Site icon Vistara News

Teacher Transfer | ಶಿಕ್ಷಕರ ವರ್ಗಾವಣೆ ನಿಯಮ ರೆಡಿ; ಇನ್ನೆರಡು ದಿನದೊಳಗೆ ಪ್ರಕಟ

Teacher Transfer

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ (Teacher Transfer) ಇದ್ದ ಹಲವು ನಿರ್ಬಂಧಗಳನ್ನು ತೆಗೆದು ಹಾಕಿ “ಶಿಕ್ಷಕ ಸ್ನೇಹಿʼʼ ವರ್ಗಾವಣೆ ನೀತಿ ರೂಪಿಸಿರುವ ಸರ್ಕಾರದ ಪ್ರಕ್ರಿಯೆ ಈಗ ಅಂತಿಮ ಹಂತಕ್ಕೆ ಬಂದಿದ್ದು, ಶಿಕ್ಷಣ ಇಲಾಖೆಯು ವರ್ಗಾವಣೆ ಕರಡು ನಿಯಮಗಳನ್ನು ಇನ್ನೆರಡು ದಿನಗಳ ಒಳಗೆ ಪ್ರಕಟಿಸಲಿದೆ.

ಸಂಸದೀಯ ವ್ಯವಹಾರಗಳ ಸಚಿವಾಲಯ ರೂಪಿಸಿದ ಕರಡು ಮಾರ್ಗಸೂಚಿಗೆ ಈಗಾಗಲೇ ಶಿಕ್ಷಣ ಸಚಿವರು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಇನ್ನೆರಡು ದಿನಗಳ ಒಳಗೆ ಕರಡು ನಿಯಮಾವಳಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು “ವಿಸ್ತಾರ ನ್ಯೂಸ್‌ʼʼಗೆ ತಿಳಿಸಿವೆ.

ಈ ಕರಡು ನಿಯಮಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಲು ಶಿಕ್ಷಕರಿಗೆ 15 ದಿನ ಅವಕಾಶ ನೀಡಲಾಗುತ್ತದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ವರ್ಗಾವಣೆಗೆ ಸಂಬಂಧಿಸಿದ ಅಂತಿಮ ನೀತಿಗಳನ್ನು ಪ್ರಕಟಿಸುವುದರ ಜತೆಗೆ ವೇಳಾಪಟ್ಟಿಯನ್ನೂ ಪ್ರಕಟಿಸಲು ಶಿಕ್ಷಣ ಇಲಾಖೆಯು ಉದ್ದೇಶಿಸಿದೆ. ಬಹುತೇಕವಾಗಿ ಡಿಸೆಂಬರ್‌ನಲ್ಲಿ ವರ್ಗಾವಣೆ ಪ್ರಕ್ರಿಗೆ ಆರಂಭವಾಗಲಿದೆ.

ಹೀಗಾಗಿ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಬಹುಕಾಲದ ಗೊಂದಲಕ್ಕೆ ಸದ್ಯವೇ ತೆರೆ ಬೀಳಲಿದೆ. ವರ್ಗಾವಣೆಗೆ ಸಂಬಂಧಿಸಿದ ಹೊಸ ನಿಯಮಗಳ “ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಅಧಿನಿಯಮ-2022ʼʼಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿಯೇ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ನಂತರ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು.

ಈಗ ಹೊಸ ನಿಯಮಗಳನ್ನು ರೂಪಿಸಲಾಗಿದ್ದು, ಪರಸ್ಪರ ವರ್ಗಾವಣೆಗೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗುತ್ತಿದೆ. ಒಮ್ಮೆ ವರ್ಗಾವಣೆಯಾದ ಬಳಿಕ ಮತ್ತೆ ಮೂರು ವರ್ಷ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂಬ ನಿಯಮವೂ ಇದರಲ್ಲಿ ಸೇರಿದೆ.

ಸಾರ್ವತ್ರಿಕ ವರ್ಗಾವಣೆ ಒಟ್ಟು ವೃಂದ ಬಲದ ಶೇ.11ರಷ್ಟು ಮಿತಿ ಇರುತ್ತದೆ. ಯಾವುದೇ ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ.25 ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ತಾಲೂಕಿಗೆ ವರ್ಗಾವಣೆಗೆ ಅವಕಾಶವಿರುತ್ತದೆ.

ಇದನ್ನೂ ಓದಿ | ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ; ಶಿಕ್ಷಕರ ಸಂಘ ಹರ್ಷ

Exit mobile version