Site icon Vistara News

SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು ಶುರು; ವಿದ್ಯಾರ್ಥಿಗಳಿಗೆ ಆಲ್‌ ದಿ ಬೆಸ್ಟ್‌

SSLC exam slated to begin from march 25 and girl Students write the exam

ಬೆಂಗಳೂರು: ಇಂದಿನಿಂದ (ಮಾರ್ಚ್ 25) ರಾಜ್ಯಾದ್ಯಂತ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1 (SSLC Exam) ಆರಂಭವಾಗಲಿದೆ. ಒಟ್ಟು 2750 ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಬರೆಯಲಿದ್ದಾರೆ. ಏಪ್ರಿಲ್ 6ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (Karnataka School Examination and Evaluation Board) ತಿಳಿಸಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಭದ್ರತೆಯನ್ನು (Police Security) ಒದಗಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಕೆಲವು ವಸ್ತುಗಳಿಗೆ ನಿಷೇಧವನ್ನು ಹೇರಲಾಗಿದೆ.

ಜಾಗೃತ ದಳದ ಅಧಿಕಾರಿಗಳ ನೇಮಕ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಅಧಿಕಾರಿ, ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಕಡ್ಡಾಯವಾಗಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧ ಮಾಡಲಾಗಿದೆ. ಅಲ್ಲದೆ, ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಪರೀಕ್ಷೆ ಬರೆಯುತ್ತಿರುವ ಬಾಲಕರೆಷ್ಟು? ಬಾಲಕಿಯರೆಷ್ಟು?

2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1ಕ್ಕೆ ರಾಜ್ಯಾದ್ಯಂತ 4,41,910 ಬಾಲಕರು ಹಾಗೂ 4,28,058 ಬಾಲಕಿಯರು ಸೇರಿ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ.

SSLC exam slated to begin from march 25 and Students write the exam

ಸಿಸಿ ಕ್ಯಾಮರಾ ಅಳವಡಿಕೆ

5,424 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು, ಉರ್ದು, ಮರಾಠಿ ಸೇರಿ ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅವ್ಯವಹಾರಗಳ ಬಗ್ಗೆ ನಿಗಾವಹಿಸಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿರ್ದೇಶಕರು ಮತ್ತು ಸಹನಿರ್ದೇಶಕರ ವೃಂದದ ಅಧಿಕಾರಿಗಳನ್ನು ಜಿಲ್ಲಾ ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಡಯಟ್ ಪ್ರಾಂಶುಪಾಲರನ್ನು ಆಯಾ ಜಿಲ್ಲೆಗೆ ಜಿಲ್ಲಾ ವೀಕ್ಷಕರಾಗಿ ನೇಮಿಸಲಾಗಿದೆ. ಡಯಟ್ ಉಪನ್ಯಾಸಕರನ್ನು ಪರೀಕ್ಷಾ ಕೇಂದ್ರಗಳಿಗೆ ವಿಚಕ್ಷಣ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಹೀಗಿದೆ

25-03-2024: ಪ್ರಥಮ ಭಾಷೆ ಪರೀಕ್ಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ + ಇಂಗ್ಲಿಷ್ NCERT, ಸಂಸ್ಕೃತ)
27-03-2024: ಸಮಾಜ ವಿಜ್ಞಾನ (ಕೋರ್‌ ಸಬ್ಜೆಕ್ಟ್‌)
30-03-2024: ವಿಜ್ಞಾನ, ರಾಜ್ಯಶಾಸ್ತ್ರ
02-04-2024: ಗಣಿತ, ಸಮಾಜ ಶಾಸ್ತ್ರ
03-04-2024: ಅರ್ಥಶಾಸ್ತ್ರ
04-04-2024: ತೃತೀಯ ಭಾಷೆ ಪರೀಕ್ಷೆ (ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು)
06-04-2024: ದ್ವಿತೀಯ ಭಾಷೆ ಪರೀಕ್ಷೆ (ಇಂಗ್ಲಿಷ್‌, ಕನ್ನಡ)

ವಿದ್ಯಾರ್ಥಿಗಳೇ ಧೈರ್ಯವಾಗಿ ಪರೀಕ್ಷೆ ಬರೆಯಿರಿ

ವಿದ್ಯಾರ್ಥಿಗಳೇ ಧೈರ್ಯವಾಗಿ ಪರೀಕ್ಷೆಯನ್ನು ಬರೆಯಿರಿ. ಯಾವುದೇ ಕಾರಣಕ್ಕೂ ಭಯ ಬೇಡ. ಇಲ್ಲಿ ಫೇಲ್‌ ಆಗಿಬಿಡಬಹುದು ಎಂಬ ಅಂಜಿಕೆ ಬೇಡ. ಅದಕ್ಕಾಗಿಯೇ ಶಿಕ್ಷಣ ಇಲಾಖೆ ಮೂರು ಹಂತದ ಪರೀಕ್ಷೆಯನ್ನು ಇಟ್ಟಿದೆ. ಈ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಮುಂದಿನ ತರಗತಿಗಳಿಗೆ ಪ್ರವೇಶಿಸುವ ಅವಕಾಶವನ್ನು ನೀಡಲಾಗುತ್ತಿದೆ. ಆದರೆ, ಅಂಥವರು ಉಳಿದ ಎರಡು ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಈ ಮೂಲಕ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ಈ ಕ್ರಮವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ | PSI Exam: ಲೋಕಸಭೆ ಚುನಾವಣೆ; ಮೇ 8ಕ್ಕೆ ನಿಗದಿಯಾಗಿದ್ದ ಪಿಎಸ್ಐ ಪರೀಕ್ಷೆ ಮುಂದೂಡಿಕೆ

ಇನ್ನು ಇದರಲ್ಲಿ ಕೆಲವು ಮಾನದಂಡಗಳನ್ನು ಅನುಸರಿಸಲಾಗಿದೆ. ಒಟ್ಟು ಅಂಕಗಳ ಪೈಕಿ ಕನಿಷ್ಠ ಅಂಕಗಳನ್ನು ತೇರ್ಗಡೆಗೆ ಪರಿಗಣಿಸಲಾಗುವುದು. ಫೇಲ್​​​ ಅಥವಾ ಕಡಿಮೆ ಅಂಕ ಬಂದವರು 3 ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಯಾವುದೇ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ.

Exit mobile version