Site icon Vistara News

Public Exam Big Breaking : 5,8,9ನೇ ಕ್ಲಾಸ್‌ ಪಬ್ಲಿಕ್‌ ಪರೀಕ್ಷೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ, ಎಕ್ಸಾಂ ಮುಂದಕ್ಕೆ

Supreme Court board Exam

ಬೆಂಗಳೂರು: ರಾಜ್ಯದಲ್ಲಿ‌ ಮಾರ್ಚ್‌ 11ರಂದು ಆರಂಭವಾಗಿರುವ 5,8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ (Public Exam Big Breaking) ಮತ್ತೆ ಕಂಟಕ ಎದುರಾಗಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education Department) ನಡೆಸುತ್ತಿರುವ ಈ ಪರೀಕ್ಷೆಯನ್ನು ತಕ್ಷಣವೇ ಮುಂದೂಡುವಂತೆ (Order to Postpone Exam) ಸುಪ್ರೀಂಕೋರ್ಟ್‌ (Supreme court Order) ಶಾಲೆಗಳಿಗೆ ಸೂಚಿಸಿದೆ. ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಕಾನೂನು ಹೋರಾಟದ ಫಲವಾಗಿ ಈಗ ವಿದ್ಯಾರ್ಥಿಗಳಿಗೆ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಏನಿದು ಪಬ್ಲಿಕ್‌ ಪರೀಕ್ಷೆ ಮತ್ತು ಕಾನೂನು ಹೋರಾಟ?

ಮೊದಲ ಹಂತ: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education department) ಮತ್ತು ಸರ್ಕಾರ ಜಂಟಿಯಾಗಿ 5,8,9 ಮತ್ತು 11ನೇ ತರಗತಿಗೆ ಈ ಬಾರಿ ಪಬ್ಲಿಕ್‌ ಪರೀಕ್ಷೆ ನಡೆಸಲು 2023ರ ಡಿಸೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿದ್ದವು.

ಎರಡನೇ ಹಂತ : ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು.

ಮೂರನೇ ಹಂತ: ಖಾಸಗಿ ಶಾಲೆಗಳ ಸಂಘಟನೆಯ ವಾದವನ್ನು ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿತ್ತು. ಅಂದರೆ ಪಬ್ಲಿಕ್‌ ಪರೀಕ್ಷೆ ನಡೆಸದಂತೆ ಸೂಚನೆ ನೀಡಿತ್ತು.

ನಾಲ್ಕನೇ ಹಂತ: ಪಬ್ಲಿಕ್‌ ಪರೀಕ್ಷೆಗೆ ತಡೆ ನೀಡಿದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಮಾರ್ಚ್‌ 9ರಂದು ಮೇಲ್ಮನವಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಏಕಸದಸ್ಯ ಪೀಠವು ವಿಧಿಸಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಅಂದರೆ ಮಾರ್ಚ್‌ 11ರಂದು ಆರಂಭವಾಗುವ 5,8,9ನೇ ತರಗತಿಯ ಪರೀಕ್ಷೆಗಳು ಯಥಾವತ್ತಾಗಿ ನಡೆಯಲಿದೆ ಎಂದು ತಿಳಿಸಲಾಗಿತ್ತು.

ಐದನೇ ಹಂತ: 11ನೇ ತರಗತಿ ಪರೀಕ್ಷೆಗಳು ಆಗಲೇ ನಡೆದು ಮುಕ್ತಾಯವಾಗಿವೆ. 5,8,9ನೇ ತರಗತಿ ಪರೀಕ್ಷೆಗಳು ಮಾರ್ಚ್‌ 11ರಂದು ಆರಂಭವಾಗಿ ಆಗಲೇ ಎರಡು ಪರೀಕ್ಷೆಗಳು ಮುಗಿದಿವೆ.

ಆರನೇ ಹಂತ: ಖಾಸಗಿ ಶಿಕ್ಷಣ ಸಂಸ್ಥೆಗಳು ಯಥಾವತ್ತಾಗಿ ಪರೀಕ್ಷೆ ನಡೆಸಲು ಅವಕಾಶ ನೀಡಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿವೆ. ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಿದ ಸುಪ್ರೀಂಕೋರ್ಟ್‌ ಮಂಗಳವಾರ (ಮಾರ್ಚ್‌ 12) ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿದೆ.

ಅಂದರೆ ಮುಂದೇನಾಗುತ್ತದೆ?

  1. ಸದ್ಯದ ಸೂಚನೆ ಪ್ರಕಾರ, ಈಗ ನಡೆಯುತ್ತಿರುವ ಪರೀಕ್ಷೆಯನ್ನು ಮುಂದೂಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ.
  2. ಮುಂದಿನ ಆದೇಶದ ವರೆಗೆ ಪರೀಕ್ಷೆಗಳನ್ನು ಮುಂದೂಡುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
  3. ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ ಮಧ್ಯಂತರ ಆದೇಶದ ಬಗ್ಗೆ ತ್ವರಿತ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಹೈಕೋರ್ಟ್‌ಗೆ ಸೂಚಿಸಿದೆ.
  4. ಹೈಕೋರ್ಟ್‌ ವಿಚಾರಣೆಯ ವೇಳೆ ಹೈಕೋರ್ಟ್‌ ಸ್ವಂತ ವಿವೇಚನೆಯನ್ನು ಬಳಸಲಿ ಮತ್ತು ಸುಪ್ರೀಂಕೋರ್ಟ್‌ನ ಅಭಿಪ್ರಾಯಗಳಿಂದ ಪ್ರಭಾವಿತವಾಗದಿರಲಿ ಎಂದು ಹೇಳಿದೆ.
  5. ಅಂದರೆ ಹೈಕೋರ್ಟ್‌ನ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿ ತನ್ನ ತೀರ್ಪನ್ನು ನೀಡಬಹುದಾಗಿದೆ. ಮತ್ತು ಇದು ಅಂತಿಮವಾಗಿರುವ ಸಾಧ್ಯತೆ ಇದೆ.

ಇದನ್ನೂ ಓದಿ : Public Exam : ತಡೆಯಾಜ್ಞೆ ತೆರವು; 5,8,9 ಮತ್ತು11ನೇ ತರಗತಿ ಪಬ್ಲಿಕ್‌ ಪರೀಕ್ಷೆ ಯಥಾವತ್‌

ಪಬ್ಲಿಕ್‌ ಪರೀಕ್ಷೆ ಮತ್ತು ಅದರ ಸುತ್ತಲಿನ ಖಟ್ಲೆಯ ವಿವರ ಇಲ್ಲಿದೆ: ನಡೆದುಬಂದ ದಾರಿ

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5. 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಘನ ಉಚ್ಚ ನ್ಯಾಯಾಲಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ದಿ:6-10-2023 ಮತ್ತು 9-10-2023ರ ಅಧಿಸೂಚನೆಗಳನ್ನು ಏಕ ಸದಸ್ಯ ಪೀಠದಲ್ಲಿ ರದ್ದು(Quash) ಮಾಡಲಾಗಿರುತ್ತದೆ.

ಸದರಿ ತೀರ್ಪಿನ ವಿರುದ್ಧ ಸರ್ಕಾರವು ದಿನಾಂಕ: 7-3-2024 ರಂದು ಘನ ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಘನ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಪ್ರಕರಣವನ್ನು ಆಲಿಸಿ ಸದರಿ 5. 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಂಕನ ಕಾರ್ಯವನ್ನು ಮುಂದುವರೆಸಲು ಮಧ್ಯಂತರ ತೀರ್ಪು ನೀಡಲಾಗಿರುತ್ತದೆ. ಅದರಂತೆ ದಿನಾಂಕ: 11-03-2024ರಿಂದ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಂಕನ ಕಾರ್ಯವನ್ನು ಪ್ರಾರಂಭಿಸಲಾಗಿರುತ್ತದೆ.

ತದನಂತರ ರಾಜ್ಯ ಘನ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ಮಧ್ಯಂತರ ತೀರ್ಪನ್ನು ಪ್ರಶ್ನಿಸಿ. ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಸಂಖ್ಯೆ: 6256/2024, ಎಸ್.ಎಲ್.ಪಿ ಸಂಖ್ಯೆ: 6257/2024 ಮತ್ತು ಡೈರಿ ಸಂಖ್ಯೆ: 11192/2024 ದಾವೆಗಳನ್ನು ಹೂಡಿದ್ದು, ಸದರಿ ದಾವೆಗಳನ್ನು ವಿಚಾರಣೆ ನಡೆಸಿದ್ದು, ಈ ದಿನದ ಆದೇಶದಲ್ಲಿ ಸದರಿ ಮಧ್ಯಂತರ ತೀರ್ಪನ್ನು ರದ್ದುಪಡಿಸಿರುತ್ತದೆ ಮತ್ತು ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ರವಾನಿಸಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ: 13-3-2024ರಿಂದ ನಡೆಯಬೇಕಾಗಿದ್ದ 5. 8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.

Exit mobile version