Site icon Vistara News

Job News: ಉದ್ಯೋಗಾಕಾಂಕ್ಷಿಗಳಿಗೆ Good News ; ಶೀಘ್ರವೇ 7,500 ಶಿಕ್ಷಕರ ನೇಮಕಾತಿ

Teachers appointment

ಬೆಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗುತ್ತಿರುವ 5000 ಶಿಕ್ಷಕರಿಗೆ ಪರ್ಯಾಯವಾಗಿ ಮತ್ತು ಒಟ್ಟಾರೆಯಾಗಿ 7,500 ಶಿಕ್ಷಕರ ನೇಮಕಾತಿಗೆ (Teachers Appointment) ಶಿಕ್ಷಣ ಇಲಾಖೆ (Education Department) ಮುಂದಾಗಿದೆ. 2023ನೇ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ 4985 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಕೋರಿರುವ ಪ್ರಸ್ತಾವನೆಯು ಆರ್ಥಿಕ ಇಲಾಖೆ (Finance Department) ಪರಿಶೀಲನೆಯಲ್ಲಿದೆ. ಇದರ ಜತೆಗೆ ಹಿಂದಿನ ವರ್ಷದಲ್ಲಿ ಭರ್ತಿಯಾಗದೆ ಉಳಿದ 2,500 ಹುದ್ದೆಗಳ ಭರ್ತಿಗೆ ಇಲಾಖೆ ಮುಂದಾಗಿದೆ. ಇದಕ್ಕೆ ಸರ್ಕಾರದಿಂದ ಈಗಾಗಲೇ ಮಂಜೂರಾತಿ ಸಿಕ್ಕಿದೆ.

2022-23ರ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ (Higher primary Schools) ಆರರಿಂದ ಎಂಟನೇ ತರಗತಿಗಾಗಿ ಖಾಲಿ ಇದ್ದ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಪ್ರಕ್ರಿಯೆ ನಡೆದಿತ್ತು. ಈ ಪೈಕಿ 13352 ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 12415 ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ 2,500 ಹುದ್ದೆಗಳನ್ನು ಈಗ ತುಂಬಲು ಇಲಾಖೆ ನಿರ್ಧರಿಸಿದೆ.

ಇದರ ಜತೆಗೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 2500 ಶಿಕ್ಷಕರ ಹುದ್ದೆಗಳನ್ನು 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ಸರ್ಕಾರ ಅನುಮತಿ ನೀಡಿತ್ತು. ಆದರೆ, 15 ಸಾವಿರ ಹುದ್ದೆಗಳಲ್ಲಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ 1648 ಹುದ್ದೆಗಳು ಮಾತ್ರ ಉಳಿದಿರುವ ಕಾರಣ, ಪ್ರಸಕ್ತ ಸಾಲಿನಲ್ಲಿ ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಿ ಅದನ್ನು ಹೈಸ್ಕೂಲ್‌ ವಿಭಾಗಕ್ಕೆ ನೀಡುವ ಸಾಧ್ಯತೆಗಳಿವೆ. ಅಂದರೆ 2500 ಹುದ್ದೆಗಳು ಹೈಸ್ಕೂಲ್‌ನಲ್ಲಿ ಇರುತ್ತವೆ.

ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಹುದ್ದೆ ಭರ್ತಿಗೆ ನಿಯಂತ್ರಣ ಹಾಕಲಾಗಿತ್ತು. ಬಳಿಕ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಆದ್ಯತೆ ಮೇಲೆ ನೇಮಕಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಶಿಕ್ಷಕರ ನೇಮಕ ಪ್ರಸ್ತಾವನೆಯನ್ನೂ ಪರಿಶೀಲಿಸಲಾಗುತ್ತಿದೆ. ಶಿಕ್ಷಕರ ಅನಿವಾರ್ಯತೆಯ ಅರಿವಿದೆ. ಮುಖ್ಯಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಿ ಅವಕಾಶ ಮಾಡಿಕೊಡಲಾಗುತ್ತದೆ.

ಯಾವ ಶಿಕ್ಷಕರಿಗೆ ಬೇಡಿಕೆ ಹೆಚ್ಚು?

ಈ ಬಾರಿಯ ನೇಮಕಾತಿಯಲ್ಲಿ ಇಂಗ್ಲಿಷ್‌ ಮತ್ತು ಹಾಗೂ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಆದರೆ, ನಿರೀಕ್ಷೆಯಷ್ಟು ಶಿಕ್ಷಕರ ಲಭ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ 2127 ಆಂಗ್ಲ, 6934 ವಿಜ್ಞಾನ ಶಿಕ್ಷಕರ ಕೊರತೆ ಇದೆ ಇದೆ ಎನ್ನಲಾಗುತ್ತಿದೆ.

ಸಾಕಷ್ಟು ಶಿಕ್ಷಕರು ಇಲ್ಲದೆ ಸಮಸ್ಯೆ

ರಾಜ್ಯದಲ್ಲಿ 41,913 ಪ್ರಾಥಮಿಕ ಶಾಲೆಗಳಿವೆ. 4844 ಪ್ರೌಢಶಾಲೆಗಳಿವೆ. ಪ್ರಾಥಮಿಕ ಶಾಲೆಗಳಲ್ಲಿ 188531 ಮಂಜೂರಾದ ಹುದ್ದೆಗಳಿವೆ. ಆದರೆ, ತುಂಬಿರುವುದು ಕೇವಲ 148501. 40,030 ಖಾಲಿ ಹುದ್ದೆಗಳಿವೆ. ಪ್ರೌಢ ಶಾಲೆಗಳಲ್ಲಿ 44341 ಹುದ್ದೆಗಳಿದ್ದು, ಈಗ ಕೆಲಸ ಮಾಡುತ್ತಿರುವುದು 34,186. 10155 ಖಾಲಿ ಹುದ್ದೆಗಳಿವೆ. ಎರಡೂ ವಿಭಾಗಗಳಲ್ಲಿ ಇರುವ ಒಟ್ಟು ಹುದ್ದೆಗಳು 232872. ಈಗ ಇರುವ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚು ಕಡಿಮೆ 50000. ಇವುಗಳ ಪೈಕಿ 7,500 ಹುದ್ದೆಗಳನ್ನು ಈಗ ಭರ್ತಿ ಮಾಡಲಾಗುತ್ತಿದೆ.

Exit mobile version