ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (kseeb) ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Result 2023) ಪ್ರಕಟಿಸಿದ್ದು, ಈ ಬಾರಿ ಶೇ. 83.89 ರಷ್ಟು ಫಲಿತಾಂಶ ಬಂದಿದೆ. ಇದು ಕೊರೊನಾ ಮುಂಚಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ. 12 ರಷ್ಟು ಹೆಚ್ಚಾಗಿದೆ. ನಾಲ್ವರು ನೂರಕ್ಕೆ ನೂರರಷ್ಟು (625 ಅಂಕಗಳಿಗೆ 625 ಅಂಕ) ಅಂಕ ಪಡೆದಿದ್ದಾರೆ.
ಬೆಂಗಳೂರಿನ ನ್ಯೂ ಮೆಕಾಲೆ ಸ್ಕೂಲ್‌ನ ವಿದ್ಯಾರ್ಥಿನಿ ಭೂಮಿಕಾ ಪೈ, ಚಿಕ್ಕಬಳ್ಳಾಪುರ ಶಾಲೆಯ ಯಶಸ್ ಗೌಡ, ಸವದತ್ತಿಯ ಅನುಪಮ ಶ್ರೀಶೈಲ ಹಿರಿಹೋಲಿ ಹಾಗೂ ಮುದ್ದೇಬಿಹಾಳದ ಆಕ್ಸ್ ಫರ್ಡ್ ಇಂಗ್ಲೀಷ್ ಸ್ಕೂಲ್‌ನ ಭೀಮನಗೌಡ ಹನುಮಂತಗೌಡ ಬಿರಾದಾರ್ ನೂರಕ್ಕೆ ನೂರರಷ್ಟು ಅಂಕಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಈ ಬಾರಿಯೂ ಶೇ.87.87 ಫಲಿತಾಂಶದ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿ ಶೇ. 90.29 ಬಾಲಕಿಯರು ತೇರ್ಗಡೆಯಾಗಿದ್ದರು. ಈ ಬಾರಿ 4,25,968 ಬಾಲಕರು ಪರೀಕ್ಷೆ ಬರೆದಿದ್ದರು. ಅವರಲ್ಲಿ 3,41,108 ಬಾಲಕರು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇ. 80.08 ಫಲಿತಾಂಶ ದಾಖಲಿಸಿದ್ದಾರೆ. ಅಂತೆಯೇ 4,09,134 ಬಾಲಕಿಯರು ಪರೀಕ್ಷೆ ಬರೆದಿದ್ದರು. ಇವರಲ್ಲಿ 3,59,511 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ 87.87 ಫಲಿತಾಂಶ ದಾಖಲಿಸಿದ್ದಾರೆ.
2018-19 ನೇ ಸಾಲಿನಲ್ಲಿ ಶೇ. 73.70 ರಷ್ಟು ಫಲಿತಾಂಶ ದಾಖಲಿಸಲಾಗಿತ್ತು. 2019-20ರಲ್ಲಿ ಶೇ.71.80, 2020-21ನೇ ಸಾಲಿನಲ್ಲಿ (ಕೊರೊನಾ ಕಾಲಘಟ್ಟ)ಶೇ.99.99 ಹಾಗೂ ಕಳೆ ಶೈಕ್ಷಣಿಕ ಸಾಲಿನಲ್ಲಿ ಅಂದರೆ 2021-22 ನೇ ಸಾಲಿನಲ್ಲಿ ಶೇ. 85.13 ರಷ್ಟು ಫಲಿತಾಂಶ ದಾಖಲಾಗಿತ್ತು. ಈ ಬಾರಿ ಶೇ. 83.89 ಫಲಿತಾಂಶ ಬಂದಿರುವುದು ಒಂದು ದಾಖಲೆಯಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಶೇ.86.74 ರಷ್ಟು ಫಲಿತಾಂಶ ದಾಖಲಾಗಿದೆ. ರಾಜ್ಯದಲ್ಲಿ 100 ಕ್ಕೆ ನೂರರಷ್ಟು ಫಲಿತಾಂಶ ಪಡೆದಿರುವ ಸರ್ಕಾರಿ ಶಾಲೆಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿ ನಗರದ ವಿದ್ಯಾರ್ಥಿಗಳು ಶೇ.79.62 ಫಲಿತಾಂಶ ದಾಖಲಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಇದು ಕಡಿಮೆಯಾಗಿದೆ. ಕಳೆದ ಬಾರಿ ಶೇ.82.04 ನಗರದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಶೇ.87.00 ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ. 87.38 ಗ್ರಾಮೀಣ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು.
ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಚಿತ್ರದುರ್ಗ ಫಸ್ಟ್ !
ಶೇ. 96.8 ಫಲಿತಾಂಶ ಪಡೆಯುವ ಮೂಲಕ ಚಿತ್ರದುರ್ಗ ಜಿಲ್ಲೆ ಈ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ. ಮಂಡ್ಯ ಶೇ.96.74, ಹಾಸನ ಶೇ.96.68, ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ.96.14 ಫಲಿತಾಂಶ ಪಡೆಯುವ ಮೂಲಕ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿವೆ. ಬೆಳಗಾವಿ ಶೇ.75.49 ಫಲಿತಾಂಶ ಪಡೆದು ಜಿಲ್ಲೆಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆಯಲ್ಲಿ (SSLC Exam 2023) ಈ ಬಾರಿ 15,498 ಶಾಲೆಗಳು ನೋಂದಾಯಿಸಿಕೊಂಡಿದ್ದು, 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆದಿತ್ತು.
ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?