Site icon Vistara News

Teachers Day | ನಿರ್ಗತಿಕ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿ ಗುರು ಹುದ್ದೆಗೆ ಗೌರವ ತಂದ ಗುರವ!

Teacher's Day

ಅನಿಲ್‌ ಕಾಜಗಾರ
ಬೆಳಗಾವಿ: “ಢಣಢಣ ಗಂಟೆ ಬಾರಿಸಿತು. ಶಾಲೆಗೆ ಹೋಗೋಣ, ಪಾಠ ಹೇಳೋಣ, ಮನೆಗೆ ಬರೋಣ!ʼʼ ಎಂಬ ಸಾಂಪ್ರದಾಯಿಕ ಶಿಸ್ತು ರೂಢಿಸಿಕೊಂಡ ಲಕ್ಷಾಂತರ ಶಿಕ್ಷಕರು ಸಿಗುತ್ತಾರೆ. ಆದರೆ “ಮಕ್ಕಳಿಗೆ ತಾಯಿಯೂ ಆಗೋಣ, ಶಾಲೆಗೆ ಕಾವಲಾಗೋಣ, ಸಮಾಜಕ್ಕೆ ಕನ್ನಡಿಯಾಗೋಣʼʼ ಎಂದು ನಿಲ್ಲುವವರು ವಿರಳ. ಇಂಥವರ ಸಾಲಿನಲ್ಲಿ ಬೆಳಗಾವಿಯ ವಡಗಾವಿ ಸರ್ಕಾರಿ ಪ್ರಾಥಮಿಕ ಶಾಲೆ (ನಂ.15) ಶಿಕ್ಷಕಿ ಸುಶೀಲಾ ಗುರವ ಕೂಡ ಒಬ್ಬರು.

ತಮ್ಮೊಳಗಿನ ಕಾಳಜಿ, ಕಕ್ಕುಲಾತಿಯಿಂದಲೇ ಹೆಸರಾದವರು ಇವರು. ನಾಲ್ಕು ಗೋಡೆಗಳ ಆಚೆಗೆ ಸಮಾಜಕ್ಕೂ ಶಿಕ್ಷಕರಾದವರು. ಗುರು ಎಂಬ ಹುದ್ದೆಗೇ ಗೌರವ ತಂದವರು. ಇಂಥ ಶಿಕ್ಷಕಿಯನ್ನು ಗುರುತಿಸಿರುವ ರಾಜ್ಯ ಸರ್ಕಾರ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಎಂಎ, ಬಿಇಡಿ ಪದವೀಧರೆ ಆಗಿರುವ ಸುಶೀಲಾ ಲಕ್ಷ್ಮಿಕಾಂತ ಗುರವ ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಶೀಲಾ ಗುರವ

ನಿರ್ಗತಿಕ ಹೆಣ್ಣು ಮಗಳಿಗೆ ಶಿಕ್ಷಣ
ಈ ಮೊದಲು ಸುಶೀಲಾ ಗುರವ ಬೆಳಗಾವಿ ತಾಲೂಕಿನ ಬಡಸ್ ಗ್ರಾಮದ‌ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ತಾಯಿ ಮುಖವನ್ನೇ ನೋಡದ ನಿರ್ಗತಿಕ ವಿದ್ಯಾರ್ಥಿನಿ ಸಂಗೀತಾ ಸುಣಗಾರಗೆ ಆಸರೆ ಕೊಟ್ಟು ಸಲುಹಿ 6 ನೇ ತರಗತಿಯಿಂದ ಉನ್ನತ ಹಂತದವರೆಗೆ ಶಿಕ್ಷಣ ಕೊಡಿಸಿದ್ದಾರೆ. ಆ ವಿದ್ಯಾರ್ಥಿನಿ ಈಗ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ!

ಶಾಲಾ ಆಸ್ತಿಯ ರಕ್ಷಣೆ
2010 ರಿಂದ 2013 ರ ಅವಧಿಯಲ್ಲಿ ಸುಶೀಲಾ ಗುರವ ವಡಗಾವಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಪ್ರಧಾನ ಗುರುಮಾತೆ ಆಗಿಯೂ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿಯೇ ಸ್ಥಳೀಯರು ಮಂದಿರಗಳನ್ನು ನಿರ್ಮಿಸಿದ್ದರು. ಆಗ ಎಸ್‌ಡಿಎಂಸಿ ಸಹಕಾರ ಪಡೆದ ಶಿಕ್ಷಕಿ ಗುರವ ಕೋರ್ಟ್ ಮೆಟ್ಟಿಲೇರಿ, ಶಾಲೆಯ ಜಾಗ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದರು.

ಕೊನೆಗೆ ಶಾಲಾ ಆವರಣದಲ್ಲಿರುವ ಮಂದಿರಗಳ ತೆರವುಗೊಳಿಸುವಂತೆ ಕೋರ್ಟ್ ಆದೇಶ ಹೊರಡಿಸಿತ್ತು. ಕೊಠಡಿಗಳ ಸಮಸ್ಯೆ ಇದ್ದ ಕಾರಣಕ್ಕೆ ಇಲಾಖೆಯಿಂದ ಎರಡು ಹೊಸ ಕೊಠಡಿಗಳನ್ನು ಮಂಜೂರಾತಿ ಮಾಡಿಸಿ ನಿರ್ಮಿಸಲಾಯಿತು. ಆರನೇ ತರಗತಿಯವರೆಗೆ ಮಾತ್ರ ನಡೆಯುತ್ತಿದ್ದ ವರ್ಗಗಳನ್ನು ಉನ್ನತೀಕರಿಸಿ ಏಳನೇ ತರಗತಿಯನ್ನು 2011-12 ನೇ ಸಾಲಿನಲ್ಲಿ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವೇತನದಲ್ಲೇ ಮಕ್ಕಳ ಕಲಿಕಾ ಸಾಮಗ್ರಿ!
ಕೋವಿಡ್ ಕಾರಣಕ್ಕೆ ರಾಜ್ಯ ಸರ್ಕಾರ ಶಾಲೆಗಳಿಗೆ ರಜೆ ಘೋಷಣೆ ಮಾಡಿತ್ತು. 2020-21 ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಗಮ ಯೋಜನೆ ಜಾರಿಗೆ ತಂದಿತ್ತು. ಇವರ ವರ್ಗಕ್ಕೆ ಸಂಬಂಧಿಸಿದ ಮಕ್ಕಳು ಕೋವಿಡ್ ವೇಳೆ ಮನೆಯಲ್ಲಿ ಅಭ್ಯಾಸದಲ್ಲಿ ತೊಡಗುವಂತೆ ಒಂದು ತಿಂಗಳ ವೇತನವನ್ನು ವ್ಯಯಿಸಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸಿದ್ದರು.

ಮಕ್ಕಳು ಕಲಿಕೆಯಲ್ಲಿ ತೊಡಗುವಂತೆ ನೋಡಿಕೊಂಡಿದ್ದರು. ಈ ಒಂದು ವಿಶೇಷ ಕಾರ್ಯ ಇಲಾಖೆ ಅಧಿಕಾರಿಗಳ‌ ಪ್ರಶಂಸೆಗೆ ಕಾರಣವಾಗಿತ್ತು. ಕೋವಿಡ್ 19 ಸಮಯದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡ ವಿದ್ಯಾಗಮ 2020 ಭೂಮಿಗೆ ಪುಸ್ತಕ ಹೊರತಂದಿದ್ದಾರೆ. ಪ್ರತಿ ವರ್ಷ ಇವರ ವರ್ಗದ ಮಕ್ಕಳಿಗೆ ಅವಶ್ಯಕ ಪಠ್ಯ ಸಲಕರಣೆ ಒದಗಿಸುತ್ತಾ ಬಂದಿದ್ದಾರೆ. 7ನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲ ಮಕ್ಕಳಿಗೂ ಪದಕೋಶ, ಕಂಪಾಸ್ ಬಾಕ್ಸ್ ನೀಡುತ್ತ ಬಂದಿದ್ದಾರೆ. “ಟಂಕಾಸಿರಿʼʼ ಹೆಸರಿನ ಕೃತಿಯನ್ನು ಇವರು ರಚಿಸಿದ್ದಾರೆ.

ಗುರುವ ಅವರನ್ನು ಅರಸಿ ಬಂದ ಪ್ರಶಸ್ತಿಗಳು
ಸುಶೀಲಾ ಗುರವ ಅವರ ಶೈಕ್ಷಣಿಕ ಸಾಧನೆ ಮೆಚ್ಚಿ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಡಾ. ಸ. ಜ ನಾಗಲೋಟಿಮಠ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸಾವಿತ್ರಿಬಾಯಿಪುಲೆ ಜಿಲ್ಲಾ ಪ್ರಶಸ್ತಿ, ವಿದ್ಯಾವಾರಿಧಿ ಪ್ರಶಸ್ತಿ, ಕಾಯಕಶ್ರೀ ಪ್ರಶಸ್ತಿ, ಹೆಣ್ಣು ಜಗದ ಕಣ್ಣು ವೇದಿಕೆಯಿಂದ ಶ್ರೇಷ್ಠ ಶಿಕ್ಷಣ ರತ್ನ ಪ್ರಶಸ್ತಿ, ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನಿಂದ ಜಿಲ್ಲಾ ಗಡಿನಾಡ ಸಾಧಕ ರತ್ನ ಪ್ರಶಸ್ತಿ, ನವದೆಹಲಿಯ ಡಾಕ್ಟರ್ ಪುಟ್ಟರಾಜ ಸೇವಾ ಸಮಿತಿಯಿಂದ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ, ಹುಬ್ಬಳ್ಳಿಯ ಕರ್ನಾಟಕ ಸೋಶಿಯಲ್ ಕ್ಲಬ್ ವತಿಯಿಂದ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ಡಾ. ಎಸ್ ರಾಧಾಕೃಷ್ಣನ್ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಮ್ಯಾಕ್ಸ್ ಇನ್ಸೂರೆನ್ಸ್‌ನಿಂದ ಶಿಕ್ಷಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ | Teacher’s Day | ಪಾಳುಬಿದ್ದಿದ್ದ ಕಟ್ಟಡವನ್ನು ಮಾದರಿ ಶಾಲೆಯಾಗಿಸಿದ ಚಿಕ್ಕಬಳ್ಳಾಪುರದ ಶಿಕ್ಷಕ ಚಂದ್ರಶೇಖರ್‌

Exit mobile version