ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಇದಕ್ಕೆ ನೀವು kseab.karnataka.gov.in ಗೆ ಭೇಟಿ ನೀಡಬಹುದು. ಜತೆಗೆ karresults.nic.in ವೆಬ್‌ಸೈಟ್‌ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.
ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆಯುತ್ತಿದೆ. ಕರ್ನಾಟಕದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಮುಖ ಹಂತವಾಗಿರುವುದರಿಂದ ಕಾತರ ಹೆಚ್ಚಿದೆ.
ಇದನ್ನೂ ಓದಿ | Village Administrative Officer: ತಾಂತ್ರಿಕ ಸಮಸ್ಯೆ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ಮೇ 15ರವರೆಗೆ ವಿಸ್ತರಣೆ
ಇನ್ನು ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿಶಾಂಶವನ್ನು ಮೇ 08 ರಂದು ಬಿಡುಗಡೆ ಮಾಡಲಾಗಿತ್ತು. ಘೋಷಿಸಿತ್ತು. ಒಟ್ಟಾರ ಉತ್ತೀರ್ಣ ಪ್ರಮಾಣ ಶೇ 83.89 ದಾಖಲಾಗಿತ್ತು. ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರದಲ್ಲಿ 4,41,910 ಬಾಲಕರಾದರೆ, 4,28,058 ಬಾಲಕಿಯರು. ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಸರ್ಕಾರಿ ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.