ಮತ್ತಿಕೆರೆ ಜಯರಾಮ್
ಮಂಡ್ಯ: ಸಕ್ಕರೆನಾಡು ಮಂಡ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಕೊಕ್ಕರೆ ಬೆಳ್ಳೂರು ಒಂದು. ದೇಶ, ವಿದೇಶದ ನೂರಾರು ಜಾತಿಯ ಪಕ್ಷಿ ಸಂಕುಲ ಇಲ್ಲಿನ ಶಿಂಷಾ ನದಿ ಪಾತ್ರದಲ್ಲಿರುವ ಪಕ್ಷಿಧಾಮಕ್ಕೆ ಪ್ರತಿ ವರ್ಷ ಬಂದು ಸಂತಾನೋತ್ಪತ್ತಿ ನಡೆಸುತ್ತವೆ. ಇಂತಹ ಪ್ರವಾಸಿ ತಾಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಸ್.ಟಿ.ಬಾಲಸುಬ್ರಮಣ್ಯ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗುವ ಮೂಲಕ ವೈಯಕ್ತಿಕವಾಗಿ ಮಾತ್ರವಲ್ಲದೆ, ಕರ್ತವ್ಯ ನಿರ್ವಹಿಸುತ್ತಿರುವ ಶಾಲೆ ಮತ್ತು ಗ್ರಾಮಕ್ಕೂ ಕೀರ್ತಿ ತಂದಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸಬ್ಬನಕುಪ್ಪೆ ಗ್ರಾಮದ ಪುಟ್ಟಮ್ಮ ಮತ್ತು ತಿಬ್ಬೇಗೌಡ ದಂಪತಿಯ ಪುತ್ರ ಬಾಲಸುಬ್ರಮಣ್ಯ 42 ವಯಸ್ಸಿಗೇ ಸಾಧನೆಯ ಅನೇಕ ಮೆಟ್ಟಿಲುಗಳನ್ನೇರಿದ ಅಪರೂಪದ ಶಿಕ್ಷಕ. ಪದವಿ ನಂತರ ದೈಹಿಕ ಶಿಕ್ಷಣ ತರಬೇತಿ ಕೋರ್ಸ್ ಮುಗಿಸಿದ ಅವರು ಪ್ರಾರಂಭದ 5 ವರ್ಷ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿರುವ ರೈತ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿ ಪ್ರಾರಂಭಿಸಿದರು.
ಅದಾದ ಬಳಿಕ ಸರ್ಕಾರಿ ನೇಮಕಾತಿಯಲ್ಲಿ ಆಯ್ಕೆಗೊಂಡು, 14 ವರ್ಷಗಳಿಂದ ನಿರಂತರವಾಗಿ ಕೊಕ್ಕರೆ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ದೈಹಿಕ ಶಿಕ್ಷಕರಾಗಿ ಗ್ರಾಮೀಣ ಮಕ್ಕಳಿಗೆ ಇವರು ನೀಡಿರುವ ತರಬೇತಿ, ಇವರ ಶಿಷ್ಯ ವೃಂದ ಪಡೆದಿರುವ ಬಹುಮಾನ ಮತ್ತು ಪ್ರಶಸ್ತಿ, ಕ್ರೀಡಾ ಶಿಷ್ಯವೇತನ ಇವೆಲ್ಲವನ್ನೂ ಗಮನಿಸಿದರೆ, ಬಾಲಸುಬ್ರಮಣ್ಯ ಅವರ ವೃತ್ತಿ ಕೌಶಲ್ಯ, ಪರಿಶ್ರಮ ಹೇಗಿದೆ ಎನ್ನುವುದು ಸಾಬೀತಾಗುತ್ತದೆ.
ಬಾಲಸುಬ್ರಮಣ್ಯ ಅವರು ಸ್ವತಃ ತರಬೇತುದಾರ, ಮೆನೇಜರ್ ಆಗಿ ರಾಜ್ಯ ತಂಡದ ಜವಬ್ದಾರಿ ನಿರ್ವಹಿಸಿದ ಅನೇಕ ನಿದರ್ಶನಗಳಿವೆ. ಇವರಿಂದ ತರಬೇತಿಯಲ್ಲಿ ಪಳಗಿದ ಶಿಷ್ಯರು ವಿವಿಧ ಕ್ರೀಡೆಗಳಲ್ಲಿ ರಾಜ್ಯ, ದೇಶವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿ. ಕೊಕ್ಕರೆ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನೂರಕ್ಕೆ ನೂರರಷ್ಟು ಗ್ರಾಮೀಣ ಮಕ್ಕಳೇ ಇದ್ದಾರೆ. ಇಂತಹ ಮಕ್ಕಳನ್ನು ಅಣಿಗೊಳಿಸಿ, ಎತ್ತರಕ್ಕೆ ಬೆಳೆಸಿದ ಕೀರ್ತಿ ನಿಜಕ್ಕೂ ಗುರುವಾದ ಬಾಲಸುಬ್ರಮಣ್ಯ ಅವರಿಗೆ ಸಲ್ಲುತ್ತದೆ.
ಬಾಲ್ಯದಿಂದಲೂ ಕ್ರೀಡೆಯಲ್ಲಿ ಸಾಕಷ್ಟು ಆಸ್ತಿ ತೋರುತ್ತಿದ್ದ ಬಾಲಸುಬ್ರಮಣ್ಯ ಸ್ವತಃ ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾಪಟುವಾಗಿದ್ದರು. ಅವರು ಮುಂದೆ ದೈಹಿಕ ಶಿಕ್ಷಕ ಆಗಲೇಬೇಕು ಎನ್ನುವ ಹಠದೊಂದಿಗೆ ಪದವಿ ಮುಗಿಸಿ, ಬಿಪಿಇಡಿ ಕೋರ್ಸ್ ಮಾಡಿದರು. ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಬಹುಮಾನಗಳನ್ನು ಪಡೆದವರು. ತಮ್ಮಂತೆಯೇ ಶಿಷ್ಯರೂ ಅತ್ಯುತ್ತಮ ಕ್ರೀಡಾಪಟುಗಳಾಬೇಕು ಎನ್ನುವ ಹಂಬಲ ಹೊತ್ತುಕೊಂಡು ತರಬೇತಿ ನೀಡುವುದರಲ್ಲಿ ನಿರತರಾಗಿದ್ದಾರೆ. ಮಕ್ಕಳ ಸಾಧನೆಯಲ್ಲಿ ಆತ್ಮತೃಪ್ತಿ ಕಾಣುತ್ತಿದ್ದಾರೆ.
ಶಿಕ್ಷಕರು ಅದರಲ್ಲೂ ದೈಹಿಕ ಶಿಕ್ಷಕರೆಂದರೆ ಕುತ್ತಿಗೆಯಲ್ಲಿ ವಿಷಲ್, ಕೈಯಲ್ಲಿ ಬೆತ್ತ ಇದ್ದೇ ಇರುತ್ತದೆ. ಆದರೆ, ಬಾಲಸುಬ್ರಮಣ್ಯ ಅವರೆಂದೂ ಬೆತ್ತ ಹಿಡಿದು, ಶಿಷ್ಯರಿಗೆ ಬಲವಂತದ ಪಾಠ ಮತ್ತು ತರಬೇತಿ ಹೇಳಿಕೊಟ್ಟವರಲ್ಲ. ವಿಷಲ್ ಮಾತ್ರವನ್ನೇ ಬಳಸಿಕೊಂಡು ಉತ್ತಮ ತರಬೇತಿ ನೀಡಿದ ವಿಭಿನ್ನ ಶಿಕ್ಷಕರು ಇವರು. ಯಾವತ್ತಿಗೂ ಯಾವೊಬ್ಬ ಶಿಷ್ಯನನ್ನು ಥಳಿಸಲಿಲ್ಲ. ನಿಂದಿಸಲೂ ಇಲ್ಲ. ಪ್ರೀತಿ ಮತ್ತು ವಿಶ್ವಾಸದಿಂದಲೇ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ, ಸಾಧನೆಗಳ ಮೆಟ್ಟಿಲೇರಲು ನೆರವಾಗಿದ್ದಾರೆ. ಇಂತಹ ಶಿಕ್ಷಕರನ್ನು ಗುರುತಿಸಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದಕ್ಕೆ ಕೊಕ್ಕರೆ ಬೆಳ್ಳೂರು ಮಾತ್ರವಲ್ಲದೆ ಮದ್ದೂರು ತಾಲೂಕು, ಮಂಡ್ಯ ಜಿಲ್ಲೆಯಲ್ಲೇ ಪ್ರಶಂಸೆಯ ಸುರಿಮಳೆಯಾಗಿದೆ.
ಎಣೆಯಿಲ್ಲದ ಸಾಧನೆ
ದೈಹಿಕ ಶಿಕ್ಷಕ ಬಾಲಸುಬ್ರಮಣ್ಯ ಅವರು ವೈಯಕ್ತಿಕವಾಗಿ ಮತ್ತು ಶಿಷ್ಯ ವೃಂದದ ಮೂಲಕ ಮಾಡಿದ ಸಾಧನೆ ಅಗಾಧ. ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಡೆದ ಪ್ರಶಸ್ತಿ ಮತ್ತು ಬಹುಮಾನಗಳು ನೂರಾರು. ೨೦೧೫-೧೬ನೇ ಸಾಲಿನಲ್ಲಿ ತುಮಕೂರಿನಲ್ಲಿ ನಡೆದ 61ನೇ ಎಸ್.ಜಿ.ಎಫ್.ಐ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕೊಕ್ಕರೆ ಬೆಳ್ಳೂರು ಪ್ರೌಢಶಾಲೆ ತಂಡ ಚಿನ್ನದ ಪದಕ ಪಡೆದಿತ್ತು. ಇದಕ್ಕೆ ಬಾಲಸುಬ್ರಮಣ್ಯರೇ ಕಾರಣ ಎಂದು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ.
2018-19ನೇ ಸಾಲಿನಲ್ಲಿ ರಾಜಸ್ಥಾನದಲ್ಲಿ ನಡೆದ 64ನೇ ಎಸ್.ಜಿ.ಎಫ್.ಐ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಇವರು ತರಬೇತುದಾರರಾಗಿದ್ದ ಶಾಲಾ ಬಾಲಕಿಯರ ತಂಡ ೬ನೇ ಸ್ಥಾನ ಪಡೆದಿತ್ತು. ಪೂನಾದಲ್ಲಿ ನಡೆದ 2018-19ನೇ ಸಾಲಿನ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಕೊಕ್ಕರೆ ಬೆಳ್ಳೂರು ತಂಡಕ್ಕೆ ೫ನೇ ಸ್ಥಾನ ಲಭಿಸಿತ್ತು.
ಗುಜರಾತ್‌ನಲ್ಲಿ 2018-19ನೇ ಸಾಲಿನಲ್ಲಿ ನಡೆದ 64ನೇ ಎಸ್.ಜಿ.ಎಫ್.ಐ ರಾಷ್ಟ್ರ ಮಟ್ಟದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಇವರು ರಾಜ್ಯ ತಂಡದ ವ್ಯವಸ್ಥಾಪಕರಾಗಿದ್ದರು. ಮೂರು ಬಾರಿ ತರಬೇತುದಾರರಾಗಿ ಕರ್ನಾಟಕ ರಾಜ್ಯ ಸೀನಿಯರ್ ವಿಭಾಗದ ಖೋ ಖೋ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ ಎರಡು ಬಾರಿ ಬೆಳ್ಳಿ, ಒಮ್ಮೆ ಕಂಚಿನ ಪದಕ ರಾಜ್ಯ ತಂಡಕ್ಕೆ ದಕ್ಕಿದೆ.
4 ಬಾರಿ ಕರ್ನಾಟಕ ರಾಜ್ಯ ಜೂನಿಯರ್ ವಿಭಾಗದ ಖೋ ಖೋ ತಂಡ ಮುನ್ನಡೆಸಿದ್ದು, ಒಮ್ಮೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಒಂದು ಬಾರಿ ಸಬ್ ಜೂನಿಯರ್ ಕರ್ನಾಟಕ ರಾಜ್ಯ ಖೋ ಖೋ ತಂಡದ ತರಬೇತುದಾರರಾಗಿ ಬೆಳ್ಳಿ ಪದಕ ತರುವಲ್ಲಿ ಶ್ರಮವಹಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಆ ಕರ್ತವ್ಯವನ್ನೂ ನಿರ್ವಹಣೆ ಮಾಡಿದ ಹಿರಿಮೆ ಬಾಲಸುಬ್ರಮಣ್ಯ ಅವರಿಗಿದೆ.
ರಾಜ್ಯ ಮಟ್ಟದ ಥೋ ಬಾಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 4 ಬಾರಿ ಮೈಸೂರು ವಿವಿ ಹ್ಯಾಂಡ್ ಬಾಲ್ ತಂಡವನ್ನು ಪ್ರತಿನಿಧಿಸಿದ್ದಾರೆ. ಒಂದು ಬಾರಿ ಮೈಸೂರು ವಿವಿಯ ಖೋ ಖೋ ತಂಡ ಪ್ರತಿನಿಧಿಸಿದ್ದಾರೆ. ಹೀಗೆ ಸ್ವತಃ ಕ್ರೀಡಾಪಟು, ತರಬೇತುದಾರ, ವ್ಯವಸ್ಥಾಪಕ ಆಗಿ ಖೋ ಖೋ ಮಾತ್ರವಲ್ಲದೆ ಥ್ರೋ ಬಾಲ್, ಕ್ರಿಕೆಟ್ ಪಂದ್ಯಾವಳಿಗಳಲ್ಲೂ ಇವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಮಕ್ಕಳ ಸಾಧನೆಗೆ ಮೆಟ್ಟಿಲಾದ ಶಿಕ್ಷಕ
ಕೊಕ್ಕರೆ ಬೆಳ್ಳೂರು ಸರ್ಕಾರಿ ಪ್ರೌಢಶಾಲೆ ಮಕ್ಕಳು ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ಮಾಡುವುದಕ್ಕೆ ಸ್ವತಃ ಬಾಲಸುಬ್ರಮಣ್ಯ ಅವರು ಮೆಟ್ಟಿಲಾಗಿದ್ದಾರೆ. ಮಕ್ಕಳಲ್ಲಿರುವ ಸಾಮರ್ಥ್ಯ ಕ್ರೀಡಾಭಿರುಚಿಯನ್ನು ಗುರ್ತಿಸಿ, ಅವರಿಗೆ ಸೂಕ್ತವೆನಿಸಿದ ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕೆ ಇವರು ಪ್ರೇರಣೆಯಾಗಿ ನಿಂತವರು. ಇವರ ತರಬೇತಿ ಪಡೆದವರು ಕ್ರೀಡಾಲೋಕದಲ್ಲಿ ಯಶಸ್ಸು ಕಂಡಿರುವ ನಿದರ್ಶನಗಳು ಒಂದು, ಎರಡಲ್ಲ. ಬರೋಬ್ಬರಿ 55 ನಿದರ್ಶನಗಳಿವೆ.
ಶಾಲೆಯ 31 ವಿದ್ಯಾರ್ಥಿಗಳು ಖೋ ಖೋ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಹಾಗೂ 10 ಮಂದಿ ವಿದ್ಯಾರ್ಥಿಗಳು ಥ್ರೋ ಬಾಲ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು ಗಳಿಸಿದ್ದಾರೆ. ಹಾಗೆಯೇ 2018-19ನೇ ಸಾಲಿನಲ್ಲಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಖೋ ಖೋ ಕ್ರೀಡೆಯಲ್ಲಿ ಏಷ್ಯನ್ ಸ್ಕೂಲ್ ಗೇಮ್ಸ್ ಅಂತರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿದ್ದರು.
ಇವರ ಗರಡಿಯಲ್ಲಿ ಪಳಗಿದ 41 ವಿದ್ಯಾರ್ಥಿಗಳು ಸರಿ ಸುಮಾರು 145 ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿರುವುದು ನಿಜಕ್ಕೂ ದಾಖಲೆಯೇ ಸರಿ. ಬಾಲಸುಬ್ರಮಣ್ಯ ಅವರು ವೈಯಕ್ತಿಕವಾಗಿ 13 ಬಾರೀ ಕರ್ನಾಟಕ ರಾಜ್ಯ ತಂಡವನ್ನು ಖೋ ಖೋ ಮತ್ತು ಕ್ರಿಕೆಟ್ ಕ್ರೀಡೆಯಲ್ಲಿ ತರಬೇತುದಾರರಾಗಿ, ವ್ಯವಸ್ಥಾಪಕರಾಗಿ ಅನೇಕ ಪದಕಗಳನ್ನು ಸಂಪಾದಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿರುತ್ತಾರೆ. ೩೦ಕ್ಕೂ ಹೆಚ್ಚು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಇವರ ಶಿಷ್ಯರು ಪದಕ ವಿಜೇತರು.
ರಾಷ್ಟ್ರ ಮಟ್ಟದ ಖೋ ಖೋ 5 ತರಬೇತಿ ಶಿಬಿರಗಳನ್ನು ಮತ್ತು 2 ಥ್ರೋ ಬಾಲ್ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದಾರೆ. ಖೋ ಖೋ, ಥ್ರೋ ಬಾಲ್ ಕ್ರೀಡೆಯ ರಾಜ್ಯ, ವಿಭಾಗೀಯ ೧೨ಕ್ಕೂ ಹೆಚ್ಚು ಪಂದ್ಯಾವಳಿಗಳ ಆಯೋಜನೆಯಲ್ಲಿ ಹೆಗಲು ನೀಡಿದ್ದಾರೆ. 2015-16ನೇ ಸಾಲಿನಲ್ಲಿ ಎಸ್.ಜಿ.ಎಫ್.ಐ 61ನೇ ಖೋ ಖೋ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ತಮ್ಮ ಶಾಲಾ ತಂಡ ಚಿನ್ನದ ಪದಕ ಗಳಿಸಿರುವುದು ಬಾಲಸುಬ್ರಮಣ್ಯ ಅವರ ಪಾಲಿನ ಅವಿಸ್ಮರಣೀಯ ಸಾಧನೆಯೇ ಸರಿ.
ನಾನು ಪ್ರಶಸ್ತಿಗಾಗಿ ಪರಿಶ್ರಮ ಹಾಕಲಿಲ್ಲ. ಸ್ವತಃ ಕ್ರೀಡಾಪಟುವಾಗಿ ಶಿಷ್ಯರ ಸಾಧನೆ ಕಣ್ತುಂಬಿಕೊಳ್ಳುವ ಉದ್ದೇಶದಿಂದ ಇಷ್ಟೆಲ್ಲಾ ಪರಿಶ್ರಮ ಹಾಕಿದ್ದೇನೆ. ಮಕ್ಕಳ ಸಾಧನೆಯಲ್ಲಿ ನಾನು ಸಂತೃಪ್ತಿ ಕಾಣುತ್ತಿದ್ದೇನೆ. ನನ್ನನ್ನು ಗುರ್ತಿಸಿದ ಸರ್ಕಾರ, ಬೆನ್ನುತಟ್ಟಿ ಪ್ರೋತ್ಸಾಹಿಸಿದ ಶಿಕ್ಷಣ ಇಲಾಖೆ, ಶಿಕ್ಷಕ ಸಂಘಟನೆಗಳು, ಸೇವೆ ಸಲ್ಲಿಸುತ್ತಿರುವ ಸ್ಥಳವಾದ ಕೊಕ್ಕರೆ ಬೆಳ್ಳೂರು ಗ್ರಾಮಸ್ಥರಿಗೆ ನಾನು ಆಭಾರಿಯಾಗಿದ್ದೇನೆ. ಅವರೆಲ್ಲರ ಸಹಕಾರ ಮರೆಯುವಂತಿಲ್ಲ.
– ಎಸ್.ಟಿ.ಬಾಲಸುಬ್ರಮಣ್ಯ | ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕೊಕ್ಕರೆ ಬೆಳ್ಳೂರು, ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ.
ಬಾಲಸುಬ್ರಮಣ್ಯ ಅವರಿಂದ ತರಬೇತಿ ಪಡೆದ ಕೊಕ್ಕರೆ ಬೆಳ್ಳೂರು ಶಾಲೆಯ 40 ಮಂದಿ ಮಕ್ಕಳು ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿರುತ್ತಾರೆ. 3 ವಿದ್ಯಾರ್ಥಿನಿಯರು ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟ 2015 ಬೆಳ್ಳಿ ಪದಕ ಸಾಧನೆಗಾಗಿ ತಲಾ 2 ಲಕ್ಷ ರೂ. ನಗದು ಬಹುಮಾನ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ. ಇನ್ನುಳಿದಂತೆ ಶಾಲೆಯ ಕ್ರೀಡಾಪಟುಗಳು ಕಬಡ್ಡಿ, ಥ್ರೋ ಬಾಲ್‌ನಲ್ಲಿ ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಬಾಚಿಕೊಂಡ ಪದಕಗಳು ನೂರಾರು. ಕ್ರೀಡಾ ಸಾಧನೆಯಿಂದ 50ಕ್ಕೂ ಹೆಚ್ಚು ಮಂದಿಗೆ ಕ್ರೀಡಾ ಶಿಷ್ಯ ವೇತನವೂ ದೊರೆತಿದ್ದು, ಮುಂದಿನ ವ್ಯಾಸಂಗಕ್ಕೆ ನೆರವಾಗಿದೆ.
ಇಷ್ಟೆಲ್ಲಾ ಸಾಧನೆ ಮೆರೆದಿರುವುದನ್ನು ನೋಡಿದರೆ, ದೈಹಿಕ ಶಿಕ್ಷಕ ಬಾಲಸುಬ್ರಮಣ್ಯ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಕೊಂಚ ವಿಳಂಬವಾಗಿಯೇ ಬಂದಿದೆ ಎನ್ನಬಹುದು. ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳಲ್ಲಿ ಲಾಬಿಯೇ ಹೆಚ್ಚಿರುವ ಇಂತಹ ದಿನಗಳಲ್ಲಿ ಬಾಲಸುಬ್ರಮಣ್ಯ ಅವರನ್ನು ಸಾಧನೆ ಮೂಲಕವೇ ಗುರ್ತಿಸಿ, ಸನ್ಮಾನಿಸುತ್ತಿರುವುದು ಅವರ ಶಿಷ್ಯ ವೃಂದ, ಸ್ಥಳೀಯ ಶಾಲಾಭಿವೃದ್ಧಿ ಸಮಿತಿ, ಕೊಕ್ಕರೆ ಬೆಳ್ಳೂರು ಗ್ರಾಮಸ್ಥರಿಗೆ ಹರ್ಷ ಮೂಡಿಸಿದೆ.
ಇದನ್ನೂ ಓದಿ | Award | ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ಯಾವ ಜಿಲ್ಲೆಯ ಯಾರಿಗೆ ಗರಿ, ಶಿಕ್ಷಕರ ವೈಶಿಷ್ಟ್ಯವೇನು?