ಲೋಹಿತ್
ಮಡಿಕೇರಿ: ರಾಜ್ಯಕ್ಕೆ ಮಾದರಿಯಾದ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಸ್ಥಾಪಿಸಿದ ಶಿಕ್ಷಕ ಇಬ್ರಾಹಿಂ ಈ ಬಾರಿಯ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇವರು ವಿಜ್ಞಾನ ಶಿಕ್ಷಕರಾಗಿದ್ದಾರೆ. ಕಳೆದ 22 ವರ್ಷದಿಂದ ಶಿಕ್ಷಕ ವೃತ್ತಿಯಲ್ಲಿರುವ ಅವರು ಹೊಸ ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾಗಿದ್ದಾರೆ.
ಇವರೊಬ್ಬ ಕ್ರಿಯಾಶೀಲ ಶಿಕ್ಷಕರಾಗಿದ್ದು, ನೇರುಗಳಲೆ ಶಾಲೆಯನ್ನು ಜಿಲ್ಲೆಯ ಉತ್ತಮ ಶಾಲೆಗಳ ಪಟ್ಟಿಯಲ್ಲಿ ಗುರುತಿಸುವಂತೆ ಕೆಲಸ ಮಾಡಿದ್ದಾರೆ. ಇವರ ಪ್ರಯತ್ನದಿಂದ ಶಾಲೆಯಲ್ಲಿ ರಾಜ್ಯಕ್ಕೆ ಮಾದರಿಯಾದ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಸ್ಥಾಪನೆಯಾಗಿದೆ. ಕಳೆದ 10 ವರ್ಷಗಳಿಂದ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ 2019-20ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೋಧನೆಯಲ್ಲಿ ನೈಪುಣ್ಯತೆ
ವಿಜ್ಞಾನ ಶಿಕ್ಷಕರಾಗಿರುವ ಇಬ್ರಾಹಿಂ ಕೇವಲ ವಿಜ್ಞಾನ ವಿಭಾಗ ಮಾತ್ರವಲ್ಲದೆ, ಇತರ ಬೋಧನಾ ವಿಷಯಗಳಲ್ಲೂ ತಮ್ಮ ನೈಪುಣ್ಯತೆ ಪ್ರದರ್ಶಿಸಿದ್ದಾರೆ. ಇವರ ಸಹಕಾರದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆಯಲ್ಲಿ ಅತ್ಯಾಕರ್ಷಕ ಸಮಾಜ ವಿಜ್ಞಾನ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ. ಮಾತ್ರವಲ್ಲದೆ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಘಟಕ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಕೇವಲ ಶಿಕ್ಷಕ ವೃತ್ತಿಗೆ ಮಾತ್ರ ಸೀಮಿತವಾಗಿರದೆ ಇನ್ನೂ ಹತ್ತು ಕಲವಾರು ಸಮಾಜಿಕ ಕಾರ್ಯಗಳಲ್ಲಿ ಇಬ್ರಾಹಿಂ ತೊಡಗಿಸಿಕೊಂಡಿದ್ದಾರೆ. ಪರಿಸರ ಪ್ರೇಮಿಯಾಗಿರುವ ಇಬ್ರಾಹಿಂ ತನ್ನೂರು ಕೆಯ್ಯೂರಿನಲ್ಲಿ ಪೊರ್ಲುದ ಕೆಯ್ಯೂರು ವಿಷನ್ 2025 ಎನ್ನುವ ಸಂಘಟನೆಯಡಿಯಲ್ಲಿ ಊರ ಪರಿಸರ ಪ್ರೇಮಿಗಳೊಂದಿಗೆ ಸೇರಿಕೊಂಡು ಪ್ಲಾಸ್ಟಿಕ್ ಮುಕ್ತ ಮತ್ತು ಕಸಮುಕ್ತ ಗ್ರಾಮವಾಗಿಸಲು ಮತ್ತು ಹಸಿರು ಗ್ರಾಮವನ್ನಾಗಿಸಲು ಜಾಗೃತಿ ಮೂಡಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾವಂತ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನವರಾದ ಎಸ್.ಎಂ. ಇಬ್ರಾಹಿಂ ಕಳೆದ ೧೪ ವರ್ಷಗಳಿಂದ ನೇರುಗಳಲೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವರ್ತಕ ಮಹಮ್ಮದ್ ಶೇಖಮಲೆ ಹಾಗೂ ಸಾರಮ್ಮ ದಂಪತಿಗಳ 2ನೇ ಪುತ್ರರಾಗಿರುವ ಇಬ್ರಾಹಿಂ ಪುತ್ತೂರು ಅರಿಯಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪೆರ್ನಾಜೆಯ ಸೀತಾರಾಘವ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಜೂನಿಯರ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದಾರೆ.
ನಾನು ಕಷ್ಟ ಪಟ್ಟು ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲ. ಹಾಗೆ ನಾನು ಇಷ್ಟು ದೊಡ್ಡ ಗೌರವರ ಸ್ವೀಕರಿಸಲು ನಮ್ಮ ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಕೂಡ ಸಾಕಷ್ಟು ಸಹಕಾರ ನೀಡಿದ್ದಾರೆ.
– ಎಸ್.ಎಂ. ಇಬ್ರಾಹಿಂ | ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ, ಕೊಡಗು
ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿರುವ ಇಬ್ರಾಹಿಂ, ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳಗಂಗೋತ್ರಿಯಲ್ಲಿ ಕೆಮೆಸ್ಟ್ರಿಯಲ್ಲಿ ಎಂಎಸ್‌ಸಿ ಪೂರ್ಣಗೊಳಿಸಿದ್ದಾರೆ. ಚಿಕ್ಕಮಗಳೂರಿನ ಎಂಎಲ್‌ಎಂಎನ್ ಕಾಲೇಜಿನಲ್ಲಿ ಬಿಎಡ್ ಶಿಕ್ಷಣವನ್ನು ಪಡೆದಿದ್ದಾರೆ.
ಕೇರಳದ ಖಾಸಗಿ ಶಾಲೆಯಲ್ಲಿ 8 ವರ್ಷ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಇಬ್ರಾಹಿಂ, ಅಲ್ಲಿ ಮಾದರಿ ಪ್ರಯೋಗಾಲಯವೊಂದನ್ನು ಸ್ಥಾಪಿಸಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಂತರದಲ್ಲಿ ಸರ್ಕಾರಿ ಶಿಕ್ಷಕರಾಗಿ 2008 ಸೆಪ್ಟಂಬರ್‌ನಿಂದ ಕೊಡಗಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ರಾಹಿಂ ಸದ್ಯ ಪುತ್ತೂರು ಸಮೀಪದ ಕೆಯ್ಯೂರು ಗ್ರಾಮದಲ್ಲಿ ನೆಲೆಸಿದ್ದು, ವಾರಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದಾರೆ.
ವಿಭಿನ್ನ ಕಲಿಕಾ ಶೈಲಿಯಿಂದ ಹೆಸರುವಾಸಿಯಾಗಿರುವ ಇಬ್ರಾಹಿಂ, ಸರಳ ಸಜ್ಜನಿಕೆಯ ವ್ಯಕ್ತಿಯೂ ಹೌದು. ಪ್ರಶಸ್ತಿ ಬಂದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Award | ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ಯಾವ ಜಿಲ್ಲೆಯ ಯಾರಿಗೆ ಗರಿ, ಶಿಕ್ಷಕರ ವೈಶಿಷ್ಟ್ಯವೇನು?