ಬೆಂಗಳೂರು: ಮುಂದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (ಕೆಎಸ್‌ಇಎಬಿ) ಮಾದರಿ ಪ್ರಶ್ನೆ ಪತ್ರಿಕೆಯನ್ನು (SSLC Model Paper 2022-23 ) ಹೊಸ ವೆಬ್‌ಸೈಟ್‌ನಲ್ಲಿ ಒದಗಿಸಿದೆ.
ಒಂದು ವಾರಗಳ ಹಿಂದೆಯೇ ಮಂಡಳಿಯು ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿರುವುದಾಗಿ ತಿಳಿಸಿತ್ತು. ಅದರೆ ಕೆಲ ಶಾಲೆಗಳ ಮುಖ್ಯಸ್ಥರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವೆಬ್‌ಸೈಟ್‌ನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಗೊಂದಲ ಸೃಷ್ಟಿಯಾಗಿತ್ತು. ಮಂಡಳಿಯ ಹಳೇ ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಹುಡುಕಾಡಿದ್ದರು. ಆದರೆ ಮಂಡಳಿಯ ಹೊಸ ವೈಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲಾಗಿದೆ. ಈ ಬಗ್ಗೆ ಪ್ರಕಟಣೆಯಲ್ಲಿಯೇ ಸ್ಪಷ್ಟವಾಗಿ ತಿಳಿಸಿರುವುದಾಗಿ ಮಂಡಳಿ ಹೇಳಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಲಾಗಿದೆ.
ಮಾದರಿ ಪಶ್ನೆ ಪತ್ರಿಕೆಗಳು ಹೊಂದಿರುವ ಸ್ವರೂಪ ಮತ್ತು ಕಠಿಣತೆಯ ಮಟ್ಟವನ್ನು ಮುಂಬರುವ ಮಾರ್ಚ್/ ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಒಳಗೊಂಡಿರುತ್ತವೆ. ಆದ್ದರಿಂದ ಈ ಮಾದರಿ ಪ್ರಶ್ನೆ ಪತ್ರಿಕೆಗಳ ಉಪಯೋಗ ಪಡೆಯುವಂತೆ ಮಂಡಳಿ ಕೋರಿದೆ. ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಈ ಮಾದರಿ ಪ್ರಶ್ನೆ ಪತ್ರಿಕೆಗಳನ್ನಿಟ್ಟುಕೊಂಡು ಮಾರ್ಗದರ್ಶನ ನೀಡಬೇಕೆಂದು ಸೂಚಿಸಲಾಗಿದೆ.
ಇನ್ನುಳಿದ ಭಾಷಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಮುಂದಿನ ದಿನಗಳಲ್ಲಿ ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲು ಕ್ರಮ ವಹಿಸಲಾಗುತ್ತದೆ ಎಂದು ಮಂಡಳಿಯು ತಿಳಿಸಿದೆ.
ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ
ಮಂಡಳಿಯ ಹೊಸ ವೆಬ್‌ಸೈಟ್ ಶುರು
ಇನ್ನು ಮುಂದೆ ಮಂಡಳಿಯ ಹಳೆಯ ವೆಬ್‌ಸೈಟ್ https://sslc.karnataka.gov.in ಅಸ್ತಿತ್ವದಲ್ಲಿರುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಇ-ಆಡಳಿತ ಕೇಂದದ್ರದ ನೆರವಿನಿಂದ ಹೊಸ ವೆಬ್‌ಸೈಟ್ ಆರಂಭಿಸಿದೆ. ಈಗಾಗಲೇ ಸಾರ್ವಜನಿಕರ ಉಪಯೋಗಕ್ಕೆ ಈ https://kseab.karnataka.gov.in ವೆಬ್‌ಸೈಟ್ ಲಭ್ಯವಿದೆ.
ಈ ಹಿಂದಿನ ಜಾಲತಾಣದಲ್ಲಿದ್ದ ಎಸ್‌ಎಸ್‌ಎಲ್‌ಸಿ ಇತರೆ ಪರೀಕ್ಷೆಗಳ ಮತ್ತು ಪಿಯು ಪರೀಕ್ಷೆಗೆ ಸಂಬಂಧಿಸಿದ ಚಟುವಟಿಕೆಗಳ ಮಾಹಿತಿಗಳು, ಶಾಲಾ ಲಾಗಿನ್, ಬಿಇಒ ಲಾಗಿನ್, ಇಒ ಲಾಗಿನ್ ಹಾಗೂ ಇನ್ನಿತರ ಸೇವೆಗಳು ಈ ನೂತ ಜಾಲತಾಣದಲ್ಲಿಯೇ ಲಭ್ಯವಾಗಲಿದೆ ಎಂದು ಮಂಡಳಿಯು ತಿಳಿಸಿದೆ.
ಇದನ್ನೂ ಓದಿ | SSLC Exam 2023 | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಮಾ. 31 ರಿಂದಲೇ ಎಕ್ಸಾಮ್ ಶುರು